ಗೋರಕ್ಷಕರ ಹಿಂಸಾ ಕೃತ್ಯಗಳ ವಿರುದ್ಧ ಕ್ರಮಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Update: 2016-08-14 12:31 GMT

ಹೊಸದಿಲ್ಲಿ, ಆ.14: ಹಿಂಸೆಯನ್ನು ಹರಡಿ, ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿರುವ ತಥಾಕಥಿತ ಗೋರಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ಕೆಲವು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿರುವ ಅರ್ಜಿಯೊಂದು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದೆ.

ಈ ಗೋರಕ್ಷಕರ ಹಿಂಸಾಚಾರವು, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ, ಅಂತಹ ಜನರನ್ನು ’ಸಮಾಜ ಘಾತುಕರು’ ಎಂದು ಘೋಷಿಸುವಲ್ಲಿಯ ವರೆಗೆ ಮುಂದುವರಿದಿದೆಯೆಂದು ಕಾಂಗ್ರೆಸ್ ಕಾರ್ಯಕರ್ತ ತೆಹ್ಸಿನ್ ಎಸ್. ಪೂನಾವಾಲಾ ಎಂಬವರು ದಾಖಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಗೋರಕ್ಷಣೆಯ ಹೆಸರಿನಲ್ಲಿ ಈ ಗುಂಪುಗಳು ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿವೆ. ಸಾಮಾಜಿಕ ಸೌಹಾರ್ದ, ಸಾರ್ವಜನಿಕ ನೈತಿಕತೆ, ಕಾನೂನು ಹಾಗೂ ಸುವ್ಯವಸ್ಥೆಯ ಹಿತಾಸಕ್ತಿಯಿಂದ ಅವರನ್ನು ನಿಯಂತ್ರಿಸುವ ಹಾಗೂ ನಿಷೇಧಿಸುವ ಅಗತ್ಯವಿದೆಯೆಂದು ಅದರಲ್ಲಿ ಆರೋಪಿಸಲಾಗಿದೆ.

 ತಥಾಕಥಿತ ಗೋರಕ್ಷಕ ಗುಂಪುಗಳು ಮಾಡುತ್ತಿರುವ ಹಾವಳಿ ದೇಶದ ಮೂಲೆ ಮೂಲೆಗೆ ವೇಗವಾಗಿ ಹರಡುತ್ತಿದೆ. ಅದರಿಂದ ವಿವಿಧ ಸಮುದಾಯಗಳು ಹಾಗೂ ಜಾತಿಗಳ ನಡುವೆ ಅಸಾಮರಸ್ಯ ಸೃಷ್ಟಿಯಾಗುತ್ತಿದೆಯೆಂದು ಅರ್ಜಿ ದೂರಿದೆ.

ಗುಜರಾತ್ ಪ್ರಾಣಿ ಹಿಂಸೆ ತಡೆ ಕಾಯ್ದೆ 1954ರ ಸೆ.12, ಮಹಾರಾಷ್ಟ್ರ ಪ್ರಾಣಿ ಹಿಂಸೆ ತಡೆ ಕಾಯ್ದೆ 1976 ಸೆ.13 ಹಾಗೂ ಕರ್ನಾಟಕ ಗೋವಧೆ ತಡೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ-1964ರ ಸೆ.15ಗಳನ್ನು ‘ಅಸಾಂವಿಧಾನಿಕ’ ಎಂದು ಘೋಷಿಸುವಂತೆ ಅದು ನ್ಯಾಯಾಲಯವನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News