×
Ad

ಶಾಲೆಗೆ ಮೊಸಳೆಗಳಿರುವ ತೊರೆಯಲ್ಲಿ ಸೊಂಟದವರೆಗಿನ ನೀರಿನಲ್ಲೇ ನಡೆದುಕೊಂಡು ಹೋಗುತ್ತಿರುವ ಮಕ್ಕಳು!

Update: 2016-08-14 19:49 IST

ಕೇಂದ್ರಪಾಡಾ(ಒಡಿಶಾ),ಆ.14: ಕೇಂದ್ರಪಾಡಾ ಜಿಲ್ಲೆಯ ರಾಜಕನಿಕಾ ತಾಲೂಕಿನ ಕುಗ್ರಾಮ ಬುರುಡಿಯಾದ ಸೇತುವೆ ವಂಚಿತ ಮಕ್ಕಳು ಪ್ರತಿದಿನ ಶಾಲೆಗೆ ಹೋಗಲು ಮೊಸಳೆಗಳ ಭೀತಿಯಿರುವ ಮಡುವಿನಲ್ಲಿ ಸೊಂಟದವರೆಗಿನ ನೀರಿನಲ್ಲೇ ನಡೆಯಬೇಕಾಗಿದೆ.
ಯಾವುದೇ ಸಮಯದಲ್ಲಿ ಮೊಸಳೆಗಳು ದಾಳಿ ನಡೆಸುವ ಬೆದರಿಕೆಯಿರುವುದರಿಂದ ಈ ಪ್ರಯಾಣ ಮಕ್ಕಳ ಪಾಲಿಗೆ ಬಲು ಅಪಾಯಕಾರಿಯಾಗಿದೆ.
 ಗ್ರಾಮದಲ್ಲಿ ಶಾಲೆಯಿಲ್ಲ,ಹೀಗಾಗಿ ಮಕ್ಕಳು ಒಂದು ಕಿ.ಮೀ.ದೂರದ ತರಸಾ ಗ್ರಾಮದಲ್ಲಿರುವ ಶಾಲೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಎರಡೂ ಗ್ರಾಮಗಳನ್ನು ಪ್ರತ್ಯೇಕಿಸಿರುವ ತೊರೆಯನ್ನು ದಾಟುವುದು ಈ ಮಕ್ಕಳ ಪಾಲಿಗೆ ಅನಿವಾರ್ಯ ಕರ್ಮವಾಗಿದೆ. ಈ ಅನಿವಾರ್ಯ ಸಂಕಟಕ್ಕೆ ಸಿಲುಕಿರುವ ಪೋಷಕರು ಮಕ್ಕಳ ಸುರಕ್ಷತೆಗಾಗಿ ತಾವೂ ಅವರೊಂದಿಗೆ ತೆರಳುತ್ತಾರೆ.

ಖರಸ್ರೋತ ನದಿಯಲ್ಲಿ ಭರತವಿರುವಾಗ ತೊರೆಯಲ್ಲಿಯೂ ನೀರು ಉಕ್ಕಿ ಹರಿಯುತ್ತದೆ, ಇಂತಹ ಸಂದರ್ಭಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ.
ತೊರೆಗೆ ಅಡ್ಡವಾಗಿ ಸೇತುವೆಯೊಂದನ್ನು ನಿರ್ಮಿಸುವ ಪ್ರಸ್ತಾವನೆಗೆ ಗ್ರಾಮ ಪಂಚಾಯತ್ ಮಂಜೂರಿ ನೀಡಿದ್ದು, ಕಾಮಗಾರಿ ಆರಂಭಿಸಲು ಹಣಕಾಸು ಬಿಡುಗಡೆಗಾಗಿ ಕಾಯುತ್ತಿದ್ದೇವೆ ಎಂದು ತರಸಾ ಗ್ರಾ.ಪಂ.ಅಧ್ಯಕ್ಷೆ ಸಂಯುಕ್ತಾ ನಾಯಕ್ ಹೇಳಿದರು.

ಮಕ್ಕಳ ಸುರಕ್ಷತೆಯ ಬಗ್ಗೆ ನಮಗೆ ಕಳವಳವಿದೆ. ಹೀಗಾಗಿ ಶಾಶ್ವತ ಸೇತುವೆ ನಿರ್ಮಾಣಗೊಳ್ಳುವವರೆಗೆ ಶೀಘ್ರವೇ ಬಿದಿರಿನ ತಾತ್ಕಾಲಿಕ ಸೇತುವೆಯನ್ನು ರಚಿಸಲಾಗುವುದು ಎಂದು ತಾಲೂಕು ಬಿಡಿಒ ಪ್ರಶಾಂತ ಕುಮಾರ ರೌತ್ ಸುದ್ದಿಸಂಸ್ಥೆಗೆ ತಿಳಿಸಿದರು.
 ಮಕ್ಕಳು ಶಾಲೆಗೆ ಹೋಗುವಾಗ ಅವರ ಸುರಕ್ಷತೆಗಾಗಿ ನಾವು ದೇವರನ್ನು ಬೇಡಿಕೊಳ್ಳುತ್ತೇವೆ. ನಮಗೆ ಬೇರೆ ಯಾವುದೇ ಪರ್ಯಾಯವಿಲ್ಲ. ಮೊಸಳೆಗಳ ಭೀತಿಯಿರುವ ತೊರೆಯನ್ನು ದಾಟುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಪೋಷಕ ಪ್ರೇಮಾನಂದ ಸಾಹು ಗೋಳು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News