×
Ad

ಅಫ್ಘಾನಿಸ್ತಾನದ ಭಾರತೀಯ ಕಾನ್ಸುಲೇಟ್ ದಾಳಿ ತಡೆದಿದ್ದ 10 ಐಟಿಬಿಪಿ ಯೋಧರಿಗೆ ಶೌರ್ಯ ಪದಕ

Update: 2016-08-15 23:47 IST

ಹೊಸದಿಲ್ಲಿ, ಆ.15: ಅಫ್ಘಾನಿಸ್ತಾನದ ಭಾರತೀಯ ಕಾನ್ಸುಲೇಟ್ ಕಚೇರಿಗಳ ಮೇಲೆ ಭಯೋತ್ಪಾದಕರ ದಾಳಿಯನ್ನು ಸಾಹಸದಿಂದ ತಡೆದಿದ್ದ ಐಟಿಬಿಪಿಯ 10 ಮಂದಿ ಕಮಾಂಡೊಗಳಿಗೆ 70ನೆ ಸ್ವಾತಂತ್ರೋತ್ಸವದ ಮುನ್ನಾ ದಿನ ಉನ್ನತ ಪೊಲೀಸ್ ಶೌರ್ಯ ಪದಕಗಳನ್ನು ಪ್ರದಾನಿಸಲಾಗಿದೆ.

ಜನವರಿ 3 ಹಾಗೂ ಮಾರ್ಚ್ 2ರಂದು ಮಝರ್-ಎ-ಶರೀಫ್ ಹಾಗೂ ಜಲಾಲಾಬಾದ್‌ಗಳ ಭಾರತೀಯ ಕಾನ್ಸುಲೇಟ್‌ಗಳ ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು. ಕಾಬೂಲ್‌ನ ಭಾರತೀಯ ದೂತಾವಾಸ, ಮಝರ್-ಎ-ಶರೀಫ್, ಜಲಾಲಾಬಾದ್, ಹೆರಾತ್ ಹಾಗೂ ಕಂದಹಾರ್‌ಗಳ ರಾಜತಾಂತ್ರಿಕ ಕಚೇರಿಗಳ ಭದ್ರತಾ ಹೊಣೆಯನ್ನು ಇಂಡೋ-ಟಿಬೆಟಿಯನ್ ಗಡಿ ಪೊಲೀಸರಿಗೆ ವಹಿಸಲಾಗಿತ್ತು.
ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಸೌಲಭ್ಯಗಳಿಗೆ ಅಲ್-ಖಾಯ್ದಾ ಹಾಗೂ ಇತರ ಸಂಯೋಜಿತ ಭಯೋತ್ಪಾದಕ ಸಂಘಟನೆಗಳ ಬೆದರಿಕೆಯಿದೆ.
ಐಟಿಬಿಪಿಯ ನಿರೀಕ್ಷಕ ಸುಭಾಶ್ಚಂದ್ರ, ಹೆಡ್‌ಕಾನ್‌ಸ್ಟೇಬಲ್ ವೀರೇಂದ್ರ ಸಿಂಗ್ ಹಾಗೂ ಕಾನ್‌ಸ್ಟೇಬಲ್ ಸುನೀಲ್ ಬಿಶ್ತ್ ಎಂಬವರಿಗೆ ದೇಶದ ಉನ್ನತ ರಾಷ್ಟ್ರಪತಿ ಪೊಲೀಸ್ ಶೌರ್ಯ ಪದಕ ದೊರೆತಿದ್ದರೆ, ನಿರೀಕ್ಷಕ ದಿನೇಶ್ ಶರ್ಮ, ಹೆಡ್‌ಕಾನ್‌ಸ್ಟೇಬಲ್ ಮೊಹರ್ಧ್ವಜ್, ಕಾನ್‌ಸ್ಟೇಬಲ್‌ಗಳಾದ ಸಂದೀಪ್ ಘೋಷ್, ಹರಿವಂದನ್ ಗುರುನಾನಿ, ಸತೀಶ್ ಕುಮಾರ್, ರವೀಂದರ್ ಸಿಂಗ್ ಹಾಗೂ ಭೂಪೇಂದರ್ ಸಿಂಗ್ ಎಂಬವರಿಗೆ ಪೊಲೀಸ್ ಶೌರ್ಯ ಪದಕಗಳು ಲಭಿಸಿವೆ.
ತಮ್ಮ ಪ್ರಾಣವನ್ನು ಲೆಕ್ಕಿಸದೆ ವೈರಿಗಳ ತೀವ್ರ ಬಂದೂಕು ಹಾಗೂ ರಾಕೆಟ್ ದಾಳಿಗಳಿಗೆ ಎದೆಯೊಡ್ಡಿ ಭಯೋತ್ಪಾದಕರನ್ನು ಕೊಂದು, ಕೆಲವರನ್ನು ಗಾಯಗೊಳಿಸಿ ಇತರ ಫಿದಾಯೀನ್‌ಗಳು ಪ್ರಾಣ ರಕ್ಷಣೆಗಾಗಿ ಸಮೀಪದ ಕಟ್ಟಡಗಳಿಗೆ ಪಲಾಯನ ಮಾಡುವಂತೆ ಈ ಯೋಧರು ಮಾಡಿದ್ದರೆಂದು ಪರ್ವತ ಪ್ರಾಂತಗಳಲ್ಲಿ ಕಾರ್ಯಾಚರಣೆಗೆ ತರಬೇತಿ ಪಡೆದಿರುವ ಈ ಸಾಹಸಿಗಳಿಗೆ ನೀಡಲಾಗಿರುವ ಪ್ರಶಸ್ತಿ ಘಟಕದಲ್ಲಿ ವಿವರಿಸಲಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News