×
Ad

ಕೆಂಪುಕೋಟೆಯ ಮೇಲೆ ಕಪ್ಪುಗಾಳಿಪಟ

Update: 2016-08-15 23:48 IST

ಹೊಸದಿಲ್ಲಿ, ಆ.15: ಪ್ರಧಾನಿ ನರೇಂದ್ರ ಮೋದಿ 70ನೆ ಸ್ವಾತಂತ್ರ ದಿನೋತ್ಸವ ಭಾಷಣ ಮಾಡಲು ಕೆಂಪುಕೋಟೆಗೆ ಆಗಮಿಸುವುದಕ್ಕೆ ಸ್ವಲ್ಪ ಮುಂಚಿತವಾಗಿ ಕೆಂಪುಕೋಟೆಯ ಮೇಲೆ ಕಪ್ಪುಗಾಳಿಪಟ ಹಾರಾಡುತ್ತಿದ್ದುದು ಗೊಂದಲಕ್ಕೆ ಕಾರಣವಾಯಿತು.

ಕೆಂಪುಕೋಟೆಯ ಮೇಲೆ ಹಾರಾಡುತ್ತಿದ್ದ ಈ ಕಪ್ಪುಗಾಳಿಪಟವನ್ನು ಸಾವಿರಾರು ಮಂದಿ ಭದ್ರತಾ ಸಿಬ್ಬಂದಿ ಸಿಸಿಟಿವಿ ಕ್ಯಾಮರಾ ಮೂಲಕ ನಿಗಾ ವಹಿಸಿ ವೀಕ್ಷಿಸಿದರು. ಕೆಲವೇ ನಿಮಿಷಗಳಲ್ಲಿ ಭದ್ರತಾ ಸಿಬ್ಬಂದಿ ಗಾಳಿಪಟವನ್ನು ಕೆಳಕ್ಕೆ ಎಳೆಯುವಲ್ಲಿ ಯಶಸ್ವಿಯಾದರು.
ಪ್ರಧಾನಿ ಆಗಮನಕ್ಕೆ ಮುನ್ನ ಭದ್ರತಾ ಸಿಬ್ಬಂದಿ ಹೆಲಿಕಾಪ್ಟರ್‌ಗಳಲ್ಲಿ ಕಣ್ಗಾವಲು ಇರಿಸಿದ್ದರು. ಸ್ವಾತಂತ್ರ ದಿನಾಚರಣೆ ಸಮಾರಂಭದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳಲು ಆಗಮಿಸಿದ್ದರು. ಕೆಂಪುಕೋಟೆ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಕಾವಲು ಹಾಕಲಾಗಿತ್ತು. ನೂರಾರು ಸಿಸಿ ಟಿವಿ ಕ್ಯಾಮರಾಗಳು ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದವು.
ಮೋದಿಗೆ ಗುಂಡುನಿರೋಧಕ ಕವಚ
ಪ್ರಧಾನಿ ನರೇಂದ್ರ ಮೋದಿ ತಮ್ಮ ಮೂರನೇ ವರ್ಷದ ಸ್ವಾತಂತ್ರೋತ್ಸವ ಭಾಷಣ ಮಾಡಲು ಗುಂಡುನಿರೋಧಕ ಕವಚದ ಮೊರೆ ಹೋದರು. ಹಲವು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸಶಸ್ತ್ರ ಪೊಲೀಸರು ಮತ್ತು ಅರೆಮಿಲಿಟರಿ ಸಿಬ್ಬಂದಿಯ ಸರ್ಪಗಾವಲು ಕಂಡುಬರುತ್ತಿತ್ತು. ಕೇವಲ ಅಧಿಕೃತ ವಾಹನಗಳಿಗೆ ಮಾತ್ರ ಸಮಾರಂಭ ಸ್ಥಳಕ್ಕೆ ಆಗಮಿಸಲು ಅವಕಾಶ ನೀಡಲಾಗಿತ್ತು.
ಸುಮಾರು 40 ಸಾವಿರ ಮಂದಿ, ಅತಿಗಣ್ಯರು, ಶಾಲಾ ಮಕ್ಕಳು ಭಾಗವಹಿಸಿದ್ದರು. ಜನ ಆಸೀನವಾದ ಪ್ರದೇಶದ ಮೇಲೂ ಪೊಲೀಸರು ಕಣ್ಗಾವಲು ಇರಿಸಿದ್ದರು. ಎಂಟು ಸಾವಿರ ಮಂದಿ ದಿಲ್ಲಿ ಪೊಲೀಸ್ ಸಿಬ್ಬಂದಿ, ಅರೆಸೇನಾ ಪಡೆ ಸಿಬ್ಬಂದಿ, ಎಸ್‌ಪಿಜಿ, ಎನ್‌ಎಸ್‌ಜಿ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News