×
Ad

ಭಯೋತ್ಪಾದನೆ ಕುರಿತು ಪಾಕ್ ಜೊತೆ ಮಾತುಕತೆಗೆ ಸಿದ್ಧವೇ ಹೊರತು ಕಾಶ್ಮೀರ ಕುರಿತಲ್ಲ:ಭಾರತ

Update: 2016-08-17 22:29 IST

ಹೊಸದಿಲ್ಲಿ,ಆ.17: ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಜಮ್ಮು-ಕಾಶ್ಮೀರದಲ್ಲಿನ ಗಡಿಯಾಚೆಯ ಭಯೋತ್ಪಾದನೆಯ ಕುರಿತು ಚರ್ಚಿಸಲು ಪಾಕ್‌ಗೆ ಪ್ರಯಾಣಿಸಲು ಸಿದ್ಧರಿದ್ದಾರೆ ಎಂದು ಭಾರತವು ಇಂದು ದೃಢಪಡಿಸಿತು.

ಕಾಶ್ಮೀರ ವಿವಾದ ಕುರಿತು ಚರ್ಚಿಸುವ ಪಾಕಿಸ್ತಾನದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಅದು, ಆ ಕುರಿತು ಮಾತನಾಡುವ ಯಾವುದೇ ಹಕ್ಕನ್ನು ಆ ರಾಷ್ಟ್ರವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಎರಡು ದಿನಗಳ ಹಿಂದಷ್ಟೇ ಭಾರತೀಯ ರಾಯಭಾರಿಯನ್ನು ಕರೆಸಿಕೊಂಡಿದ್ದ ಪಾಕ್ ವಿದೇಶಾಂಗ ಕಾರ್ಯದರ್ಶಿ ಐಝಾಝ್ ಅಹ್ಮದ್ ಚೌಧರಿ ಅವರು ಮಾತುಕತೆಗಾಗಿ ಜೈಶಂಕರ್ ಅವರನ್ನು ಆಹ್ವಾನಿಸುವ ಪತ್ರವನ್ನು ಹಸ್ತಾಂತರಿಸಿದ್ದರು.

ಜಮ್ಮು-ಕಾಶ್ಮೀರದಲ್ಲಿನ ಪ್ರಚಲಿತ ಸ್ಥಿತಿಗೆ ಗಡಿಯಾಚೆಯ ಭಯೋತ್ಪಾದನೆಗೆ ಸಂಬಂಧಿತ ಅಂಶಗಳು ಪ್ರಮುಖ ಕಾರಣವಾಗಿರುವುದರಿಂದ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಚರ್ಚೆಗಳಲ್ಲಿ ಅವು ಪ್ರಮುಖವಾಗಿರಬೇಕು ಎಂದು ನಾವು ಪ್ರಸ್ತಾಪಿಸಿದ್ದೇವೆ. ಅಲ್ಲದೆ ಜಮ್ಮು-ಕಾಶ್ಮೀರದಲ್ಲಿಯ ಸ್ಥಿತಿಗೆ ಸಂಬಂಧಿಸಿದಂತೆ ಅವರ ಸ್ವಾರ್ಥ ಸಾಧನೆಯ ಆರೋಪಗಳನ್ನು ಭಾರತ ಸರಕಾರವು ಸಂಪೂರ್ಣವಾಗಿ ತಿರಸ್ಕರಿಸಿದೆ ಎನುವುದನ್ನು ನಾವು ಅವರಿಗೆ ತಿಳಿಸಿದ್ದೇವೆ. ಜಮ್ಮು-ಕಾಶ್ಮೀರವು ಭಾರತದ ಅಖಂಡ ಭಾಗವಾಗಿದ್ದು,ಅಲ್ಲಿ ಪಾಕಿಸ್ತಾನಕ್ಕೆ ಯಾವುದೇ ಅಧಿಕಾರ ಸ್ಥಾನವಿಲ್ಲ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿದವು.


ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸ್ವಾತಂತ್ರೋತ್ಸವ ಸಮಾರಂಭದ ಭಾಷಣದಲ್ಲಿ ಬಲೂಚಿಸ್ತಾನದಲ್ಲಿಯ ಸ್ಥಿತಿಯನ್ನು ಪ್ರಸ್ತಾಪಿಸಿ ಭಾರತದ ಕಾಶ್ಮೀರ ನೀತಿಯಲ್ಲಿ ಮಹತ್ತರ ಬದಲಾವಣೆಯ ಸಂಕೇತವನ್ನು ನೀಡಿದ್ದ ಬೆನ್ನಿಗೇ ಪಾಕಿಸ್ತಾನವು ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮತುಕತೆಗಳ ಕೊಡುಗೆಯನ್ನು ಮುಂದಿರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News