ಕಾದಂಬರಿ

Update: 2016-08-17 17:30 GMT

--ದೊಡ್ಡಮ್ಮನ ಕಣ್ಣಲ್ಲಿ ನೋವಿನ ಆಳ--

‘‘ನಾನು ಹೋಗುವುದಿಲ್ಲ...ನೀವೆಷ್ಟು ಹೇಳಿದರೂ ನಾನು ಹೋಗುವುದಿಲ್ಲ..., ನನಗೆ ಅವರ ಮುಖ ನೋಡಲು ಇಷ್ಟವಿಲ್ಲ...’’ ಅಪರಿಚಿತ ಧ್ವನಿ.
‘‘ಯಾಕೆ ಹೋಗುವುದಿಲ್ಲ...ಅವನು ನಿನ್ನ ಗಂಡ ಅಲ್ಲವಾ... ಅವನ ಕೊನೆಯ ದಿನಗಳಲ್ಲಾದರೂ ನಿನಗೆ ಅವನನ್ನು ಕ್ಷಮಿಸಬಾರದಾ...’’ ಅಜ್ಜಿಯ ಮಾತು.
ಮಧ್ಯಾಹ್ನ ಊಟ ಮಾಡಿ ಮಲಗಿದ್ದ ತಾಹಿರಾಳಿಗೆ ಇಡೀ ಮನೆಯಲ್ಲಿ ಪ್ರತಿಧ್ವನಿಸುತ್ತಿದ್ದ ಮಾತಿಗೆ ಎಚ್ಚರವಾಯಿತು. ಮಲಗಿದಲ್ಲಿಂದಲೇ ತಲೆ ಎತ್ತಿ ಕಿವಿಯಾನಿಸಿದಳು.
‘‘ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ... ಎಲ್ಲ ಆವತ್ತಿಗೇ ಮುಗಿದಿದೆ...’’
‘‘ಎಂಥ ಮುಗಿಯುವುದು... ಮುಗಿಯಲಿಕ್ಕೆ ಅದೇನು ಮಕ್ಕಳಾಟವಾ... ನೀನು ಹಟ ಬಿಡಬೇಕು... ಹೆಣ್ಣಿಗೆ ಇಷ್ಟೊಂದು ಹಟ ಇರಬಾರದು...’’ ಅಜ್ಜಿಯ ಮಾತಿನಲ್ಲಿ ಕೋಪವಿತ್ತು.
ಯಾರ ಜೊತೆ ಮಾತನಾಡ್ತಾ ಇದ್ದಾರೆ ಅಜ್ಜಿ! ತಾಹಿರಾ ಎದ್ದು ಕುಳಿತಳು. ಅವಳಿಗೆ ಅಜ್ಜಿ ಜೊತೆ ಯಾರೋ ಜಗಳ ಮಾಡ್ತಾ ಇದ್ದಾರೆ ಅನಿಸಿತು. ಯಾರಿರಬಹುದು... ಮಾಮಿ? ಮಾಮಿಯ ಧ್ವನಿಯಲ್ಲ ಅದು.
‘‘ಹೋಗು ಒಮ್ಮೆ ಹೋಗಿ ಅವನ ಮುಖ ನೋಡಿ ಬಾ. ಒಂದು ಸಲ ನಿನ್ನ ಮುಖವನ್ನು ಅವನಿಗೆ ತೋರಿಸಿ ಬಾ...’’ ಅಜ್ಜಿಯ ಮಾತಿನಲ್ಲಿ ಆಜ್ಞೆ ಇತ್ತು.
‘‘ನೀವೆಲ್ಲ ಕೂಡಿ ನನ್ನನ್ನು ಕೊಂದರೂ ಸರಿ... ನಾನು ಹೋಗುವುದಿಲ್ಲ’’
ಮಾತು ಏರುಧ್ವನಿ ಪಡೆಯುತ್ತಿತ್ತು. ಜಗಳದತ್ತ ತಿರುಗುತ್ತಿತ್ತು.
ತಾಹಿರಾ ಎದ್ದು ಮೆಲ್ಲ ಕೋಣೆಯಿಂದ ಹೊರ ಬಂದಳು. ಸುತ್ತ ನೋಡಿದಳು. ಯಾರೂ ಕಾಣಲಿಲ್ಲ.
‘‘ಏನಾಗಿದೆ ನಿನಗೆ?’’ ಅಜ್ಜಿಯ ಪ್ರಶ್ನೆ
‘‘ಹುಚ್ಚು ಹಿಡಿದಿದೆ... ಹುಚ್ಚು ಹಿಡಿದಿದೆ ನನಗೆ... ನನ್ನ ಹೃದಯದಲ್ಲಿ ಉರಿಯುತ್ತಿರುವ ಬೆಂಕಿ, ಅದು ನನಗೆ ಮಾತ್ರ ಗೊತ್ತು. ಆ ನೋವು ನಿಮಗೆ ಯಾರಿಗೂ ಅರ್ಥವಾಗುವುದಿಲ್ಲ. ನಾನು ಪ್ರತಿ ಕ್ಷಣವೂ ಅನುಭವಿಸುತ್ತಿರುವ ಹಿಂಸೆ, ಅವಮಾನ, ಯಾತನೆ ಅದು ನನಗೆ ಮಾತ್ರ ಗೊತ್ತು...’’
ಅಜ್ಜಿಯ ಕೋಣೆಯಿಂದಲೇ ಮಾತು! ಯಾರಿರ ಬಹುದು? ಮತ್ತೆ ಮುಸಿ ಮುಸಿ ಅಳುವ ಸದ್ದು.
ತಾಹಿರಾ ಅಜ್ಜಿಯ ಕೋಣೆಯತ್ತಲೇ ತಿರುಗಿ ತಿರುಗಿ ನೋಡುತ್ತಾ ಅಡುಗೆ ಕೋಣೆಗೆ ಬಂದಳು. ಐಸು ಅಡುಗೆ ಮಾಡುತ್ತಿದ್ದಳು.
‘‘ಎದ್ದಿಯಾ...? ಬಾ, ಚಾ ಮಾಡ್ತೇನೆ ಕುಳಿತುಕೋ...’’ ಐಸು ಏನೂ ಆಗದವಳಂತೆ ನಗುತ್ತಾ ಹೇಳಿದಳು.
ಮತ್ತೆ ಅಜ್ಜಿಯ ಕೋಣೆಯಲ್ಲಿ ಜೋರಾಗಿ ಮಾತು-ಜಗಳ- ಅಳು. ತಾಹಿರಾ ಹೋಗಿ ಐಸುಳ ಬೆನ್ನ ಹಿಂದೆ ನಿಂತಳು.
‘‘ಮಾಮಿ...’’
‘‘ಹೂಂ...’’ ಐಸು ತಿರುಗಿ ತಾಹಿರಾಳ ಮುಖ ನೋಡಿದಳು. ಆ ಮುಖದ ತುಂಬಾ ಭಯ, ಆತಂಕವಿತ್ತು.
‘‘ಮಾಮೀ... ಅಜ್ಜಿ ಯಾರ ಜೊತೆ ಮಾತಾಡ್ತಾ ಇದ್ದಾರೆ?’’
ಐಸು ಮಾತನಾಡಲಿಲ್ಲ. ಕೆಲಸದಲ್ಲಿ ತಲ್ಲೀನಳಾದಂತಿದ್ದಳು.
‘‘ಯಾರು ಮಾಮಿ ಅದು ಬಂದದ್ದು?’’
‘‘ನಿನ್ನ ದೊಡ್ಡಮ್ಮ’’
‘‘ಮತ್ತೆ ಜಗಳ...!’’
‘‘ಅಜ್ಜಿ ನಿನ್ನ ದೊಡ್ಡಮ್ಮನ ಜೊತೆ ಜಗಳ ಮಾಡ್ತಾ ಇದ್ದಾರೆ. ಅದು ಯಾವಾಗಲೂ ಇದ್ದದ್ದೇ. ನೀನು ಗಾಬರಿಯಾಗಬೇಡ’’
‘‘ಯಾಕೆ ಮಾಮಿ?’’

‘‘ಅದು ಈಗ ಬೇಡ ಇನ್ನೊಮ್ಮೆ ಹೇಳ್ತೇನೆ’’ ಐಸು ಒಂದು ತಟ್ಟೆಯಲ್ಲಿ ಕೆಲವು ಗುಳಿಯಪ್ಪ ಹಾಕಿ ಕೊಟ್ಟು ‘‘ತಿನ್ನು... ಚಾ ಕೊಡ್ತೇನೆ’’ ಎಂದಳು. ತಾಹಿರಾ ಅಲ್ಲೇ ಕುಳಿತು ಒಂದೊಂದೇ ಗುಳಿ ಯಪ್ಪತಿನ್ನುತ್ತಿದ್ದರೂ ಅವಳ ಕಿವಿ ಮಾತ್ರ ಅಜ್ಜಿಯ ಕೋಣೆಯತ್ತಲೇ ಇತ್ತು. ಅವಳಿಗೆ ಒಂದೂ ಅರ್ಥವಾಗಲಿಲ್ಲ. ಜೋರು ಜೋರಾದ ಮಾತು-ಜಗಳ ಒಮ್ಮೆಲೆ ನಿಂತು ಹೋಯಿತು. ಮತ್ತೆ ಅಜ್ಜಿಯ ಕೋಣೆಯಿಂದ ಶಬ್ದವೇ ಇಲ್ಲ. ತಾಹಿರಾಳ ದೇಹದಿಂದ ನಿಟ್ಟುಸಿರೊಂದು ಹೊರಬಿತ್ತು.
ಆಗಲೇ ಬಾಗಿಲ ಬಳಿ ಸದ್ದಾದಂತಾಯಿತು. ತಾಹಿರಾ ತಲೆ ಎತ್ತಿ ನೋಡಿದಳು.
ಅಪರಿಚಿತ ಹೆಂಗಸು! ಅವಳನ್ನೇ ನೋಡುತ್ತಾ ಹತ್ತಿರ ಬರುತ್ತಿತ್ತು. ಸಪೂರ ಕಡ್ಡಿಯಂತಹ ದೇಹ. ನೂಲಿನ ಸೀರೆ, ಕುಪ್ಪಸ, ತಲೆಬಿಗಿದು ಕಟ್ಟಿದ್ದ ಬಣ್ಣದ ರುಮಾಲು. ದೊಡ್ಡಮ್ಮಾ? ಮಾಮಿ ಹೇಳಿದ ದೊಡ್ಡಮ್ಮ ಇವರೇ ಇರಬಹುದೇ? ತಾಹಿರಾ ಎದ್ದು ನಿಂತಳು.
ಆ ಹೆಂಗಸು ತಾಹಿರಾಳ ಹತ್ತಿರ ಬಂದು ಗಲ್ಲ ಹಿಡಿದೆತ್ತಿ ತನ್ನ ಕಣ್ಣು ತುಂಬಾ ಆ ಮುಖವನ್ನು ತುಂಬಿಕೊಂಡರು. ಮತ್ತೆ ತಲೆ ಸವರಿ, ಆ ತಲೆಯನ್ನು ತನ್ನ ಭುಜಕ್ಕೆ ಒತ್ತಿಕೊಂಡರು.
ತಾಹಿರಾ ಅವರ ಎದೆಗೆ ಒರಗಿದಳು. ಆ ಬೆಚ್ಚಗಿನ ಪ್ರೀತಿಯಲ್ಲಿ ಅವಳು ಕರಗಿ ಹೋಗಿದ್ದಳು. ಅವಳಿಗೆ ಈಗ ಅವರ ಎದೆಬಡಿತ ಸರಿಯಾಗಿ ಕೇಳಿಸುತ್ತಿತ್ತು.
‘‘ನಿನ್ನ ದೊಡ್ಡಮ್ಮ’’ ಐಸು ಸೆರಗಿನಿಂದ ಮುಖ ಒರೆಸಿಕೊಳ್ಳುತ್ತಾ ಅವಳ ಹತ್ತಿರ ಬಂದು ಹೇಳಿದಳು.
ತಾಹಿರಾ ಅಲ್ಲಿಂದಲೇ ಮುಖ ಎತ್ತಿ ತಾನು ಎಂದೂ ಕಂಡಿರದ ತನ್ನ ದೊಡ್ಡಮ್ಮನನ್ನು ಎವೆಯಿಕ್ಕದೆ ನೋಡಿ ದಳು.
ದೊಡ್ಡಮ್ಮನ ಕಣ್ಣುಗಳಲ್ಲಿ ಸಾವಿರ ಮಾತುಗಳು, ಬೆಟ್ಟದಷ್ಟು ನೋವುಗಳು, ಸಾಗರದಷ್ಟು ಪ್ರೀತಿಯನ್ನು ಕಂಡಳು.
‘‘ದೊಡ್ಡಮ್ಮಾ’’ ಆ ಕರೆ ಅವಳ ಹೃದಯಾಂತರಾಳ ದಿಂದ ಹೊರಬಿತ್ತು.
ದೊಡ್ಡಮ್ಮನ ಕಣ್ಣಲ್ಲಿ ನೀರು ಜಿನುಗಿತು.
‘‘ಎಲ್ಲ ನಾವು ಪಡೆದುಕೊಂಡು ಬಂದದ್ದಮ್ಮಾ..., ಏನು ಮಾಡಲಿಕ್ಕಾಗು ವುದಿಲ್ಲ. ಈ ಲೋಕದಲ್ಲಿ ಏನೆಲ್ಲ ಆಗಬೇಕೋ ಅದೆಲ್ಲ ಆಗಿಯೇ ಆಗುತ್ತೆ. ಯಾರಿಂದಲೂ ಅದನ್ನು ತಡೆಯಲಿ ಕ್ಕಾಗುವುದಿಲ್ಲ. ಇಲ್ಲಿ ನಮ್ಮದೇನೂ ನಡೆಯುವುದಿಲ್ಲ. ನಾವೆಲ್ಲ ಸೂತ್ರದ ಬೊಂಬೆಗಳು. ಎಲ್ಲ ಆ ದೇವರ ಇಷ್ಟದಂತೆಯೇ ನಡೆಯುವುದು. ನಡೆಯಲಿ, ಎಲ್ಲ ಅವನ ಇಚ್ಛೆಯಂತೆಯೇ ನಡೆಯಲಿ. ನೋಡೋಣ, ಎಲ್ಲಿಯವರೆಗೆ ಕೊಂಡೊಯ್ಯುತ್ತಾನಂತ. ಇದೆಲ್ಲ ಅವನಿಗೆ ಚೆಂದಾಂತಾದರೆ ಮತ್ತೆ ನಮಗೇನು. ಇದೆಲ್ಲ ಅವನದೇ ಸಾಮ್ರಾಜ್ಯ ಅಲ್ಲವಾ... ಇನ್ನೆಷ್ಟು ದಿನ ನೋಡೋಣ’’ ದೊಡ್ಡಮ್ಮ ಎತ್ತಲೋ ನೋಡುತ್ತಾ ಹೇಳುತ್ತಿದ್ದರು. ಅವರ ಮಾತಿನಲ್ಲಿ ಬರೀ ನೋವು ಮಾತ್ರ ತುಂಬಿದಂತಿತ್ತು.
ಐಸು ಬಂದು ತಟ್ಟೆಯಲ್ಲಿ ಕೆಲವು ಗುಳಿಯಪ್ಪ ಹಾಕಿ ಅವರಿಗೆ ಕೊಟ್ಟಳು. ಕೊಟ್ಟದ್ದನ್ನೆಲ್ಲ ತಲೆಕೆಳಗೆ ಹಾಕಿ ತಿಂದು, ಚಾ ಕುಡಿದ ದೊಡ್ಡಮ್ಮ, ಅಡಿಗೆ ಮನೆಯಿಂದ ಹೊರಬಂದವರು ಒಂದೂ ಮಾತು ಆಡದೆ, ಬುರ್ಖಾ ಹಾಕಿ ಜಗಲಿ ಇಳಿದು ನಡೆದೇ ಬಿಟ್ಟರು. ಬಿರುಗಾಳಿಗೆ ಓಲಾಡುವ ಗಾಳಿ ಮರದಂತೆ ತೂರಾಡುತ್ತಾ ಹೆಜ್ಜೆ ಬದಲಿಸುತ್ತಾ ವೇಗವಾಗಿ ನಡೆಯುತ್ತಿದ್ದ ಅವರನ್ನು ಜಗಳಿಯಲ್ಲಿ ನಿಂತ ತಾಹಿರಾ, ಅವರು ಕಣ್ಮರೆಯಾಗುವವರೆಗೂ ನೋಡುತ್ತಲೇ ಇದ್ದಳು. ಮತ್ತೆ ಒಳಗೆ ಬಂದವಳು ಅಜ್ಜಿಯ ಕೋಣೆಯತ್ತ ನಡೆದಳು. ಬಾಗಿಲು ಹಾಕಿತ್ತು. ಒಳಗಿಂದ ಶಬ್ದವೇ ಇಲ್ಲ. ಬಾಗಿಲು ದೂಡಿದಳು. ಇಲ್ಲ, ಒಳಗೆ ಚಿಲಕ ಹಾಕಿತ್ತು. ಅಲ್ಲಿಂದ ಕಾಲೆಳೆಯುತ್ತಾ ಅಡುಗೆ ಕೋಣೆಗೆ ಬಂದಳು. ಐಸು ರಾತ್ರಿ ಅಡುಗೆಯ ತಯಾರಿಯಲ್ಲಿದ್ದಳು. ತಾಹಿರಾ ಬಂದದ್ದು ತಿಳಿದರೂ ಐಸು ಮಾತನಾಡಲಿಲ್ಲ. ಇಡೀ ಮನೆಯನ್ನು ಮೌನ ಆವರಿಸಿಬಿಟ್ಟಿತ್ತು. ಅವಳಿಗೆ ಮೊದಲ ಬಾರಿಗೆ ಆ ಮನೆಯಲ್ಲಿ ತಾನು ಒಂಟಿಯಾದಂತೆನಿಸಿತು. ಅಲ್ಲಿಂದ ತಾನು ಮಲಗುವ ಕೋಣೆಗೆ ಬಂದವಳೇ ಅಂಗಾತ ಬಿದ್ದುಕೊಂಡಳು. ಮತ್ತೆ ಗಂಟೆಗಳು ಕಳೆದರೂ ಯಾರ ಮಾತೂ ಇಲ್ಲ, ಸುಳಿವೂ ಇಲ್ಲ. ಇಡೀ ಮನೆ ಸ್ಮಶಾನದಂತೆ.
‘‘ಬೇಸರವಾಯಿತಾ?’’
ಕಣ್ಣು ಮುಚ್ಚಿ ಮಲಗಿದ್ದ ತಾಹಿರಾ ಎದ್ದು ಕುಳಿತಳು. ಐಸುಳ ಮುಖವನ್ನೇ ನೋಡಿದಳು. ಆ ಮುಖದಲ್ಲಿ ಎಂದಿನ ಕಳೆ ಇಲ್ಲ. ಮಾತಿನಲ್ಲಿ ಸಿಹಿ ಇಲ್ಲ.
‘‘ಇಲ್ಲ’’
‘‘ಮತ್ತೇಕೆ ಮಲಗಿದ್ದೀ?, ಬಾ ಊಟ ಮಾಡು’’ ಐಸು ಅವಳನ್ನು ಎಬ್ಬಿಸಿ ಕೈ ಹಿಡಿದುಕೊಂಡೇ ಅಡುಗೆ ಮನೆಗೆ ಕರೆದೊಯ್ದಳು.
‘‘ಅಜ್ಜಿ, ಊಟ ಮಾಡಿದ್ರಾ?’’ ತಾಹಿರಾ ಕೇಳಿದಳು.
ಐಸು ಮಾತನಾಡಲಿಲ್ಲ
‘‘ಮಾಮಿ, ನಾನು ಅಜ್ಜಿ ಜೊತೆ ಊಟ ಮಾಡ್ತೇನೆ’’
‘‘ಬೇಡಮ್ಮಾ.. ಅವರು ಊಟ ಮಾಡುವಾಗ ತಡವಾಗಬಹುದು. ನಿನಗೆ ಹಸಿವಾಗುವುದಿಲ್ಲವಾ, ನೀನು ಊಟ ಮಾಡು’’
‘‘ನಾನು ಹೋಗಿ ಅಜ್ಜಿಯನ್ನು ಕರೆಯಲಾ?’’
‘‘ಅವರು ಈಗ ಬರುವುದಿಲ್ಲಮ್ಮಾ’’
‘‘ಯಾಕೆ ಬರುವುದಿಲ್ಲ, ನಾನು ಹೋಗಿ ಕರೆಯುತ್ತೇನೆ’’
‘‘ಸರಿ, ಹೋಗಿ ನೋಡು, ಅವರು ಒಳಗಿನಿಂದ ಚಿಲಕ ಹಾಕಿರಬೇಕು’’
ತಾಹಿರಾ ಹೋಗಿ ಅಜ್ಜಿಯ ಕೋಣೆಯ ಬಾಗಿಲನ್ನು ದೂಡಿದಳು. ಬಾಗಿಲು ತೆರೆದುಕೊಂಡಿತು. ಇಡೀ ಕೋಣೆಯಲ್ಲಿ ಕತ್ತಲೆ ಆವರಿಸಿಕೊಂಡಿತ್ತು. ಅವಳು ದೀಪ ಹಾಕಿದಳು. ಅಜ್ಜಿ ಗೋಡೆಗೆ ಮುಖ ಮಾಡಿ ಮಲಗಿದ್ದರು.
ತಾಹಿರಾ ಅವರ ಪಕ್ಕ ಕುಳಿತು ‘‘ಅಜ್ಜೀ’’ ಎಂದು ಕರೆದಳು.
ಅಜ್ಜಿ ಮಾತನಾಡಲಿಲ್ಲ.
ಅವಳು ಅವರ ಭುಜ ಹಿಡಿದು ಅಲುಗಿಸಿ ಅಂಗಾತ ಮಲಗಿಸಿದಳು.
ಅವರ ದೇಹದಲ್ಲಿ ಉಸಿರಾಟ ಒಂದು ಬಿಟ್ಟರೆ ಚಲನೆಯೇ ಇಲ್ಲ.
ಕಿವಿಯ ಹತ್ತಿರ ಬಾಯಿಯಿಟ್ಟು ಮತ್ತೆ ‘‘ಅಜ್ಜೀ...’’ ಎಂದು ಜೋರಾಗಿ ಕೂಗಿದಳು.
ಉತ್ತರವಿಲ್ಲ.
ಅವಳಿಗೆ ಭಯವಾಯಿತು. ‘‘ಮಾಮಿ...’’ ಎಂದು ಕೂಗಿದಳು.
ಐಸು ಬಂದವಳೇ ಅವರ ಮುಖಕ್ಕೆ ನೀರು ಹಾಕಿ ದಳು. ಅಂಗೈ- ಪಾದ ತಿಕ್ಕಿದಳು, ಎತ್ತಿ ಗೋಡೆಗೊರಗಿಸಿ ಕುಳ್ಳಿರಿಸಿದಳು.
‘‘ಅಜ್ಜಿಗೆ ಏನಾಗಿದೆ ಮಾಮಿ?’’ ತಾಹಿರಾಳ ಪ್ರಶ್ನೆ ತುಂಬಾ ಆತಂಕವಿತ್ತು.
‘‘ಏನೂ ಆಗಿಲ್ಲ’’
‘‘ಮತ್ತೆ ಮಾತನಾಡುತ್ತಾ ಇಲ್ಲ’’
‘‘ಒಮ್ಮಮ್ಮೆ ಹಾಗೆಯೇ, ಎಚ್ಚರವೇ ಇರುವುದಿಲ್ಲ’’
‘‘ಡಾಕ್ಟರ್‌ಗೆ ತೋರಿಸೋಣ’’
‘‘ಬೇಡ, ಸ್ವಲ್ಪಹೊತ್ತು. ಮತ್ತೆ ಸರಿಯಾಗ್ತಾರೆ’’
ಐಸು ಮತ್ತೆ ಮುಖಕ್ಕೆ ನೀರು ಸಿಂಪಡಿಸಿ, ಭುಜ ಹಿಡಿದು ‘‘ಅಜ್ಜೀ’’ ಎಂದು ಕರೆದಳು.
ಅಜ್ಜಿ ಮೆಲ್ಲನೆ ಕಣ್ಣು ಬಿಟ್ಟು ಸುತ್ತಲೂ ನೋಡಿದರು.
‘‘ಅಜ್ಜೀ ನಾನು ತಾಹಿರಾ, ಏಳಿ ಅಜ್ಜಿ, ಊಟ ಮಾಡೋಣ’’
‘‘................’’
‘‘ಬನ್ನಿ ಅಜ್ಜೀ...’’ ಅವಳು ಅಜ್ಜಿಯ ಕೈ ಹಿಡಿದು ಎದ್ದು ನಿಂತಳು
‘‘ಅವಳಿಗೆ ಹಟ, ಕೆಟ್ಟ ಹಟ...’’ ಅಜ್ಜಿ ತೊದಲಿದರು.
ತಾಹಿರಾಳಿಗೆ ಅರ್ಥವಾಗಲಿಲ್ಲ. ಅವಳು ಐಸುಳ ಮುಖ ನೋಡಿದಳು.
ಐಸು ಅವಳಿಗೆ ಮಾತನಾಡದಂತೆ ಸನ್ನೆ ಮಾಡಿದಳು.
‘‘ಅವಳು ಹೋದಳಾ?’’

‘‘ಅವರು ಸಂಜೆನೇ ಹೋಗಿದ್ದಾರೆ. ಈಗ ರಾತ್ರಿ 9 ಗಂಟೆಯಾಯಿತು. ಊಟ ತರ್ತೀನಿ, ನೀವು ಊಟ ಮಾಡಿ’’ ಎಂದು ಐಸು ಅಡುಗೆ ಕೋಣೆಗೆ ನಡೆದಳು. ‘‘ನನ್ನ ಮಕ್ಕಳಲ್ಲಿ ಯಾರಿಗೂ ಇಷ್ಟು ಹಟವಿಲ್ಲ’’
‘‘ಒಳ್ಳೆಯವಳು, ತಿಳಿದವಳು’’

ತಾಹಿರಾಳಿಗೆ ಅಜ್ಜಿಯ ತೊದಲು ಅರ್ಥವಾಗಲಿಲ್ಲ. ಅವಳು ಅವರ ಕೈಯನ್ನು ಹಾಗೆಯೇ ಎದೆಗೆ ಒತ್ತಿಕೊಂಡು ಸುಮ್ಮನೆ ಕುಳಿತು ಅವರ ಮುಖ ನೋಡುತ್ತಿದ್ದಳು.
‘‘ಸ್ವಾಭಿಮಾನ ಇರಬೇಕು..., ಆದರೆ ಇಷ್ಟೊಂದು ಸ್ವಾಭಿಮಾನ..., ಹೆಣ್ಣಾದವಳು ಸ್ವಲ್ಪತಗ್ಗಿಬಗ್ಗಿ ನಡೆಯ ಬೇಕು..., ಇಲ್ಲದಿದ್ದರೆ ಅವಳಿಗೆ ಉಳಿಗಾಲವಿಲ್ಲ...’’

(ರವಿವಾರದ ಸಂಚಿಕೆಗೆ)


                                     

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News