ಸಿರಿಯದಲ್ಲಿ ಸಕ್ರಿಯ ಪಾತ್ರ: ಟರ್ಕಿ ಪ್ರಧಾನಿ
Update: 2016-08-20 23:37 IST
ಇಸ್ತಾಂಬುಲ್, ಆ. 20: ಯುದ್ಧಗ್ರಸ್ತ ಸಿರಿಯವು ಜನಾಂಗೀಯ ನೆಲೆಯಲ್ಲಿ ವಿಭಜನೆಗೊಳ್ಳದಂತೆ ತಡೆಯುವುದಕ್ಕಾಗಿ ಮುಂದಿನ ಆರು ತಿಂಗಳಲ್ಲಿ ಟರ್ಕಿಯು ಆ ದೇಶದಲ್ಲಿ ಹೆಚ್ಚಿನ ಸಕ್ರಿಯ ಪಾತ್ರವನ್ನು ನಿಭಾಯಿಸುವುದು ಎಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡಿರಿಮ್ ಶನಿವಾರ ತಿಳಿಸಿದರು.
ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್‌ಗೆ ಆಂತರಿಕ ನಾಯಕತ್ವದಲ್ಲಿ ಪಾತ್ರವಿರಬಹುದಾದರೂ, ದೇಶದ ಭವಿಷ್ಯದಲ್ಲಿ ಅವರು ಯಾವುದೇ ಪಾತ್ರವನ್ನು ವಹಿಸಬಾರದು ಎಂದು ಇಲ್ಲಿ ಪತ್ರಕರ್ತರ ಗುಂಪಿನೊಂದಿಗೆ ಮಾತನಾಡಿದ ಯಿಲ್ಡಿರಿಮ್ ಅಭಿಪ್ರಾಯಪಟ್ಟರು.
ಐದು ವರ್ಷಗಳಿಂದ ಸಿರಿಯದಲ್ಲಿ ನಡೆಯುತ್ತಿರುವ ಯುದ್ಧ ಜನಾಂಗೀಯ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕುರ್ದಿಶ್ ಗುಂಪುಗಳು ಇಲ್ಲಿ ತಮ್ಮದೇ ಆದ ಪ್ರದೇಶಗಳನ್ನು ರೂಪಿಸಿಕೊಳ್ಳುತ್ತಿವೆ.