ಅಲೆಪ್ಪೊ: 3 ವಾರದಲ್ಲಿ 300 ನಾಗರಿಕರ ಸಾವು
ಅಲೆಪ್ಪೊ (ಸಿರಿಯ), ಆ. 20: ಸಿರಿಯದ ಜರ್ಜರಿತ ನಗರ ಅಲೆಪ್ಪೊದಲ್ಲಿ ಮೂರು ವಾರಗಳಿಂದ ನಡೆಯುತ್ತಿರುವ ಕಾಳಗ ಮತ್ತು ಬಾಂಬ್ ದಾಳಿಗಳಲ್ಲಿ 300ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮಾನವಹಕ್ಕುಗಳ ರಕ್ಷಣೆಯ ಗುಂಪೊಂದು ಹೇಳಿದೆ.
ಸಿರಿಯದ ಎರಡನೆ ಅತಿ ದೊಡ್ಡ ನಗರದ ನಿಯಂತ್ರಣಕ್ಕಾಗಿ ಜುಲೈ 31ರಿಂದ ನಡೆಯುತ್ತಿರುವ ಕಾಳಗದಲ್ಲಿ 333 ನಾಗರಿಕರು ಸಾವಿಗೀಡಾಗಿದ್ದಾರೆ. ಬಂಡುಕೋರರ ವಶದಲ್ಲಿದ್ದ ಜಿಲ್ಲೆಗಳಿಗೆ ಸರಕಾರಿ ಪಡೆಗಳು ಹಾಕಿದ್ದ ಮುತ್ತಿಗೆಯನ್ನು ಹಿಮ್ಮೆಟ್ಟಿಸಲು ಬಂಡುಕೋರರು ಜುಲೈ 31ರಂದು ಪ್ರಬಲ ಪ್ರತಿ ದಾಳಿಯೊಂದನ್ನು ನಡೆಸಿದ್ದರು.
ನಗರದ ಸರಕಾರಿ ನಿಯಂತ್ರಣದ ಪಶ್ಚಿಮದ ಜಿಲ್ಲೆಗಳ ಮೇಲೆ ಬಂಡುಕೋರರು ನಡೆಸಿದ ದಾಳಿಯಲ್ಲಿ 49 ಮಕ್ಕಳು ಸೇರಿದಂತೆ 165 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಅದೇ ವೇಳೆ, ನಗರದ ಪೂರ್ವ ಭಾಗದ ಬಂಡುಕೋರ ನಿಯಂತ್ರಣದ ಪ್ರದೇಶಗಳ ಮೇಲೆ ರಶ್ಯ ಮತ್ತು ಸಿರಿಯದ ಪಡೆಗಳು ನಡೆಸಿದ ದಾಳಿಯಲ್ಲಿ ಇನ್ನೂ 168 ನಾಗರಿಕರು ಹತರಾಗಿದ್ದಾರೆ ಎಂದು ಬ್ರಿಟನ್‌ನಲ್ಲಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಅಧ್ಯಕ್ಷ ಬಶರ್ ಅಲ್ ಅಸಾದ್‌ರ ಪಡೆಗಳಿಗೆ ಬೆಂಬಲವಾಗಿ ರಶ್ಯ ಸಿರಿಯದಲ್ಲಿ 2015 ಸೆಪ್ಟಂಬರ್‌ನಿಂದ ವಾಯು ದಾಳಿಗಳನ್ನು ನಡೆಸುತ್ತಿದೆ.
ಇದೇ ಅವಧಿಯಲ್ಲಿ ಅಲೆಪ್ಪೊದ ಉಳಿದ ಭಾಗದಲ್ಲಿ ನಡೆದ ಬಾಂಬ್ ದಾಳಿಗಳಲ್ಲಿ ಮತ್ತೂ 109 ನಾಗರಿಕರು ಸಾವಿಗೀಡಾಗಿದ್ದಾರೆ.
ಒಂದು ಕಾಲದಲ್ಲಿ ಸಿರಿಯದ ಆರ್ಥಿಕ ಕೇಂದ್ರವಾಗಿದ್ದ ಅಲೆಪ್ಪೊ ನಗರ 2012ರ ಮಧ್ಯ ಭಾಗದ ಬಳಿಕ ಹಿಂಸಾಚಾರದಿಂದಾಗಿ ಜರ್ಜರಿತಗೊಂಡಿದೆ. ನಗರದ ಪೂರ್ವ ಭಾಗದಲ್ಲಿ ಯುದ್ಧ ವಿಮಾನಗಳು ಬಾಂಬ್‌ಗಳನ್ನು ಉದುರಿಸುತ್ತಿದ್ದರೆ, ಪಶ್ಚಿಮ ಭಾಗವನ್ನು ರಾಕೆಟ್‌ಗಳು ಅಪ್ಪಳಿಸುತ್ತಿವೆ.
ಅಲೆಪ್ಪೊದ ದಕ್ಷಿಣದ ತುದಿಗಳ ಮೇಲೆ ಶನಿವಾರ ವಾಯು ದಾಳಿಗಳಾಗಿವೆ. ಅಲ್ಲಿ ನಡೆಯತ್ತಿರುವ ಭೀಕರ ಕಾಳಗ ನಗರದ ಎಲ್ಲ ಭಾಗಕ್ಕೂ ಕೇಳಿಸುತ್ತಿತ್ತು ಎಂದು ನಗರದ ಪೂರ್ವದ ಉಪನಗರದಲ್ಲಿರುವ ಎಎಫ್‌ಪಿ ಸುದ್ದಿ ಸಂಸ್ಥೆಯ ವರದಿಗಾರರೊಬ್ಬರು ವರದಿ ಮಾಡಿದ್ದಾರೆ.
ನಗರದ ಪೂರ್ವದ ಜಿಲ್ಲೆಗಳಲ್ಲಿ ಸುಮಾರು 2.5 ಲಕ್ಷ ಜನರು ವಾಸಿಸುತ್ತಿದ್ದಾರೆ ಹಾಗೂ ಪಶ್ಚಿಮದ ಜಿಲ್ಲೆಗಳಲ್ಲಿ ಸುಮಾರು 12 ಲಕ್ಷ ಮಂದಿ ಇದ್ದಾರೆ.