×
Ad

ಲಾದೆನ್ ಹತ್ಯೆ ಬಗ್ಗೆ ಪುಸ್ತಕ ಬರೆದ ಸೈನಿಕನಿಂದ ಸರಕಾರಕ್ಕೆ 44 ಕೋಟಿ ರೂಪಾಯಿ ಪಾವತಿ

Update: 2016-08-20 23:40 IST

ವಾಶಿಂಗ್ಟನ್, ಆ. 20: ಅಲ್-ಖಾಯಿದ ಸ್ಥಾಪಕ ಉಸಾಮ ಬಿನ್ ಲಾದೆನ್ ಹತ್ಯೆಯಾದ ದಾಳಿಯಲ್ಲಿ ತಾನು ವಹಿಸಿದ ಪಾತ್ರದ ಬಗ್ಗೆ ಪುಸ್ತಕ ಬರೆದ ಅಮೆರಿಕದ ಮಾಜಿ ನೇವಿ ಸೀಲ್ ಅಮೆರಿಕ ಸರಕಾರಕ್ಕೆ 6.6 ಮಿಲಿಯ ಡಾಲರ್ (ಸುಮಾರು 44.3 ಕೋಟಿ ರೂಪಾಯಿ) ದಂಡ ಪಾವತಿಸಲಿದ್ದಾರೆ.

ರಹಸ್ಯ ಬಹಿರಂಗಪಡಿಸಬಾರದು ಎನ್ನುವ ಒಪ್ಪಂದವನ್ನು ಉಲ್ಲಂಘಿಸಿರುವುದಕ್ಕಾಗಿ ಹಾಗೂ ಪುಸ್ತಕವನ್ನು ರಕ್ಷಣಾ ಇಲಾಖೆಯ ಅನುಮತಿ ಪಡೆಯದೆ ಪ್ರಕಟಿಸಿರುವುದಕ್ಕಾಗಿ ಸರಕಾರವು ಮಾಜಿ ಯೋಧ ಲೇಖಕನ ವಿರುದ ಮೊಕದ್ದಮೆ ಹೂಡಿತ್ತು. ಮ್ಯಾಟ್ ಬಿಸನೆಟ್ ಎಂಬ ನೇವಿ ಸೀಲ್ ಮಾರ್ಕ್ ಓವನ್ ಎಂಬ ಸುಳ್ಳು ಹೆಸರಿನಲ್ಲಿ ‘ನೋ ಈಸಿ ಡೇ’ ಎಂಬ ಪುಸ್ತಕವನ್ನು ಬರೆದಿದ್ದರು. ಪುಸ್ತಕ ಅಥವಾ ಚಿತ್ರದ ಹಕ್ಕುಗಳಿಂದ ಬಂದ ಎಲ್ಲ ಲಾಭ ಮತ್ತು ಸಂಭಾವನೆಗಳನ್ನು ಅವರು ಅಮೆರಿಕ ಸರಕಾರಕ್ಕೆ ಪಾವತಿಸಲಿದ್ದಾರೆ. ಈಗಾಗಲೇ ಪುಸ್ತಕ ಮಾರಾಟದಿಂದ ಅವರು 6.6 ಮಿಲಿಯ ಡಾಲರ್‌ಗೂ ಅಧಿಕ ಪ್ರತಿಫಲವನ್ನು ಪಡೆದಿದ್ದಾರೆ. ಈ ಮೊತ್ತವನ್ನು ಪಾವತಿಸಲು ಅವರಿಗೆ ನಾಲ್ಕು ವರ್ಷಗಳ ಕಾಲಾವಕಾಶವಿದೆ.

ವರ್ಜೀನಿಯದ ಅಮೆರಿಕ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಇತ್ಯರ್ಥ ಸೂತ್ರದಲ್ಲಿ ಪಾವತಿಯ ವಿವರಗಳನ್ನು ನೀಡಲಾಗಿದೆ.

ಇಲಾಖೆಯಿಂದ ಅನುಮೋದನೆ ಪಡೆಯದೆ ಕಂಪ್ಯೂಟರ್ ಬಳಸಿ ಪ್ರಾತ್ಯಕ್ಷಿಕೆ ನೀಡಿರುವುದರಿಂದ ಬಂದ ಸುಮಾರು 1 ಲಕ್ಷ ಡಾಲರ್ (ಸುಮಾರು 67 ಲಕ್ಷ ರೂಪಾಯಿ) ಮೊತ್ತವನ್ನು ಪಾವತಿಸಲು ಅವರಿಗೆ 30 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News