ಸಿಂಗಾಪುರದ ಭಾರತೀಯ ಉದ್ಯಮಿಯ ಮಗುವಿನ ಪಾಸ್‌ಪೋರ್ಟ್ ಸಮಸ್ಯೆಗೆ ಸ್ಪಂದಿಸಿದ ಸುಷ್ಮಾ ಸ್ವರಾಜ್
ಹೊಸದಿಲ್ಲಿ, ಆ.20: ತಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೇ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಸುಷ್ಮಾ ಸ್ವರಾಜ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಕ್ರಿಯವಾಗಿದ್ದು ಈಗಾಗಲೇ ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಕಷ್ಟ ತೋಡಿಕೊಂಡ ಹಲವರಿಗೆ ಸಹಾಯ ಮಾಡಿದ್ದಾರೆ. ಅವರು ಒಲಿಂಪಿಕ್ ಪದಕ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದು ಮಾತ್ರವಲ್ಲದೆ ಪದಕ ವಂಚಿತರಿಗೆ ಸಮಾಧಾನ ಕೂಡ ಹೇಳಿದ್ದಾರೆ. ಅಂತೆಯೇ ಆಟದಲ್ಲಿ ಗಾಯಾಳುಗಳಾದ ಕ್ರೀಡಾಳುಗಳಿಗೆ ಸಾಂತ್ವನದ ಮಾತುಗಳನ್ನೂ ಆಡಿದ್ದಾರೆ.
ತಮ್ಮ ಪಾಸ್‌ಪೋರ್ಟ್ ಸಮಸ್ಯೆಗಳನ್ನು ಹೇಳಿಕೊಂಡ ಹಲವರಿಗೆ ಸಹಾಯ ಮಾಡಿರುವ ಸುಷ್ಮಾ ಇತ್ತೀಚೆಗೆ ಸಿಂಗಾಪುರ ಮೂಲದ ಭಾರತೀಯ ಉದ್ಯಮಿ ಆರಿಫ್ ರಶೀದ್ ಝರ್ಗರ್ ಅವರ ಸಹಾಯಕ್ಕೆ ನಿಂತಿದ್ದಾರೆ. ಆರಿಫ್ ತಮ್ಮ ಪುಟ್ಟ ಕಂದನ ಪಾಸ್‌ಪೋರ್ಟ್‌ಗಾಗಿ ಕಾಯುತ್ತಿದ್ದಾರೆ. ಅದಿಲ್ಲದೆ ತಮ್ಮ ಪುಟ್ಟ ಮಗನ ಮುದ್ದು ಮುಖವನ್ನು ನೋಡಲು ಸಾಧ್ಯವಿಲ್ಲವೆಂಬ ಕೊರಗು ಅವರದು. ಅದನ್ನು ಅವರು ಸುಷ್ಮಾ ಬಳಿ ಟ್ವಟರ್ ಮುಖಾಂತರ ಅರುಹಿದರು. ‘‘ಪ್ಲೀಸ್ ಹೆಲ್ಪ್ ಮಿ ಔಟ್ ವಿದ್ ಮೈ ಬೇಬೀಸ್ ಪಾಸ್‌ಪೋರ್ಟ್ ಆರ್ ಹಿ ವಿಲ್ ಗ್ರೋ ಥಿಂಕಿಂಗ್ ವಾಟ್ಸೆಪ್ ಎಂಡ್ ಸ್ಕೈಪ್ ಈಸ್ ಹಿಸ್ ಫಾದರ್.’’ (ನನ್ನ ಮಗುವಿನ ಪಾಸ್ ಪೋರ್ಟ್ ಪಡೆಯಲು ಸಹಾಯ ಮಾಡಿ. ಇಲ್ಲದೇ ಹೋದಲ್ಲಿ ಆತ ವಾಟ್ಸೆಪ್ ಹಾಗೂ ಸ್ಕೈಪ್ ಅನ್ನೇ ತನ್ನ ತಂದೆಯೆಂದು ತಿಳಿಯಬಹುದು). ಅವರ ಈ ಟ್ವೀಟ್ ಸುಷ್ಮಾ ಅವರ ಮನ ತಟ್ಟಿತ್ತು. ‘‘ಓಹ್, ದ್ಯಾಟ್ ವಿಲ್ ಬಿ ಟೂ ಮಚ್. ಪ್ಲೀಸ್ ಗಿವ್ ಮಿ ಡಿಟೇಲ್ಸ್.’’ (ಓಹ್, ಅದು ತುಂಬಾ ಅತಿಯಾಯಿತು. ನನಗೆ ವಿವರಗಳನ್ನು ನೀಡಿ,’’ ಎಂದು ಉತ್ತರಿಸಿದರು. ಈ ಬಾರಿ ಸುಷ್ಮಾ ಇನ್ನೊಂದು ಹೊಸ ಅಭಿಮಾನಿಯನ್ನು ಪಡೆದಿದ್ದಾರೆ- ನಿಖರವಾಗಿ ಹೇಳಬೇಕಾದರೆ ಇಬ್ಬರು ಅಭಿಮಾನಿಗಳು - ಆರಿಫ್ ಹಾಗೂ ಅವರ ಮಗು ಆಲಿ.