ಕತ್ತರಿ ಪ್ರಯೋಗಕ್ಕೆ ವಿರೋಧ: ಅಡೂರ್

Update: 2016-08-21 07:37 GMT

ಲನಚಿತ್ರದ ಮೇಲೆ ಯಾವುದೇ ಬಗೆಯ ಕತ್ತರಿ ಪ್ರಯೋಗಕ್ಕೆ ತಮ್ಮ ವಿರೋಧವಿದೆ ಎನ್ನುವುದು ಖ್ಯಾತ ಚಿತ್ರ ನಿರ್ದೇಶಕ ಅಡೂರ್ ಗೋಪಾಲಕೃಷ್ಣ ನ್ ಅವರ ಸ್ಪಷ್ಟ ನುಡಿ. ಜತೆಗೆ ಹಿಂದಿ ಚಿತ್ರಗಳ ಹೊರತಾಗಿ ಇತರ ಎಲ್ಲ ಚಿತ್ರಗಳನ್ನು ಪ್ರಾದೇಶಿಕ ಚಿತ್ರ ಎಂದು ಪರಿಗಣಿಸುವ ಬಗ್ಗೆಯೂ ಚಿತ್ರರಂಗದ ಈ ದಿಗ್ಗಜ ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಮಲಯಾಳಂ ಭಾಷೆಯ ತಮ್ಮ ‘ಪಿನ್ನೆಯುಮ್’ ಚಿತ್ರದ ಬಿಡುಗಡೆಗೆ ಸಜ್ಜಾಗಿರುವ ಅಡೂರ್, ಸೆನ್ಸಾರ್ ಪದ್ಧತಿ ಕೈಬಿಡಲು ಇದು ಸಕಾಲ ಎಂದು ಹೇಳಿದರು. ‘‘ಪ್ರಜಾಪ್ರಭುತ್ವದಲ್ಲಿ ಸೆನ್ಸಾರ್‌ಗೆ ಅವಕಾಶ ಇಲ್ಲ. ಸರ್ವಾಧಿಕಾರಿ ಆಡಳಿತದಲ್ಲಷ್ಟೇ ಇದಕ್ಕೆ ಸ್ಥಾನವಿದೆಯೇ ವಿನಃ ಪ್ರಜಾಪ್ರಭುತ್ವದಲ್ಲಲ್ಲ’’ ಎಂದು ಮುಂಬೈ ಪ್ರೆಸ್ ಕ್ಲಬ್‌ನಲ್ಲಿ ಚಿತ್ರ ಪ್ರಚಾರಕ್ಕೆ ಆಗಮಿಸಿದ ಅವರು ಅಭಿಪ್ರಾಯಪಟ್ಟರು.

‘‘ನಾನು ಏನು ಮಾಡಬೇಕು, ಏನು ಮಾಡಬಾರದು ಎಂದು ಬೇರೆಯವರು ಸೂಚಿಸುವುದು ನನಗೆ ಇಷ್ಟವಿಲ್ಲ’’ ಎಂದು ಖಡಾಖಂಡಿತವಾಗಿ ಹೇಳಿದರು.

ಚಿತ್ರರಂಗವನ್ನು ವೈರಸ್‌ನಂತೆ ಕಾಡುತ್ತಿರುವ ಕೃತಿಚೌರ್ಯದ ಬಗ್ಗೆ ಗಮನ ಸೆಳೆದಾಗ ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಕ್ರಿಯಿಸಿದರು. ಕಟ್ಟುನಿಟ್ಟಿನ ಶಿಕ್ಷೆ ಇಲ್ಲದ ಕಾರಣ ಚಿತ್ರ ಬಿಡುಗಡೆಗೆ ಮುನ್ನವೇ ಅದರ ಬಹುತೇಕ ಅಂಶಗಳು ಇಂಟರ್‌ನೆಟ್‌ನಲ್ಲಿ ಸೋರಿಕೆಯಾಗುತ್ತವೆ ಎಂದು ವಿಷಾದಿಸಿದರು.

ಹಿಂದಿ ಚಿತ್ರ ಹೊರತಾದ ಚಿತ್ರಗಳನ್ನು ಪ್ರಾದೇಶಿಕ ಚಿತ್ರಗಳೆಂದು ಬ್ರಾಂಡ್ ಮಾಡುವ ಬಗ್ಗೆ ಆಕ್ಷೇಪಿಸಿದ ಅವರು, ‘‘ಪ್ರತಿ ಚಿತ್ರವೂ ರಾಷ್ಟ್ರೀಯ ಚಿತ್ರ. ಸತ್ಯಜಿತ್ ರೇ ಅವರನ್ನು ಬೆಂಗಾಲಿ ಚಿತ್ರ ನಿರ್ಮಾಪಕ ಎಂದು ಯಾರೂ ಕರೆಯಲಿಲ್ಲ. ಜಾಗತಿಕವಾಗಿ ಬಾಲಿವುಡ್ ಚಿತ್ರಗಳನ್ನು ಭಾರತೀಯ ಚಿತ್ರ ಎಂದು ಗುರುತಿಸಲಾಗುತ್ತದೆ. ಇದು ತಪ್ಪು. ಬಾಲಿವುಡ್ ಭಾರತೀಯ ಚಿತ್ರಗಳನ್ನು ಪ್ರತಿನಿಧಿಸುವುದಿಲ್ಲ’’ ಎಂದರು. ಬಾಲಿವುಡ್ ಚಿತ್ರಗಳಿಗೆ ಪ್ರಾಮುಖ್ಯ ನೀಡುವ ಕಾರಣ, ಹಲವು ಉತ್ತಮ ಪ್ರಾದೇಶಿಕ ಚಿತ್ರಗಳಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು.

‘‘ಒಂದು ಕಾಲದಲ್ಲಿ ವಿದೇಶಿ ಚಿತ್ರ ನಿರ್ಮಾಪಕರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ, ಹಿಂದಿ ಚಿತ್ರಗಳಿಗೆ ಹೊರತಾದ ಉತ್ತಮ ಚಿತ್ರಗಳೂ ಭಾರತದಲ್ಲಿವೆ ಎಂದು ಅಚ್ಚರಿಪಡುತ್ತಿದ್ದರು. ಹಿಂದಿ ಸಿನೆಮಾವನ್ನು ಭಾರತೀಯ ಚಿತ್ರ ಎಂದು ಗುರುತಿಸುವುದು ಸಾಮಾನ್ಯವಾಗಿಬಿಟ್ಟಿದೆ’’ ಎಂದು ವಿಷಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News