ಮಲ್ಲಿವುಡ್‌ನ ಮಾನವೀಯ ಲೇಖಕ ಟಿ.ಎ.ರಝಾಕ್

Update: 2016-08-21 07:39 GMT

ಕೆಲ ವರ್ಷಗಳ ಹಿಂದೆ ದ ಹಿಂದೂ ಪತ್ರಕರ್ತರು ಎಂ.ಟಿ.ವಾಸುದೇವನ್ ನಾಯರ್ ಅವರನ್ನು ಮಲೆಯಾಳಂ ಚಿತ್ರರಂಗದ ಸಂಭಾಷಣೆಕಾರರ ಬಗ್ಗೆ ಕೇಳಿದಾಗ, ಅವರು ಉಲ್ಲೇಖಿಸಿದ್ದು ಒಂದೇ ಹೆಸರು. ಅದು ಟಿ.ಎ.ರಝಾಕ್.

ಎಂ.ಟಿ. ಸಂದರ್ಶನವನ್ನು ರಝಾಕ್ ಓದಲಿಲ್ಲ. ಆದರೆ ಚಿತ್ರ ನಿರ್ದೇಶಕ ಹರಿಹರನ್ ಸೇರಿದಂತೆ ಅವರ ಚಿತ್ರ ಸಹೋದ್ಯೋಗಿಗಳು ಅಭಿನಂದನೆಯ ಮಹಾಪೂರ ಹರಿಸಿದಾಗ ಇದು ಅವರಿಗೆ ತಿಳಿಯಿತು. ದ ಹಿಂದೂ ಪತ್ರಿಕೆಯ ಆ ಪ್ರತಿಯನ್ನು ಜತನದಿಂದ ವರ್ಷಗಳ ಕಾಲ ಸಂಗ್ರಹಿಸಿ ಇಟ್ಟಿದ್ದರು. ಅದನ್ನು ಪಡೆದ ಒಬ್ಬ ಸ್ನೇಹಿತ ವಾಪಸು ಮಾಡದ ಕಾರಣ ಅದು ಕಳೆದುಹೋಯಿತು.

ಕೆಲ ವಾರಗಳ ಹಿಂದೆ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಯಿಂದ ಕರೆ ಮಾಡಿ, ‘‘ನನಗೆ ಆ ಪ್ರತೀ ಸಿಗಬಹುದೇ’’ ಎಂದು ಕೇಳಿದ್ದರು. ನನ್ನ ಬರಹಗಳ ನೆನಪಾಗಿ ಅದು ನನಗೆ ಬೇಕು ಎಂದು ಕೋರಿದ್ದರು. ಅವರು ಎರಡು ಹೊಸ ಚಿತ್ರಕಥೆ ನಿರ್ಮಿಸುತ್ತಿದ್ದರು. ‘‘ನಾನು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ, ನನ್ನ ಎರಡನೆ ಚಿತ್ರವನ್ನು ನಿರ್ದೇಶಿಸುತ್ತೇನೆ. ಕೆಲ ತಿಂಗಳಲ್ಲಿ ಇದು ಸಾಧ್ಯವಾಗಬಹುದು’’ ಎಂದು ರಝಾಕ್ ಹೇಳಿದ್ದರು.

ಅವರ ಸಾವಿನ ಕಾರಣ ಅದು ಅಸಂಭವ. ಮಲಯಾಳಂ ಚಿತ್ರರಂಗ ಅದ್ಭುತ, ಮಾನವೀಯ ಚಿತ್ರ ಸಂಭಾಷಣೆಕಾರರೊಬ್ಬರನ್ನು ಕಳೆದುಕೊಂಡಿದೆ. ಚೊಚ್ಚಲ ‘ಘೋಷಯಾತ್ರಾ’ ಚಿತ್ರದ ಮೂಲಕ ಅಪಾರ ನಿರೀಕ್ಷೆ ಮೂಡಿಸಿದ್ದ ಪ್ರತಿಭಾವಂತ.

‘ಕಣಕ್ಕಿಣವು’ಚಿತ್ರ ಇವರಿಗೆ ಉತ್ತಮ ಚಿತ್ರ ಸಂಭಾಷಣೆಗಾಗಿ ರಾಜ್ಯ ಪ್ರಶಸ್ತಿ ಗೆದ್ದುಕೊಟ್ಟಿತ್ತು. ‘ಪೆರುಮಳಕ್ಕಲಮ್’ ಹಾಗೂ ‘ಗಝಲ್’ ಎಲ್ಲ ವರ್ಗಗಳ ಪ್ರೇಕ್ಷಕರನ್ನೂ ತಟ್ಟುವ ಅವರ ಕಲಾತ್ಮಕ ಪ್ರತಿಭೆಗೆ ಕನ್ನಡಿ ಹಿಡಿದಿದ್ದವು. ಪರಸ್ಪರ ವೈರುದ್ಯದ ಧಾರ್ಮಿಕ ನಂಬಿಕೆಯಿಂದ ಉಂಟಾಗಬಹುದಾದ ಪರಿಣಾಮ ಅವರ ಆತಂಕವಾಗಿತ್ತು. ‘ಕಣಕ್ಕಿಣವು’ ಮತ್ತು ‘ಮೂನಾಮ್ ನಾಲ್ ನಾರಾಯಿಛ’ ಇಂಥ ಸಮಸ್ಯೆ ಬಗ್ಗೆ ಚರ್ಚಿಸಿದ್ದವು. ‘ಪೆರುಮಳಕ್ಕಲಮ್’ ರಝಾಕ್ ಅವರ ಸರ್ವಶ್ರೇಷ್ಠ ಚಿತ್ರವಾಗಿದ್ದು, ಇದು ಮಹಿಳೆಯೊಬ್ಬಳು ತನ್ನ ಗಂಡನ ಹತ್ಯೆಕೋರರಿಗೆ ಕ್ಷಮಾದಾನ ನೀಡಿದ ಕಾರಣದಿಂದ ಹಂತಕ ಗಲ್ಫ್ ದೇಶದಲ್ಲಿ ಗಲ್ಲು ಶಿಕ್ಷೆಯಿಂದ ಪಾರಾಗುವುದು ಇಲ್ಲಿನ ಕಥಾವಸ್ತು. ಇದು ನೈಜ ಘಟನೆ ಆಧಾರಿತ ಚಿತ್ರ.

‘ಕಣಕ್ಕಿಣವು’ ಚಿತ್ರದ ಪಾತ್ರಗಳು, ಧಾರ್ಮಿಕ ಸಾಮರಸ್ಯವನ್ನು ಯಾವ ಬೋಧನೆಯೂ ಇಲ್ಲದೇ ಕಲಾತ್ಮಕವಾಗಿ ಪ್ರತಿಪಾದಿಸುತ್ತವೆ. ಕಲೆ ಕೇವಲ ಕಲೆಗಾಗಿ ಅಲ್ಲ. ಸಿನೆಮಾದಲ್ಲಿ ಸಮಾಜಕ್ಕೆ ಸಂದೇಶ ಇರಬೇಕು ಎನ್ನುವುದು ಅವರ ದೃಢನಂಬಿಕೆಯಾಗಿತ್ತು.

ಈ ವರ್ಷ ಈಗಾಗಲೇ ಕಲಾಭವನ್ ಮಣಿ, ಕಲ್ಪನಾ, ಜ್ಯೋತಿಲಕ್ಷ್ಮೀ, ಸಂಗೀತಜ್ಞ ಓ.ಎನ್.ವಿ.ಇ.ಕುರುಪ್ ಹಾಗೂ ಕಾವಳಂ ನಾರಾಯಣ ಪಣಿಕ್ಕರ್, ನಿರ್ದೇಶಕರಾದ ರಾಜೇಶ್ ಪಿಳ್ಳೈ, ಶಶಿ ಶಂಕರ್, ರಾಜನ್ ಸಂಕರಡಿ ಹಾಗೂ ಮೋಹನ್ ರೂಪ್, ಚಿತ್ರ ಛಾಯಾಗ್ರಾಹಕ ಆನಂದಕುಟ್ಟನ್, ಸಂಯೋಜಕ ರಾಜಮಣಿ ಹಾಗೂ ಸಂಗೀತಗಾರ ಶಾನ್ ಜಾನ್ಸನ್ ಅವರನ್ನು ಕಳೆದುಕೊಂಡಿರುವ ಮಲಯಾಳಂ ಚಿತ್ರರಂಗಕ್ಕೆ ರಝಾಕ್ ಸಾವು ಬರಸಿಡಿಲಿನಂತೆ ಬಂದೆರಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News