ಗಾಂಧಿನಗರದ ಹೊಸ ನಾಯಕ ದಿಲೀಪ್ ಪ್ರಕಾಶ್

Update: 2016-08-21 07:44 GMT

ಆಕಾಶ್,ಅರಸು ಮತ್ತು ಮೆರವಣಿಗೆ ಖ್ಯಾತಿಯ ಮಹೇಶ ಬಾಬು ನಿರ್ದೇಶನದ ನೂತನ ಕನ್ನಡ ಚಿತ್ರ ‘ಕ್ರೇಝಿಬಾಯ್’ ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನೊಬ್ಬನನ್ನು ಪರಿಚಯಿಸಿದೆ. ಚಂದ್ರು ನಿರ್ಮಾಣದ ಈ ಚಿತ್ರದ ಮೂಲಕ ದಿಲೀಪ್ ಪ್ರಕಾಶ್ ಮೊದಲ ಬಾರಿಗೆ ನಾಯಕ ನಟನಾಗಿ ಮಿಂಚಿದ್ದಾರೆ.

ಎಸ್.ಮಹೇಂದ್ರ ನಿರ್ದೇಶನದ, ಮಾಲಾಶ್ರೀ ನಾಯಕಿಯಾಗಿದ್ದ ‘ಮಹಾಕಾಳಿ’ಚಿತ್ರದಲ್ಲಿ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದ ದಿಲೀಪ್ ಪ್ರಕಾಶ್ ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದು,ನಾಯಕನಾಗುವುದು ಇರಲಿ... ನಟನಾಗುವ ಕನಸನ್ನೂ ಕಂಡವರಲ್ಲ. ‘ಮಹಾಕಾಳಿ’ ಚಿತ್ರದೊಂದಿಗೆ ಆಕಸ್ಮಿಕವಾಗಿ ಚಿತ್ರರಂಗ ಪ್ರವೇಶಿಸಿದ್ದ ಅವರು ಮಾಲಾಶ್ರೀ ಜೊತೆ ಅಭಿನಯಿಸಿದ್ದು ನಿಜಕ್ಕೂ ಅದ್ಭುತ ಅನುಭವವಾಗಿತ್ತು ಎನ್ನುತ್ತಾರೆ. ಇದೀಗ ‘ಕ್ರೇಝಿಬಾಯ್’ನೊಂದಿಗೆ ಪೂರ್ಣ ಪ್ರಮಾಣದ ನಾಯಕನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುವ ನಿರೀಕ್ಷೆಯಿದೆ. ಯುವಜನರ ಮನಸ್ಸು ಗೆಲ್ಲುವ,ರೊಮ್ಯಾಂಟಿಕ್ ಆಗಿ ಮೂಡಿ ಬಂದಿರುವ ‘ಕ್ರೇಝಿಬಾಯ್’ನ ಆರು ಇಂಪಾದ ಹಾಡುಗಳು ಈಗಾಗಲೇ ಸಿನಿಪ್ರಿಯರ ಮನಸ್ಸನ್ನು ಗೆದ್ದಿವೆ. ಯಾವುದೇ ದ್ವಂದ್ವಾರ್ಥದ ಸಂಭಾಷಣೆಯಿಲ್ಲದೆ,ಅಶ್ಲೀಲ ದೃಶ್ಯಗಳಿಲ್ಲದೆ ಹಿತವಾಗಿ ರೂಪುಗೊಂಡಿರುವ ‘ಕ್ರೇಝಿಬಾಯ್’ ಕುಟುಂಬ ಸದಸ್ಯರೆಲ್ಲ ಒಟ್ಟಾಗಿ ವೀಕ್ಷಿಸಬಹುದಾದ ಸದಭಿರುಚಿಯ ಚಿತ್ರವಾಗಿದೆ ಎನ್ನುತ್ತಾರೆ ನಿರ್ದೇಶಕ ಮಹೇಶ ಬಾಬು.

ಅತ್ಯುತ್ತಮ ತಂತ್ರಜ್ಞರ ತಂಡವು ಈ ಚಿತ್ರಕ್ಕಾಗಿ ದುಡಿದಿದ್ದು,ರವಿಶಂಕರ,ರಂಗಾಯಣ ರಘು,ಸಾಧು ಕೋಕಿಲ ಮತ್ತು ಅನಂತ ನಾಗ್ ಅವರಂತಹ ಮೇರು ಪ್ರತಿಭೆಗಳು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಿಲೀಪ್ ಪ್ರಕಾಶ್ ಎದುರು ನಾಯಕಿಯಾಗಿ ಆಶಿಕಾ ಅಭಿನಯಿಸಿದ್ದಾರೆ.

ಪ್ರತಿಭಾವಂತ ನಟ-ನಟಿಯರು ಮತ್ತು ಅತ್ಯುತ್ತಮ ತಂತ್ರಜ್ಞರೊಂದಿಗೆ ಕೆಲಸ ಮಾಡಿದ್ದು ತನಗೆ ಸುಂದರ ಅನುಭವವನ್ನು ನೀಡಿದೆ ಎನ್ನುತ್ತಾರೆ ದಿಲೀಪ್ ಪ್ರಕಾಶ್.

‘ಕ್ರೇಝಿ ಬಾಯ್’ಎಲ್ಲರ ಮನಗೆಲ್ಲಲಿ ದ್ದಾನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News