ಬಿಜೆಪಿ ಬೆಲೆ ತೆರಲೇಬೇಕು: ಜಿಗ್ನೇಶ್ ಮೇವಾನಿ
ಅಹ್ಮದಾಬಾದ್, ಆ.21: ದಲಿತ ವಿರೋಧಿ ಧೋರಣೆ ಅನುಸರಿಸುತ್ತಿರುವ ಬಿಜೆಪಿ ತನ್ನ ಕೃತ್ಯಗಳಿಗೆ ಬೆಲೆ ತೆರಬೇಕಾಗುತ್ತದೆ ಎಂದು ದಲಿತ ಮುಖಂಡ ಜಿಗ್ನೇಶ್ ಮೇವಾನಿ ಎಚ್ಚರಿಕೆ ನೀಡಿದ್ದಾರೆ.
ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿ, ಚುನಾವಣೆಗೆ ಸ್ಪರ್ಧಿಸುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಮಧ್ಯೆ ಇತ್ತೀಚೆಗೆ ಗುಜರಾತ್‌ನಲ್ಲಿ ಮುಕ್ತಾಯಗೊಂಡ ದಲಿತ ಅಸ್ಮಿತ ಯಾತ್ರೆ, ಬಿಜೆಪಿ ವಿರೋಧಿ ರಾಜಕೀಯ ಚಳವಳಿಯಾಗಿ ಗುಜರಾತ್ ರಾಜ್ಯದ ಹೊರಗೆಯೂ ಬೆಳೆಯುವ ಸ್ಪಷ್ಟ ಸೂಚನೆ ಕಂಡುಬರುತ್ತಿದೆ. ನಾಲ್ವರು ದಲಿತ ಯುವಕರ ಮೇಲೆ ಗೋರಕ್ಷಕರ ಹೆಸರಿನಲ್ಲಿ ದಾಳಿ ಮಾಡಿದ ಕೃತ್ಯದ ವಿರುದ್ಧ ಗುಜರಾತ್‌ನಲ್ಲಿ ಬೃಹತ್ ಚಳವಳಿ ರೂಪುಗೊಳ್ಳಲು ಪ್ರಮುಖ ಕಾರಣರಾದ 35 ವರ್ಷದ ವಕೀಲ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಈ ಚಳವಳಿಯ ಮುಖವಾಗಿದ್ದಾರೆ.
ಹತ್ತು ದಿನಗಳ ಈ ಚಳವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿಗೆ ಆಘಾತ ತಂದಿದೆ. ಜತೆಗೆ ರಾಜ್ಯದಲ್ಲಿ ಬಿಜೆಪಿಯ ವೋಟ್ ಬ್ಯಾಂಕ್ ಆಗಿದ್ದ, ಸಾಮಾಜಿಕವಾಗಿ ಹಿಂದುಳಿದ ವರ್ಗದವರು ಪಕ್ಷದ ತೆಕ್ಕೆಯಿಂದ ದೂರವಾಗುತ್ತಿರುವುದು ಪಕ್ಷದಲ್ಲಿ ಆತಂಕ ಸೃಷ್ಟಿಸಿದೆ.
"ಈ ಯಾತ್ರೆಯಿಂದ ಬಿಜೆಪಿಗೆ ಹಿನ್ನಡೆಯಾಗುವುದು ಖಚಿತ. ಅದು ತನ್ನ ತಪ್ಪಿಗೆ ಬೆಲೆ ತೆರಲೇಬೇಕು. ಬಿಜೆಪಿ ಅಧಿಕಾರಾವಧಿಯಲ್ಲಿ ದಲಿತರು ತೀರಾ ತೊಂದರೆ ಅನುಭವಿಸಿದ್ದಾರೆ. ಅವರ ಆಡಳಿತಾವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ. ಗೋರಕ್ಷಕ ಗುಂಪುಗಳು ಮೋದಿಯ ಉಡುಗೊರೆ" ಎಂದು ಅವರು ಕಿಡಿ ಕಾರಿದ್ದಾರೆ.
ಬಿಜೆಪಿ ಆಡಳಿತದಲ್ಲಿ ದಲಿತರಿಗೆ ಆಗಿರುವ ಅನ್ಯಾಯದ ವಿರುದ್ಧ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ತಮ್ಮ ಯಾತ್ರೆಯ ಉದ್ದೇಶ. ಜಾತಿ ಅಥವಾ ಪಕ್ಷದ ಲೆಕ್ಕಾಚಾರದ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ನಮ್ಮ ಮೇಲಿನ ದೌರ್ಜನ್ಯಕ್ಕೆ ಅದು ಬೆಲೆ ತೆರುತ್ತದೆ"ಎಂದು ಹೇಳಿದ್ದಾರೆ.