5ನೆ ತರಗತಿ ಕಲಿತ ಈ ಟೀ ಮಾರುವವನ ಹೋರಾಟಕ್ಕೆ ಭಾರತದ ಅತಿ ದೊಡ್ಡ ಬ್ಯಾಂಕ್ ಶರಣಾಯಿತು!
ಈ ಛಲಗಾರನ ಹೆಸರು ರಾಜೇಶ್ ಸಾಕ್ರೆ. ಕೇವಲ 9200 ರೂಪಾಯಿಗಾಗಿ ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿದ ಭಾರತೀಯ ಸ್ಟೇಟ್ ಬ್ಯಾಂಕ್ ಅನ್ನು ಎದುರು ಹಾಕಿಕೊಂಡರು. ವಿಶೇಷವೆಂದರೆ ತಮ್ಮ ಪರವಾಗಿ ಯಾವುದೇ ವಕೀಲರನ್ನು ನೇಮಿಸದೇ ತಾವೇ ಕೋರ್ಟ್‌ನಲ್ಲಿ ವಾದಿಸಿ, ಬ್ಯಾಂಕ್‌ಗೆ ಪಾಠ ಕಲಿಸಿದರು. ಇವರದ್ದು ಅಭೂತಪೂರ್ವ ಸಾಧನೆ. ಏಕೆ ಗೊತ್ತೇ? ಇವರ ವಿದ್ಯಾರ್ಹತೆ ಕೇವಲ ಐದನೇ ತರಗತಿ!
ಈ ಪ್ರಕರಣ ಆರಂಭವಾದದ್ದು 2011ರಲ್ಲಿ. ತಮ್ಮ ಖಾತೆಯಲ್ಲಿದ್ದ ಹಣವೆಲ್ಲ ನಾಪತ್ತೆಯಾದ ಬಗ್ಗೆ ಸ್ಥಳೀಯ ಶಾಖೆಯಲ್ಲಿ ದೂರು ನೀಡಿದರು. ಅಲ್ಲಿ ಅವರಿಗೆ ಯೋಗ್ಯ ಸರಕಾರಿ ಗೌರವವೇ ಸಿಕ್ಕಿತು. ಈ ಪ್ರಮಾದಕ್ಕೆ ನೀವೇ ಹೊಣೆ ಎಂದು ಬ್ಯಾಂಕ್ ಸಮುಜಾಯಿಷಿ ನೀಡಿತು. ಭೋಪಾಲ್ ಸಮಾಚಾರ್ ಈ ಪ್ರಕರಣವನ್ನು ವರದಿ ಮಾಡಿತು.
ಮುಂಬೈ ಕೇಂದ್ರ ಕಚೇರಿಗೆ ದೂರು ನೀಡಿದ್ದು ಕೂಡಾ ನಿಷ್ಪ್ರಯೋಜಕವಾಯಿತು. ಬಳಿಕ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದರು. ಆದರೆ ವಕೀಲರನ್ನು ನಿಯೋಜಿಸುವಷ್ಟು ಹಣವೂ ಸಾಕ್ರೆ ಬಳಿ ಇರಲಿಲ್ಲ. ಭಾರತದ ಅತಿದೊಡ್ಡ ಬ್ಯಾಂಕಿನ ವಕೀಲರ ವಿರುದ್ಧ ತಾವೇ ವಾದ ಮಂಡಿಸಿದರು. ಸಾಕ್ರೆ ತಾವೇ ಹಣ ತೆಗೆದು ಇದೀಗ ಹೋರಾಡುತ್ತಿದ್ದಾರೆ ಎನ್ನುವುದು ಬ್ಯಾಂಕ್ ವಕೀಲರ ವಾದವಾಗಿತ್ತು. ಆದರೆ 12 ವಿಚಾರಣೆಗಳಲ್ಲಿ ಕೂಡಾ ಇದನ್ನು ಸಾಬೀತುಪಡಿಸುವುದು ಅವರಿಗೆ ಸಾಧ್ಯವಾಗದೇ ಸಾಕ್ರೆ ಗೆದ್ದರು.
ಕಳೆದ ವಾರ ನ್ಯಾಯಾಲಯ ಆದೇಶ ಹೊರಡಿಸಿ, ಸಾಕ್ರೆಯವರ 9,200 ರೂಪಾಯಿಗಳನ್ನು ಶೇ. 6ರ ಬಡ್ಡಿ ಸಹಿತ ನೀಡುವಂತೆ, 10 ಸಾವಿರ ರೂಪಾಯಿ ದಂಡ ಹಾಗೂ 2,000 ರೂ. ಕಾನೂನು ವೆಚ್ಚ ನೀಡುವಂತೆ ಸೂಚಿಸಿದೆ.