ಕೇರಳ:ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟದಲ್ಲಿ ಮೃತನಾದ ಆರೆಸ್ಸೆಸ್ ಕಾರ್ಯಕರ್ತನ ಮನೆಯಿಂದ ಆಯುಧಗಳ ವಶ!
Update: 2016-08-22 15:44 IST
ಕೂತ್ತುಪರಂಬ್, ಆಗಸ್ಟ್ 22: ಬಾಂಬ್ ಸ್ಫೋಟದಲ್ಲಿ ಮೃತನಾದ ಆರೆಸ್ಸೆಸ್ ಕಾರ್ಯಕರ್ತ ಕೂತ್ತುಪರಂಬ್ ಕೋಟ್ಟಯಂ ಪೊಯಿಲ್ ಎಂಬಲ್ಲಿನ ದೀಕ್ಷಿತ್‌ನ ಮನೆಯಿಂದ ತಪಾಸಣೆ ವೇಳೆ ಪೊಲೀಸರು ಸಂಗ್ರಹಿಸಿಟ್ಟಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆಂದು ವರದಿಯಾಗಿದೆ,
ಮನೆಯ ಸ್ಟೇರ್‌ಕೇಸ್ ರೂಮ್‌ನ ಮೇಲ್ಭಾಗದಲ್ಲಿ ಆಯುಧಗಳನ್ನು ಸಂಗ್ರಹಿಸಿಡಲಾಗಿತ್ತು. ಶನಿವಾರ ರಾತ್ರಿ ಏಳು ಗಂಟೆಗೆ ಬಲಶಾಲಿ ಸ್ಫೋಟ ನಡೆದು ದೀಕ್ಷಿತ್ ಮೃತನಾಗಿದ್ದ ಎಂದು ತಿಳಿದು ಬಂದಿದೆ. ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ ನಡೆದಿತ್ತೆಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ದೊರಕಿತ್ತು ಎನ್ನಲಾಗಿದೆ. ಸ್ಫೋಟ ನಡೆದಿದ್ದ ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಮನೆ ಮತ್ತು ಪರಿಸರವನ್ನು ಸುಪರ್ದಿಗೆ ಪಡೆದುಕೊಂಡಿದ್ದರು. ನಂತರ ನಡೆಸಿದ ತಪಾಸಣೆ ವೇಳೆ ಆಯುಧಗಳು ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.