ಮೀನು ರಕ್ಷಿಸಲು ಮ.ಪ್ರ. ಸರಕಾರದಿಂದ ವಿನೂತನ ಕ್ರಮ
ಇಂಧೋರ್, ಆ.22: ಹುಲಿಗಳಿಗೆ ರೇಡಿಯೊ ಕಾಲರ್ ಅಳವಡಿಸುವ ಮೂಲಕ ಹುಲಿ ಸಂರಕ್ಷಣೆಗೆ ಕ್ರಮ ಕೈಗೊಂಡಿರುವ ಮಾದರಿಯಲ್ಲೆ ಮಧ್ಯಪ್ರದೇಶ ಸರಕಾರ ರಾಜ್ಯ ಮೀನು ನರ್ಮದಾ ಮಹ್ಸೀರ್ ರಕ್ಷಣೆಗೆ ವಿನೂತನ ಮಾರ್ಗ ಜಾರಿಗೆ ತಂದಿದೆ.
ಅಪಾಯದ ಅಂಚಿನಲ್ಲಿರುವ ಈ ಮೀನು ತಳಿ ಸಂರಕ್ಷಣೆಗೆ ಅಟ್ಲಾಸ್ ಸಿದ್ಧಪಡಿಸುವ ವಿನೂತನ ಪ್ರಯತ್ನ ಪ್ರಗತಿಯಲ್ಲಿದೆ. ಇಂತಹ ಪ್ರಯೋಗ ದೇಶದಲ್ಲೇ ಮೊದಲು. ಯೋಜನೆಯಡಿ ಅರಣ್ಯ ಇಲಾಖೆ ಈಗಾಗಲೇ ನರ್ಮದಾ ಮಹ್ಸೀರ್ ತಳಿಯ ಮೀನುಗಳಿರುವ ಪ್ರದೇಶಗಳನ್ನು ಗುರುತಿಸುವ ಕಾರ್ಯ ಆರಂಭಿಸಿದೆ. ಸಂರಕ್ಷಿತ ಪ್ರದೇಶಗಳಲ್ಲಿ ಗ್ಲೋಬಲ್ ಇನ್ಫಾರ್ಮೇಶನ್ ಸಿಸ್ಟಂ ಮೂಲಕ ಮ್ಯಾಪಿಂಗ್ ಮಾಡಲು ನಿರ್ಧರಿಸಲಾಗಿದೆ.
ಜಿಐಎಸ್ ವಿಧಾನದ ಮೂಲಕ ಭೂಮಿಯ ಮೇಲ್ಮೈಯ ವಿವಿಧ ಮಾಹಿತಿಗಳನ್ನು ಒಂದು ಮ್ಯಾಪ್‌ನಲ್ಲಿ ಸೆರೆಹಿಡಿಯಲು, ಪರಿಶೀಲಿಸಲು ಹಾಗೂ ವರ್ಗೀಕರಿಸಲು ಸಾಧ್ಯವಾಗುತ್ತದೆ. ಒಂದು ಸ್ಥಳಕ್ಕೆ ಭೇಟಿ ನೀಡಲು ಮ್ಯಾಪ್ ಪರಾಮರ್ಶೆ ಮಾಡುವಂತೆ ವಿವಿಧ ಪ್ರಭೇದಗಳ ಅಧ್ಯಯನಕ್ಕೆ ಅವುಗಳ ಚಲನವಲನಗಳನ್ನು ತಿಳಿದುಕೊಳ್ಳುವುದು ಅಗತ್ಯ. ಅವುಗಳ ಪ್ರಮಾಣ ಎಷ್ಟಿದೆ, ಯಾವ ಜಾಗದಲ್ಲಿ ಅವು ಕಂಡುಬರುತ್ತವೆ. ಯಾವ ಸ್ಥಳ ಅವುಗಳ ಸಂತಾನೋತ್ಪತ್ತಿಗೆ ಅನುಕೂಲ ಎಂಬ ಸಮಗ್ರ ಮಾಹಿತಿಯನ್ನು ಪಡೆಯಬೇಕಾಗುತ್ತದೆ ಎಂದು ಮಹ್ಸೀರ್ ತಜ್ಞ ಶಿಪರ್ಣಾ ಸಕ್ಸೇನಾ ಹೇಳುತ್ತಾರೆ.
ಇದಕ್ಕಾಗಿ ದೆನ್ವಾ ನದಿಯ ನಗ್ದ್‌ವಾರಿ ಹಾಗೂ ಸೋನಭದ್ರಾ ಉಪನದಿಗಳನ್ನು ಪರಿಗಣಿಸಲಾಗುತ್ತಿದೆ. ಹಲವು ಮೀನು ಮರಿಗಳು ಈ ನದಿಗಳಲ್ಲಿ ಕಂಡುಬಂದಿದ್ದು ಇವುಗಳ ಮ್ಯಾಪಿಂಗ್ ನಡೆಯುತ್ತಿದೆ. ಇದಕ್ಕಾಗಿ 5 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ವೈಜ್ಞಾನಿಕ ಶಿಷ್ಟಾಚಾರವನ್ನು ಅನುಸರಿಸಿ ತಜ್ಞರಿಗೆ ಇವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಸೂಚಿಸಲು ನೆರವು ನೀಡಲಾಗುತ್ತದೆ ಎಂದು ಇಂಧೋರ್ ವಲಯದ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪಂಕಜ್ ಶ್ರೀವಾಸ್ತವ ವಿವರಿಸಿದ್ದಾರೆ.