ವಿಶ್ವಾಸಾರ್ಹತೆ ಸಾಬೀತುಪಡಿಸುವಂತೆ ದಾವೆದಾರನಿಗೆ ಸು. ಕೋ. ಆದೇಶ
ಹೊಸದಿಲ್ಲಿ, ಆ.22: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕಾಗಿ (ಬಿಡಿಎ) ಸ್ವಾಧೀನಪಡಿಸಿಕೊಳ್ಳಲಾಗಿದ್ದ ಜಮೀನಿನ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಕಾನೂನು ಕ್ರಮಕ್ಕೆ ನೀಡಿದ್ದ ಒಪ್ಪಿಗೆಯನ್ನು ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅರ್ಜಿ ದಾಖಲಿಸಿರುವ ಅರ್ಜಿದಾರನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಇಂದು ಆತನಿಗೆ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ್ ಹಾಗೂ ಎ.ಎಂ.ಸಪ್ರೆಯವರಿದ್ದ ಪೀಠವೊಂದು ಅರ್ಜಿದಾರ, ವಕೀಲ ಸಿರಾಜ್ ಬಾಶಾ ಎಂಬವರಿಗೆ, ಖಾಸಗಿ ಕಕ್ಷಿಯಾಗಿ ಮನವಿ ಸಲ್ಲಿಸುವಲ್ಲಿ ಅವರ ಅರ್ಹತೆಯನ್ನು ಸಾಬೀತುಪಡಿಸುವಂತೆ ಸೂಚಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯಂ, ಇದೊಂದು ಅಪ್ಪಟ ಖಾಸಗಿ ಕಕ್ಷಿಯ ದೂರಾಗಿದ್ದು, ಅವರು ದೂರು ದಾಖಲಿಸಲು ತನಗಿರುವ ಅರ್ಹತೆಯನ್ನು ಸಾಬೀತುಪಡಿಸಲಿದ್ದಾರೆಂದು ತಿಳಿಸಿದ್ದಾರೆ.
ಖಾಸಗಿ ಕಕ್ಷಿಯ ದೂರು ಅಂಗೀಕಾರಾರ್ಹವಾಗಿದ್ದು, ಯಡಿಯೂರಪ್ಪನವರ ವಿರುದ್ಧ ಕ್ರಮ ಕೈಗೊಳ್ಳಲು ಅಂದಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ನೀಡಿದ್ದ ಅನುಮತಿಯನ್ನು ಕರ್ನಾಟಕ ಹೈಕೋರ್ಟ್ ತಪ್ಪಾಗಿ ರದ್ದುಪಡಿಸಿದೆಯೆಂದು ಅವರು ಪ್ರತಿಪಾದಿಸಿದ್ದಾರೆ.