×
Ad

ಗುಜರಾತ್ ದಿನಪತ್ರಿಕೆಯ ಕಚೇರಿಯೊಳಗೇ ಪತ್ರಕರ್ತನ ಹತ್ಯೆ

Update: 2016-08-23 13:38 IST

ಅಹ್ಮದಾಬಾದ್, ಆ.23: ಇಲ್ಲಿನ ಜುನಾಗಢ ಜಿಲ್ಲೆಯಲ್ಲಿ ದಿನ ಪತ್ರಿಕೆಯ ಕಚೇರಿಯೊಂದರಲ್ಲಿ ಕರ್ತವ್ಯದಲ್ಲಿದ್ದ ಪತ್ರಕರ್ತನೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳ ತಂಡ ಕೊಲೆಗೈದು ಪರಾರಿಯಾಗಿದೆ.

  ಸೋಮವಾರ ರಾತ್ರಿ 9:30ಕ್ಕೆ ಇಲ್ಲಿನ ವಂಜಾರ ಚೌಕದಲ್ಲಿರುವ ಗುಜರಾತಿ ದಿನಪತ್ರಿಕೆಯ ಕಚೇರಿಯಲ್ಲಿ ಕಿಶೋರ್ ದವೆ(53) ಕರ್ತವ್ಯನಿರತರಾಗಿದ್ದಾಗಲೇ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳ ತಂಡ ಇರಿದು ಕೊಲೆ ಮಾಡಿದೆ ಎಂದು ಪೊಲೀಸ್ ಅಧಿಕಾರಿ ನೀಲೇಶ್ ಜಜಾದಿಯಾ ಹೇಳಿದ್ದಾರೆ.

ಕಿಶೋರ್ ರಾಜ್‌ಕೋಟ್‌ನಿಂದ ಪ್ರಕಟಿಸಲ್ಪಡುವ ದಿನಪತ್ರಿಕೆಯೊಂದರ ಬ್ಯುರೋ ಮುಖ್ಯಸ್ಥರಾಗಿದ್ದರು.

ಕಿಶೋರ್ ಅವರನ್ನು ಆರು-ಏಳು ಮಂದಿ ಇದ್ದ ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಕೊಲೆಗೈದಿದೆ. ವೈಯಕ್ತಿಕ ದ್ವೇಷವೇ ಹತ್ಯೆಗೆ ಕಾರಣವಾಗಿರಬಹುದೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಸ್‌ಪಿ ನೀಲೇಶ್ ಜಜಾದಿಯಾ ಹೇಳಿದ್ದಾರೆ.

ಕಿಶೋರ್ ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಿಕೊಡಲಾಗಿದ್ದು, ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಜುನಾಗಢ ಬಿ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ.

 ಪೊಲೀಸ್ ಪ್ರಕರಣದಲ್ಲಿ ಯಾವುದೇ ಶಂಕಿತ ಹೆಸರನ್ನು ನಮೂದಿಸಿಲ್ಲ. ಕೊಲೆಯ ಹಿಂದೆ ಸ್ಥಳೀಯ ರಾಜಕಾರಿಣಿಯೊಬ್ಬರ ಮಗನ ಕೈವಾಡವಿದೆ ಎಂದು ದವೆಯ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಆಂಗ್ಲ ವಾಹಿನಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News