×
Ad

ಬಿಜೆಪಿಯ ರಮ್ಯ ನಾಟಕ!

Update: 2016-08-23 23:54 IST

ಕಳೆದ ಒಂದೆರಡು ತಿಂಗಳಲ್ಲಿ ಬಿಜೆಪಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಲು ಆಯ್ಕೆ ಮಾಡಿಕೊಂಡ ಪ್ರಕರಣಗಳನ್ನು ತೆಗೆದುಕೊಳ್ಳಿ. ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ. ಆಮ್ನೆಸ್ಟ್ಟಿ ಆಝಾದಿ ಕೂಗಿದೆ ಎಂಬ ಆರೋಪ. ಇದೀಗ ರಮ್ಯ ‘ಪಾಕಿಸ್ತಾನದ ಜನರೂ ಒಳ್ಳೆಯವರೇ’ ಎಂಬ ಹೇಳಿಕೆ. ರಾಜ್ಯಾದ್ಯಂತ ಬೀದಿಗಿಳಿದು ರಂಪ ಮಾಡಲು ಬಿಜೆಪಿಗೆ ಸಿಕ್ಕಿರುವ ಪ್ರಕರಣಗಳು ತೀರಾ ಖಾಸಗಿಯಾದುದು. ಅದಕ್ಕೂ ಈ ನಾಡಿನ ಜನರಿಗೂ ಯಾವ ಸಂಬಂಧವೂ ಇಲ್ಲ. ಅಂದರೆ ಇದರರ್ಥವೇನು? ಜನರಿಗೆ ಸಂಬಂಧಪಟ್ಟ ಯಾವ ವಿಷಯವೂ ಬಿಜೆಪಿಗೆ ಯಾಕೆ ಮುಖ್ಯವಾಗುವುದಿಲ್ಲ? ಅಥವಾ ಅಂತಹ ಯಾವ ವಿಷಯವೂ ಇಲ್ಲ ಎಂಬ ಕಾರಣಕ್ಕಾಗಿ, ಈ ವೈಯಕ್ತಿಕ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಬೀದಿ ರಂಪಮಾಡುತ್ತಿದೆಯೇ? ಸರಕಾರದ ವೈಫಲ್ಯದ ಕುರಿತಂತೆ ಮಾತನಾಡಲು ವಿರೋಧಪಕ್ಷದ ಬಳಿ ಯಾವುದೇ ವಿಷಯಗಳಿಲ್ಲ ಎನ್ನುವುದು ಪರೋಕ್ಷವಾಗಿ ಸಿದ್ದರಾಮಯ್ಯ ಸರಕಾರದ ಹೆಗ್ಗಳಿಕೆ ಅಲ್ಲವೇ? ಬಿಜೆಪಿ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಅವರು ಬಿಜೆಪಿ ಭ್ರಷ್ಟಾಚಾರದ ವಿರುದ್ಧ , ಗಣಿ ರೆಡ್ಡಿಗಳ ಅಕ್ರಮಗಳ ವಿರುದ್ಧ ಬೀದಿಗಿಳಿದು ಬೃಹತ್ ಚಳವಳಿಯನ್ನೇ ಮಾಡಿದ್ದರು. ನೆರೆ-ಬರ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯವನ್ನು ಅವರು ಬಹಿರಂಗಪಡಿಸುವಲ್ಲಿ ಯಶಸ್ವಿಯಾಗಿದ್ದರು. 

ಆದರೆ ಇಂದಿಗೂ ಬಿಜೆಪಿಗೆ ಸಂಘಟಿತವಾಗಿ ಸಿದ್ದರಾಮಯ್ಯ ಅವರ ಸರಕಾರದ ವಿರುದ್ಧ ನಿಲ್ಲುವುದಕ್ಕೆ ಸಾಧ್ಯವಾಗಿಲ್ಲ. ಸದ್ಯಕ್ಕೆ ಬಿಜೆಪಿಯೊಳಗೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಯಡಿಯೂರಪ್ಪ ನಾಯಕತ್ವದ ವಿರುದ್ಧ ಈಶ್ವರಪ್ಪ ‘ಹಿಂದ’ ರ್ಯಾಲಿಯನ್ನು ಸಂಘಟಿಸಲು ಯತ್ನಿಸುತ್ತಿದ್ದಾರೆ. ಪಕ್ಷದಲ್ಲಿ ತನ್ನನ್ನು ನಾಯಕರು ಮೂಲೆಗುಂಪು ಮಾಡುತ್ತಿರುವುದು ಅರಿವಿಗೆ ಬಂದಿರುವ ಹಿನ್ನೆಲೆಯಲ್ಲಿ, ತನ್ನ ಹಿಂದುಳಿದವರ್ಗ ಜಾತಿಯನ್ನು ಮುಂದಿಟ್ಟುಕೊಂಡು ಪಕ್ಷದ ನಾಯಕರನ್ನು ಬ್ಲಾಕ್‌ಮೇಲ್ ಮಾಡಲು ಯತ್ನಿಸುತ್ತಿದ್ದಾರೆ. ತನ್ನ ವಿರುದ್ಧ ಪಕ್ಷದೊಳಗೇ ನಡೆಯುತ್ತಿರುವ ಒಳಸಂಚುಗಳಿಂದ ಸಿಟ್ಟಿಗೆದ್ದಿರುವ ಯಡಿಯೂರಪ್ಪ, ಪಕ್ಷ ಸಂಘಟನೆಯಲ್ಲಿ ವಿಶೇಷ ಆಸಕ್ತಿ ತೋರಿಸುತ್ತಿಲ್ಲ. ಪಕ್ಷದೊಳಗೆ ತನ್ನ ವಿರುದ್ಧ ಮಾತನಾಡುತ್ತಿರುವ ನಾಯಕರನ್ನು ಸರಿದಾರಿಗೆ ತರದೇ, ತಾನು ಪಕ್ಷ ಸಂಘಟನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಲು ಸಾಧ್ಯವಿಲ್ಲ ಎನ್ನುವುದನ್ನು ದಿಲ್ಲಿ ವರಿಷ್ಠರಿಗೆ ಈಗಾಗಲೇ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಹೀಗೆ, ತಮ್ಮಾಳಗೆ ಸಾವಿರ ಸಮಸ್ಯೆಗಳನ್ನು ಸರಿಪಡಿಸಲಾಗದೆ ಒದ್ದಾಡುತ್ತಿರುವ ಹಿನ್ನೆಲೆಯಲ್ಲಿ ನಾಯಕರಿಗೆ ಸರಕಾರದ ವೈಫಲ್ಯಗಳ ವಿರುದ್ಧ ಸಂಘಟಿತವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಯಾರೋ ಪೊಲೀಸ್ ಅಧಿಕಾರಿ ತನ್ನ ಬದುಕಿನ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಅಥವಾ ಸರಕಾರದಲ್ಲಿ ಅಥವಾ ಪಕ್ಷದಲ್ಲಿ ವಿಶೇಷ ಸ್ಥಾನಮಾನವನ್ನೇನೂ ಹೊಂದಿಲ್ಲದ ರಮ್ಯಾರಂತಹ ನಾಯಕಿಯರನ್ನು ಮುಂದಿಟ್ಟುಕೊಂಡು ಬೀದಿ ರಂಪ ಮಾಡುತ್ತಿದ್ದಾರೆ. ಆಮ್ನೆಸ್ಟ್ಟಿಯಲ್ಲಿ ನಡೆದ ಕಾರ್ಯಕ್ರಮದ ಸದುದ್ದೇಶವನ್ನೇ ಮುಚ್ಚಿಟ್ಟು, ಹೇಳಿಕೆಗಳನ್ನು ತಿರುಚಿ ನಡುರಸ್ತೆಯಲ್ಲಿ ಎಬಿವಿಪಿ ಕಾರ್ಯಕರ್ತರು ಹೊರಳಾಡುತ್ತಿದ್ದಾರೆ. ಸದ್ಯಕ್ಕೆ ಕರ್ನಾಟಕದಲ್ಲಿ ರೈತರೂ ಸೇರಿದಂತೆ ಜನರಿಗೆ ಯಾವ ಸಮಸ್ಯೆಯೂ ಇಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸುತ್ತಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಈ ದೇಶದ ಸೈನಿಕರ ಕುರಿತಂತೆ ಧಾರಾಕಾರವಾಗಿ ಕಣ್ಣೀರು ಸುರಿಸುತ್ತಿತ್ತು. ಯೋಧನೊಬ್ಬನ ತಲೆ ಕತ್ತರಿಸಿದ ಪ್ರಕರಣವನ್ನು ಮುಂದಿಟ್ಟುಕೊಂಡು, ಯುಪಿಎ ಸರಕಾರವನ್ನು ಟೀಕಿಸಿತ್ತು. ಆದರೆ ಮೋದಿ ಅಧಿಕಾರಕ್ಕೆ ಬಂದಾಕ್ಷಣ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಲ್ಲಿನ ಪ್ರಧಾನಿ ನವಾಝ್ ಶರೀಫ್‌ಗೆ ಆಹ್ವಾನ ನೀಡಿತು. ಹಾಗೆಂದು ಇದನ್ನು ತಪ್ಪು ನಿರ್ಧಾರವೆನ್ನುವಂತಿಲ್ಲ. ಇದೊಂದು ಮುತ್ಸದ್ದಿ ನಿರ್ಧಾರ, ಮುಂದಿನ ಪಾಕ್-ಭಾರತ ಮಾತುಕತೆಯಲ್ಲಿ ಧನಾತ್ಮಕ ಫಲಿತಾಂಶವನ್ನು ಕೊಡುವುದಕ್ಕೆ ಇದು ಸಹಕಾರಿಯಾಗಬಹುದು ಎಂದು ದೇಶ ನಂಬಿತು. ಇದಾದ ಬಳಿಕ ಪಾಕಿಸ್ತಾನದ ಕುರಿತಂತೆ ಆರೆಸ್ಸೆಸ್ ಕೂಡ ಅತ್ಯಂತ ಆತ್ಮೀಯ ಹೇಳಿಕೆಗಳನ್ನು ನೀಡಿತು. ಪಾಕಿಸ್ತಾನಿಯರು ನಮ್ಮ ಸಹೋದರರು ಎಂದು ಸುಶ್ಮಾ ಸ್ವರಾಜ್ ಸಚಿವೆಯಾಗಿ ಹೇಳಿಕೆ ನೀಡಿದರು. ಇವೆಲ್ಲವೂ ಉಭಯ ದೇಶಗಳ ಸಂಬಂಧಗಳಿಗೆ ಪೂರಕವಾಗುವಂತಹ ಮಾತುಗಳು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಇಂತಹ ಮನಸ್ಥಿತಿಯ ಮೂಲಕವೇ, ಪಾಕಿಸ್ತಾನದೊಂದಿಗೆ ಮೂಲಕ ಗರಿಷ್ಠ ಸಂಬಂಧವನ್ನು ಉಳಿಸಿಕೊಂಡಿದ್ದರು. ಬಹುಶಃ ಅದನ್ನು ಮೋದಿ ಸರಕಾರವೂ ಮುಂದುವರಿಸುತ್ತದೆಯೋ ಎಂಬ ನಿರೀಕ್ಷೆ ದೇಶದ ಜನರಿಗಿತ್ತು. ಇದೇ ಸಂದರ್ಭದಲ್ಲಿ, ನವಾಜ್ ಶರೀಫ್ ಕುಟುಂಬದ ಮದುವೆಯೊಂದಕ್ಕೆ ಮೋದಿ ಕರೆಯದೆಯೇ ಅನಿರೀಕ್ಷಿತವಾಗಿ ತೆರಳಿ ಮುಜುಗರವನ್ನೂ ಸೃಷ್ಟಿಸಿದ್ದರು.

ನವಾಝ್ ಶರೀಫ್ ಅವರ ಕುಟುಂಬದ ಖಾಸಗಿ ಕಾರ್ಯಕ್ರಮವೊಂದಕ್ಕೆ ಬರೇ ಮದುವೆ ಊಟ ಮಾಡುವುದಕ್ಕಾಗಿ ಈ ದೇಶದ ಪ್ರಧಾನಿ ತೆರಳುವ ಮೂಲಕ, ತನ್ನ ಸ್ಥಾನದ ಹಿರಿಮೆಯನ್ನು ಕಡಿಮೆ ಗೊಳಿಸಿದರೋ ಎಂಬ ಅನಿಸಿಕೆ ಹಲವರಲ್ಲಿ ಸೃಷ್ಟಿಯಾಗಿತ್ತು. ಆದರೆ ಈ ಸಂದರ್ಭದಲ್ಲಿ ಬಿಜೆಪಿಯಾಗಲಿ, ಸಂಘಪರಿವಾರವಾಗಲಿ ತುಟಿ ಬಿಚ್ಚಿರಲಿಲ್ಲ. ಇದೀಗ ಉಭಯದೇಶಗಳ ಸಾಂಸ್ಕೃತಿಕ ವಿನಿಮಯದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತೆರಳಿ ಮರಳಿರುವ ಕಾಂಗ್ರೆಸ್ ನಾಯಕಿ ರಮ್ಯಾ ಅವರು ‘ಪಾಕಿಸ್ತಾನಿಯರು ಒಳ್ಳೆಯವರು’ ಎಂದು ಹೇಳಿಕೆ ನೀಡಿರುವುದು ಮಾತ್ರ ಬಿಜೆಪಿಯ ಕೆಲ ನಾಯಕರಿಗೆ ದೇಶದ್ರೋಹದ ಹೇಳಿಕೆಯಾಗಿ ಕಾಣಿಸಿದೆ. ರಮ್ಯಾ ಸೇರಿದಂತೆ ಈ ದೇಶದ ಹಲವು ಮಹನೀಯರನ್ನು ಸಂಬಂಧ ಸುಧಾರಣೆಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಕಳುಹಿಸಿರುವುದು ಕೇಂದ್ರ ಸರಕಾರವೇ ಆಗಿರುವಾಗ, ರಮ್ಯಾ ಅಲ್ಲಿಂದ ಬಂದು ‘ಪಾಕಿಸ್ತಾನವನ್ನು ನಿಂದಿಸಬೇಕಿತ್ತೇ?’. ಅಥವಾ ಪಾಕಿಸ್ತಾನದ ಜನರಿಗೆ ಕೋರೆಹಲ್ಲುಗಳಿವೆ, ಕೊಂಬುಗಳಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಬೇಕಾಗಿತ್ತೇ? ಈ ದೇಶದ ರಕ್ಷಣಾ ಸಚಿವರಾದವರು ತಾಳ್ಮೆ, ವಿವೇಕ, ಮುತ್ಸದ್ದಿತನವನ್ನು ಮರೆತು ಪ್ರಮೋದ್ ಮುತಾಲಿಕ್‌ನ ಮಟ್ಟಕ್ಕಿಳಿದು ‘ಪಾಕಿಸ್ತಾನವೆಂದರೆ ನರಕ’ ಎಂಬ ಹೇಳಿಕೆ ನೀಡಿದಂತೆ ರಮ್ಯಾ ಅವರು ನೀಡಬೇಕಾಗಿತ್ತೇ? ರಮ್ಯಾ ಹೇಳಿಕೆ ದೇಶದ್ರೋಹವಾಗಿದ್ದರೆ, ನವಾಝ್ ಶರೀಫ್ ಮದುವೆಯಲ್ಲಿ ಉಂಡು, ಅವರ ತಾಯಿಗೆ ಸೀರೆಯನ್ನು ಉಡುಗೊರೆಯಾಗಿ ಕೊಟ್ಟ ನರೇಂದ್ರ ಮೋದಿಯೂ ದೇಶದ್ರೋಹಿಯೇ ಆಗುತ್ತಾರಲ್ಲವೇ?

ಭಾರತದ ಕ್ರೀಡಾಳುಗಳನ್ನು, ನಟರನ್ನು, ಚಿಂತಕರನ್ನು ಇಷ್ಟಪಡುವ ಲಕ್ಷಾಂತರ ಜನರು ಪಾಕಿಸ್ತಾನದಲ್ಲಿದ್ದಾರೆ. ಹಾಗೆಯೇ ಪಾಕಿಸ್ತಾನದ ಕ್ರೀಡಾಪಟುಗಳು, ಹಾಡುಗಾರರು, ಬರಹಗಾರರನ್ನು ಇಷ್ಟಪಡುವ ಕೋಟ್ಯಂತರ ಜನ ಭಾರತದಲ್ಲೂ ಇದ್ದಾರೆ. ಈ ಅನುಸಂಧಾನವೇ ಉಭಯದೇಶಗಳ ನಡುವಿನ ಸಂಬಂಧವನ್ನು ಉಳಿಸಿದೆ. ಇಂದು ನಾವು ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕಾದುದು, ಒಳಿತನ್ನು ಮಾತನಾಡಿದ ರಮ್ಯಾರಂತಹವರ ವಿರುದ್ಧವಲ್ಲ. ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ಜನರನ್ನು ಒಡೆಯಲು ಹವಣಿಸಿದ ಪ್ರಮೋದ್ ಮುತಾಲಿಕ್‌ರಂತಹವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಆದರೆ ವಿಪರ್ಯಾಸವೆಂದರೆ ಈವರೆಗೆ ಆತನ ವಿರುದ್ಧ ಬಿಜೆಪಿಯ ಜನರು ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ. ಉಡುಪಿಯಲ್ಲಿ ತಮ್ಮದೇ ಬಿಜೆಪಿ ಮುಖಂಡನೊಬ್ಬನನ್ನು ದನದ ವ್ಯಾಪಾರ ಮಾಡುತ್ತಿದ್ದ ಹೆಸರಿನಲ್ಲಿ ಬರ್ಬರವಾಗಿ ಕೊಂದು ಹಾಕಿದ ಕ್ರಿಮಿನಲ್‌ಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಬೇಕಾಗಿದೆ. ಆದರೆ ಅವರು, ಹಿಂದುತ್ವದ ಮುಖವಾಡ ಹಾಕಿಕೊಂಡು ಬಹಿರಂಗವಾಗಿ ಓಡಾಡುತ್ತಿದ್ದಾರೆ. ಬಿಜೆಪಿ ಮತ್ತು ಸಂಘಪರಿವಾರದ ದೆಸೆಯಿಂದಾಗಿ ದೇಶದ್ರೋಹಿಗಳೆಂದು ಗುರುತಿಸುವುದಕ್ಕೆ ಭಾರತೀಯರೆಲ್ಲರೂ ಹಂಬಲಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಸಂಘಪರಿವಾರ ಮತ್ತು ಆರೆಸ್ಸೆಸ್ ತನ್ನನ್ನು ‘ದೇಶದ್ರೋಹಿ’ ಎಂದು ಕರೆಯದೇ ಇದ್ದರೆ ತನ್ನ ದೇಶಪ್ರೇಮದಲ್ಲಿ ಏನೋ ತಪ್ಪುಗಳಿವೆ ಎಂದು ಜನರು ಅನುಮಾನಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಅಮಾಯಕರ ಹತ್ಯೆಯನ್ನು ಖಂಡಿಸುವುದು, ಸೌಹಾರ್ದವನ್ನು ಹರಡುವುದು,ಕ್ರಿಮಿನಲ್‌ಗಳನ್ನು ಟೀಕಿಸುವುದು ದೇಶದ್ರೋಹವೇ ಆಗಿದ್ದರೆ ಈ ದೇಶದಲ್ಲಿ ಅಂತಹ ದೇಶದ್ರೋಹಿಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಮ್ಯಾ ಅವರನ್ನು ನಾವೆಲ್ಲ ಅಭಿನಂದಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News