ಕಾದಂಬರಿ

Update: 2016-08-24 18:59 GMT

--ದೊಡ್ಡಮ್ಮನ ಬದುಕಲ್ಲಿ ಬಿರುಗಾಳಿ--
ಮದುವೆಯಾದ ಮೇಲೆ, ಹಸನ್ ಮೌಲವಿ ಈ ಮನೆಗೆ ಅಳಿಯನಾಗಿ ಬಂದ ಮೇಲೆ ಈ ಮನೆಯ, ನಿನ್ನಜ್ಜನ ಗೌರವ ಇನ್ನೂ ಹೆಚ್ಚಾಯಿತು. ಮನೆಗೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಾಯಿತು.
ನಿನ್ನ ದೊಡ್ಡಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಖ್ಯಾತ ಪಂಡಿತ, ಎಲ್ಲರೂ ಗೌರವಿಸುವ ಸುಂದರ ಯುವಕ ತನ್ನ ಗಂಡನಾಗಿ ಬಂದದ್ದು, ಅವರಿಗೆ ಮೊದ ಮೊದಲು ಅರಗಿಸಿಕೊಳ್ಳಲೇ ಆಗಲಿಲ್ಲವಂತೆ. ಗಂಡನ ಜೊತೆ ಹೊಂದಿಕೊಳ್ಳಲು ಅವರಿಗೆ ತಿಂಗಳುಗಳೇ ಬೇಕಾಯಿತಂತೆ. ಆನಂತರದ ದಿನಗಳಲ್ಲಿ ನಿನ್ನ ದೊಡ್ಡಮ್ಮನ ಬಾಳು ಸ್ವರ್ಗವಾಯಿತಂತೆ. ಗಂಡನ ಪ್ರೀತಿಯ ಹೊಳೆಯಲ್ಲಿ ಅವರು ಕೊಚ್ಚಿ ಹೋದರು. ಆಮೇಲೆ ನಿನ್ನ ದೊಡ್ಡಮ್ಮನಿಗೆ ಗಂಡನಲ್ಲದೇ ಬೇರೇನೂ ಬೇಡವಾಯಿತು. ತಿಂಗಳಲ್ಲಿ ಒಂದೆರಡು ವಾರ ಅವರು ಪರವೂರಿಗೆ ಮತ ಪ್ರಸಂಗಕ್ಕೆಂದು ಹೋಗುತ್ತಿದ್ದರು. ಹೀಗೆ ಹೋದಾಗ ನಿನ್ನ ದೊಡ್ಡಮ್ಮ ಮಂಕಾಗಿ ಬಿಡುತ್ತಿದ್ದರು. ಪ್ರತಿಕ್ಷಣವೂ ಚಡಪಡಿಸುತ್ತಿದ್ದರು. ಅವರು ಬಂದೊಡನೆ ಮತ್ತೆ ಸ್ವರ್ಗದೊಳಗೆ ಪ್ರವೇಶಿಸಿ ಬಿಡುತ್ತಿದ್ದರು.

ಗಂಡನ ಪ್ರತಿಯೊಂದು ಕೆಲಸವನ್ನು ತಾನೇ ಮಾಡಬೇಕು, ಅವರಿಗೆ ಇಷ್ಟವಾದ ಅಡುಗೆಯನ್ನು ಮಾಡಿ ಬಡಿಸುವುದು, ಅವರ ಎಲ್ಲ ಅಗತ್ಯಗಳನ್ನು ಪೂರೈಸುವುದರಲ್ಲೇ ಇವರು ಸುಖ ಕಾಣುತ್ತಿದ್ದರು. ಅದೇನೋ ಹೇಳ್ತಾರಲ್ಲ, ಕಾಲಲ್ಲಿ ಮಾಡಲು ಹೇಳಿದ್ದನ್ನು ಕೈಯಲ್ಲಿ ಮಾಡಿಕೊಡುವುದೂಂತ ಹಾಗೆ ಅವರು ಗಂಡನ ನೆರಳಿನಂತೆ ಆಗಿಬಿಟ್ಟಿದ್ದರು. ಅವರು ಗಂಡನನ್ನು ಎಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದರೂ ಅಂದರೆ- ಎಲ್ಲರೂ ಅವರನ್ನು ‘ಗಂಡನ ಹುಚ್ಚು ಹಿಡಿದಿದೆ’ ಅಂತ ತಮಾಷೆ ಮಾಡುತ್ತಿದ್ದರಂತೆ.
ಇವರ ಪ್ರೀತಿಯನ್ನು ಕಂಡು ಅಜ್ಜನೇ ಈ ಜೋಡಿ ಹಕ್ಕಿಗಳಿಗೆ ಜಾಗ ಖರೀದಿಸಿ ಒಂದು ಗೂಡು ಕಟ್ಟಿಕೊಟ್ಟ ರಂತೆ. ಆ ಗೂಡಲ್ಲಿ ಗಂಡನ ಪ್ರೀತಿಯಲ್ಲಿ ಮಿಂದೆದ್ದ ಹೆಣ್ಣು ಹಕ್ಕಿ ಗರ್ಭ ಧರಿಸಿತಂತೆ. ಅಜ್ಜಿ ಭರ್ಜರಿಯಾಗಿ ಸೀಮಂತ ಮಾಡಿ ಮತ್ತೆ ಮನೆಗೆ ಕರೆಸಿಕೊಂಡರಂತೆ. ಹೀಗೆ ಮೂರು ಹೆಣ್ಣು ಮರಿಗಳಿಗೆ ಜನ್ಮವಿತ್ತ ಆ ಹೆಣ್ಣು ಹಕ್ಕಿ ಸುಖದ ಉತ್ತುಂಗದಲ್ಲಿ ಹಾರಾಡುತ್ತಿದ್ದಾಗ ಸಿಡಿಲಿನಂತೆ ಕೆಟ್ಟ ಸುದ್ದಿಯೊಂದು ಬಂದು ಆ ಮನೆಗೆ ಅಪ್ಪಳಿಸಿತ್ತು. ಅಂದಿನಿಂದ ಆ ಮನೆ-ಈ ಮನೆ ನರಕದ ಕೂಪವಾಯಿತು.

‘‘ಏನದು ಮಾಮಿ, ಅಂತಹ ಕೆಟ್ಟ ಸುದ್ದಿ?’’ ತಾಹಿರಾ ಕುತೂಹಲ ತಾಳಲಾರದೆ ಎದ್ದು ಕುಳಿತಳು.
ಐಸು ಸ್ವಲ್ಪ ಹೊತ್ತು ಕಲ್ಲಿನಂತೆ ಹಾಗೆಯೇ ಕುಳಿತುಬಿಟ್ಟಳು.
‘‘ಯಾಕೆ ಮಾಮಿ, ಹೇಳೋದಕ್ಕೆ ಆಗೋದಿಲ್ವಾ?’’
‘‘ಹಸನ್ ಮೌಲವಿ ಇನ್ನೊಂದು ಮದುವೆಯಾಗಿ ದ್ದಾರೆ ಎಂಬ ಸುದ್ದಿ!’’
ಪಕ್ಕದ ಮನೆಯ ಹೆಂಗಸೊಬ್ಬರು ಎಲ್ಲಿಗೋ ಮದುವೆಗೆ ಹೋಗಿದ್ದವರು ಈ ಸುದ್ದಿ ತಂದು ನಿನ್ನ ದೊಡ್ಡಮ್ಮನ ಕಿವಿಗೆ ಹಾಕಿದ್ದರು. ದೊಡ್ಡಮ್ಮನಿಗೆ ಹುಚ್ಚು ಹಿಡಿದು ಬಿಟ್ಟಿತ್ತು.
ಎಲ್ಲಿಗೋ ಹೋಗಿದ್ದ ಮೌಲವಿಯವರು ಅಂದು ಮನೆಗೆ ಬಂದಾಗ ನಿನ್ನ ದೊಡ್ಡಮ್ಮ ರಣಚಂಡಿಯಾಗಿ ಬಾಗಿಲಲ್ಲಿ ನಿಂತು ಅವರನ್ನು ಮನೆಯೊಳಗೆ ಪ್ರವೇಶಿಸಲು ಬಿಡಲಿಲ್ಲವಂತೆ.
‘‘ನಾನೊಂದು ಸುದ್ದಿ ಕೇಳಿದೆ, ಅದು ನಿಜವಾ?’’ ದೊಡ್ಡಮ್ಮ ಕೋಪದಿಂದ ಬುಸುಗುಟ್ಟುತ್ತಿದ್ದರು.
‘‘ಏನದು ಸುದ್ದಿ? ಒಳಗೆ ಹೋಗುವ, ಅಲ್ಲಿ ಮಾತನಾಡುವ’’ ಮೌಲವಿ ಕುದಿಯುತ್ತಿರುವ ಹೆಂಡತಿಯನ್ನು ಕಂಡು ಒಂದು ಕ್ಷಣ ಬೆಚ್ಚಿದರು.

‘‘ಒಳಗೆ ಹೋಗಬೇಕಾದರೆ ನನ್ನ ಪ್ರಶ್ನೆಗೆ ಉತ್ತರ ಹೇಳಿ. ನೀವು ಇನ್ನೊಂದು ಮದುವೆಯಾಗಿದ್ದೀರಂತೆ ಹೌದಾ...?’’
ಮೌಲವಿಯನ್ನು ಎತ್ತಿ ನೆಲಕ್ಕಪ್ಪಳಿಸಿದಂತ್ತಿತ್ತು ಪ್ರಶ್ನೆ.
‘‘ಏನಾಗಿದೆ ನಿನಗೆ..., ಒಳಗೆ ಹೋಗಿ ಮಾತನಾಡುವ ಅಂದೆನಲ್ಲ...’’
‘‘ಇಲ್ಲ, ನೀವು ಒಳಗೆ ಬರಬೇಕಾದರೆ ನನ್ನ ಪ್ರಶ್ನೆಗೆ ಉತ್ತರ ಹೇಳಿಯೇ ಬರಬೇಕು. ಇಲ್ಲ ನನ್ನ ಕೊಂದು ಒಳಗೆ ಬರಬೇಕು...’’ ದೊಡ್ಡಮ್ಮನ ಆರ್ಭಟ, ಕಿರುಚಾಟ ಕ್ಷಣಕ್ಷಣವೂ ಹೆಚ್ಚಾಗತೊಡಗಿತ್ತಂತೆ.
ಮೌಲವಿ ನಾಚಿಕೆ, ಅವಮಾನದಿಂದ ಕುಸಿಯತೊಡ ಗಿದ್ದರು. ಅವರು ಕಂಬದಂತೆ ನಿಂತುಬಿಟ್ಟಿದ್ದರು. ಹೆಂಡತಿಯ ಪ್ರಶ್ನೆಗೆ ಅವರು ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ.

‘‘ಜಮೀಲಾ, ಒಳಗೆ ಹೋಗುವಾ...’’ ಅವರು ಸಮಾಧಾನದಿಂದಲೇ ಹೇಳಿದರು. ಅವರ ಧ್ವನಿ ನಡುಗುತ್ತಿತ್ತು.
‘‘ನನ್ನ ಮೂರು ಮಕ್ಕಳ ಮೇಲೆ ಆಣೆ ಹಾಕಿ ಹೇಳುತ್ತೇನೆ. ನನ್ನ ಪ್ರಶ್ನೆಗೆ ಉತ್ತರ ಹೇಳದೆ ನಾನು ನಿಮ್ಮನ್ನು ಒಳಗೆ ಬಿಡುವುದಿಲ್ಲ’’ ದೊಡ್ಡಮ್ಮ ತನ್ನ ಮೈಮೇಲಿನ ಬಟ್ಟೆಯ ಪರಿವೆಯೂ ಇಲ್ಲದೆ ಅರಚಾಡತೊಡಗಿದ್ದರು. ತಾಯಿಯ ಅವತಾರ ಕಂಡು ಮಕ್ಕಳೂ ಹೆದರಿ ಅಳತೊಡಗಿದ್ದರು. ಪಕ್ಕದ ಮನೆಗಳ ಕಿಟಕಿ, ಬಾಗಿಲುಗಳು ತೆರೆದುಕೊಂಡವು. ಪರದೆಗಳು ಸರಿಯತೊಡಗಿದವು. ಒಬ್ಬೊಬ್ಬರಾಗಿ ಮೌಲವಿಯ ಮನೆಯ ಮುಂದೆ ನೆರೆಯತೊಡಗಿದರು. ವಿಷಯ ಈ ಮನೆಯವರೆಗೂ ಬಂದು ತಲುಪಿತು. ಅಜ್ಜ ಉಟ್ಟ ಬಟ್ಟೆಯಲ್ಲಿಯೇ ಹೊರಟುಬಿಟ್ಟಿದ್ದರಂತೆ.

‘‘ಹೇಳಿ, ನೀವು ಇನ್ನೊಂದು ಮದುವೆಯಾಗಿದ್ದು ಹೌದಾ...?’’ ದೊಡ್ಡಮ್ಮ ಈಗ ಗಂಡನ ಅಂಗಿಯ ಕತ್ತಿನ ಪಟ್ಟಿಯನ್ನು ಹಿಡಿದು ಎಳೆದಾಡತೊಡಗಿದ್ದರು. ಮೌಲವಿ ಮಾತನಾಡಲಿಲ್ಲ. ಅವರ ಇಡೀ ದೇಹ ಈಗ ಬೆವರತೊಡಗಿತ್ತು. ಅವರು ಕ್ಷಣಕ್ಷಣವೂ ಸೋಲ ತೊಡಗಿದ್ದರು. ಜೊತೆಗೆ ಇಡೀ ಊರ ಜನರ ಮುಂದೆ ಬೆತ್ತಲಾದಂತೆ ನಾಚಿಕೆ, ಅವಮಾನದಿಂದ ಕುಸಿದುಬಿಟ್ಟಿದ್ದರು.

‘‘ಇಲ್ಲಾಂತ ಹೇಳಿ... ದೇವರಾಣೆ ಇಲ್ಲಾಂತ ಹೇಳಿ... ನನ್ನ ಗಂಡ ಅಂಥವರಲ್ಲಾಂತ ಇಡೀ ಊರಿಗೆ ಗೊತ್ತಾಗಬೇಕು...’’ ದೊಡ್ಡಮ್ಮ ಅಳುತ್ತಾ, ಕಿರುಚಾಡ ತೊಡಗಿದ್ದರಂತೆ.
ಮೌಲವಿಯ ಬಾಯಿಗೆ ಈಗ ಬೀಗ ಜಡಿಯಲಾಗಿತ್ತು. ಅವರು ಅಪರಾಯಂತೆ ನಿಂತುಬಿಟ್ಟಿದ್ದರು.
ಮಗಳ ಮನೆಯ ಮುಂದೆ ಸೇರಿದ ಜನರ ಗುಂಪನ್ನು ದೂರದಲ್ಲೇ ಕಂಡ ಅಜ್ಜ ಭಯದಿಂದ ಓಡೋಡಿ ಹೋಗಿದ್ದರಂತೆ. ಜಗಲಿಯೇರಿದರೆ ಮಗಳು ಮೌಲವಿಯ ಅಂಗಿಯ ಪಟ್ಟಿಯನ್ನು ಹಿಡಿದು ಜಗ್ಗಾಡುತ್ತಿದ್ದರಂತೆ. ಮೌಲವಿ ಕತ್ತು ಬಗ್ಗಿಸಿ ಮೌನವಾಗಿ ಕಂಬದಂತೆ ನಿಂತುಬಿಟ್ಟಿದ್ದರಂತೆ.
‘‘ಜಮೀಲಾ... ಏನಾಗಿದೆ ನಿನಗೆ... ಏನಿದು...?’’ ಅಜ್ಜ ಕೋಪ, ಅವಮಾನದಿಂದ ದೊಡ್ಡಮ್ಮನ ರಟ್ಟೆಯಲ್ಲಿ ಹಿಡಿದು ಎಳೆದರು. ದೊಡ್ಡಮ್ಮ ಬಿಡಲಿಲ್ಲ. ಚಂಡಿ ಹಿಡಿದ ಮಗುವಿನಂತೆ ಅರಚುತ್ತಲೇ ಇದ್ದರು. ಅಜ್ಜನ ಕೋಪ ಈಗ ನೆತ್ತಿಗೇರಿತ್ತು. ಅಜ್ಜ ದೊಡ್ಡಮ್ಮನ ಕಪಾಳಕ್ಕೊಂದು ಬಾರಿಸಿದರಂತೆ. ಅಜ್ಜನ ಪೆಟ್ಟಿಗೆ ದೊಡ್ಡಮ್ಮ ಸ್ತಬ್ಧವಾದರು. ಸುತ್ತಲೂ ನೋಡಿದರು. ಅವರಿಗೀಗ ತಾನೆಲ್ಲಿದ್ದೇನೆ ಎಂಬುದು ಅರಿವಾಗಿತ್ತು. ತನ್ನ ಮನೆ ಮುಂದೆ ಸೇರಿದ ಜನ, ತನ್ನ ತಂದೆಯನ್ನು ನೋಡಿದವರೇ ಅವರು ಮೌನವಾಗಿ ಏದುಸಿರು ಬಿಡುತ್ತಾ ಕಂಬದಂತೆ ನಿಂತು ಬಿಟ್ಟಿದ್ದರಂತೆ.
‘‘ಏನಿದು ಹುಚ್ಚಾಟ ನಿನ್ನದು... ನಡಿ ಒಳಗೆ...’’ ಅಜ್ಜ ಅವರನ್ನು ಎಳೆದುಕೊಂಡೇ ಒಳಗೆ ನಡೆದರು. ಮೌಲವಿ ಇನ್ನೂ ನಿಂತೇ ಇದ್ದರು. ಅಜ್ಜ ಬಂದು ಅವರನ್ನೂ ಎಳೆದುಕೊಂಡು ಮನೆಯೊಳಗೆ ಹೋಗಿ ಬಾಗಿಲೆಳೆದು ಕೊಂಡರು. ಮನೆಯ ಮುಂದೆ ಸೇರಿದ್ದ ಜನ ಒಬ್ಬೊಬ್ಬರು ಒಂದೊಂದು ಮಾತನಾಡುತ್ತಾ ಚದುರತೊಡಗಿದರು.

‘‘ಏನಿದು ಗಲಾಟೆ ನಿನ್ನದು... ಯಾಕೆ ಹೀಗೆ ಅರಚುತ್ತಿದ್ದಿ...’’ ಅಜ್ಜ ಮಗಳ ಮುಂದೆ ನಿಂತು ಕೇಳಿದರು.
‘‘ಅವರು... ಅವರು... ‘‘ದೊಡ್ಡಮ್ಮನ ಬಾಯಿಯಿಂದ ಮತ್ತೆ ಮಾತೇ ಹೊರಡಲಿಲ್ಲವಂತೆ. ಅವರು ಎರಡು ಕೈಗಳಿಂದಲೂ ಮುಖ ಮುಚ್ಚಿಕೊಂಡು ಗೋಳೋ ಎಂದು ಅತ್ತುಬಿಟ್ಟರಂತೆ.
‘‘ಏನಿದು... ಏನು ವಿಷಯ...?’’ ಅಜ್ಜ ಅಳಿಯನ ಕೈ ಹಿಡಿದು ವಿನೀತರಾಗಿ ಕೇಳಿದರು.
ಅಳಿಯ ಮಾತನಾಡಲಿಲ್ಲ. ಅವರು ನೆಲ ನೋಡುತ್ತಾ ಹಾಗೆಯೇ ನಿಂತು ಬಿಟ್ಟಿದ್ದರು. ಅಜ್ಜ ಅಲ್ಲೇ ಇದ್ದ ಕುರ್ಚಿಯಲ್ಲಿ ಕುಸಿದು ಕುಳಿತರು. ಅವರಿಗೀಗ ಅಳಿಯನಿಂದ ವಿಷಯ ತಿಳಿಯುವುದಿಲ್ಲ ಎಂಬುದು ಖಾತ್ರಿಯಾಗಿತ್ತು. ಅವರು ಮಗಳ ಅಳು ನಿಲ್ಲುವವರೆಗೆ ಕಾಯಬೇಕಾಗಿತ್ತು. ಅವರು ಹಾಗೆಯೇ ಕಣ್ಣುಮುಚ್ಚಿ ಕುಳಿತು ಕಾಯತೊಡಗಿದರು.
‘‘ಇವರು ಇನ್ನೊಂದು ಮದುವೆಯಾಗಿದ್ದಾರಂತೆ... ಹೌದಾ ಕೇಳಿ ಅಪ್ಪಾ... ಹೌದಾ ಕೇಳಿ... ನಾನು ಎಷ್ಟು ಕೇಳಿದರೂ ಇವರು ಬಾಯಿ ಬಿಡುವುದಿಲ್ಲ...’’ ದೊಡ್ಡಮ್ಮ ಅಳು ನಿಲ್ಲಿಸಿ ಮತ್ತೆ ಅಜ್ಜನ ಮೇಲೆ ಬಿದ್ದರು.

ಅಜ್ಜನಿಗೆ ಸಿಡಿಲು ಬಡಿದಂತಾಗಿತ್ತು. ಅವರಿಗೆ ಮಗಳ ಮಾತನ್ನು ಅರಗಿಸಿಕೊಳ್ಳಲಾಗಲಿಲ್ಲ. ಒಂದು ಕ್ಷಣ ಹಾಗೇ ಕುಳಿತವರು ಮತ್ತೆ ಸಾವರಿಸಿಕೊಂಡು ಮಗಳನ್ನು ತಬ್ಬಿ ಹಿಡಿದರು.
‘‘ಯಾರು ಹೇಳಿದ್ದು ನಿನಗೆ... ಹಾಗೇನೂ ಆಗಿಲ್ಲ... ಅವನಲ್ಲೇ ಕೇಳುವ... ನೀನು ಸುಧಾರಿಸಿಕೋ, ಅಳಬೇಡ... ನನ್ನ ಮಗಳು ಅಳಬಾರದು...’’ ಅಜ್ಜ ಮಗಳನ್ನು ಸಮಾಧಾನಪಡಿಸಲು ಯತ್ನಿಸಿದರು.
‘‘ಇಲ್ಲಪ್ಪಾ... ನಾನು ಕೇಳಿದೆ... ಇವರು ಇಲ್ಲಾಂತ ಹೇಳುವುದಿಲ್ಲ... ಅವರು ಮಾತೇ ಆಡುವುದಿಲ್ಲ... ಕೇಳಿ ಅಪ್ಪಾ... ನೀವು ಕೇಳಿ... ಅವರು ಇನ್ನೊಂದು ಮದುವೆಯಾಗಿದ್ದು ಹೌದಾ ಕೇಳಿ... ಹೌದೂಂತಾದರೆ ಇವರು ಈಗಲೇ ಈ ಮನೆಯಿಂದ ಹೊರಗೆ ಹೋಗಬೇಕು... ಈ ಗಂಡ ನನಗೆ ಬೇಡ... ನನ್ನ ಗಂಡ ಸತ್ತು ಹೋದಾಂತ ತಿಳಿಯುತ್ತೇನೆ... ಸತ್ತು ಮಣ್ಣಾಗಿ ಹೋದಾಂತ ಭಾವಿಸುತ್ತೇನೆ...’’ ಕ್ಷಣಕ್ಷಣವೂ ದೊಡ್ಡಮ್ಮನ ಅಳು, ಕಿರುಚಾಟ, ಆವೇಶ ಹೆಚ್ಚಾಗತೊಡಗಿತು.

ಅಳಿಯ ಕಂಬದಂತೆ ನಿಂತಿರುವುದನ್ನು ಕಂಡು ಅಜ್ಜನಿಗೂ ಸಂಶಯವಾಗತೊಡಗಿತು.
‘‘ನೀನು ಒಳಗೆ ಹೋಗಿ ಸ್ವಲ್ಪ ಮಲಗು, ವಿಶ್ರಾಂತಿ ತೆಗೆದುಕೋ. ಅವನಲ್ಲಿ ನಾನು ಕೇಳುತ್ತೇನೆ. ಹೋಗು...’’ ಅಜ್ಜ ಮತ್ತೆ ಮಗಳನ್ನು ಸಮಾಧಾನಪಡಿಸಲು ಯತ್ನಿಸಿದರು.
‘‘ಇಲ್ಲ ನನ್ನೆದುರೇ ಕೇಳಬೇಕು... ನನ್ನೆದುರಲ್ಲೇ ಅವರು ಹೇಳಬೇಕು... ದೇವರಾಣೆ ಹಾಕಿ ಹೇಳಬೇಕು... ಇಂದು.. ಇಂದೇ - ಈಗಲೇ ಇತ್ಯರ್ಥವಾಗಬೇಕು...’’ ಮಗಳ ಅವತಾರ ಕಂಡು ಅಜ್ಜನಿಗೆ ಭಯವಾಗತೊಡಗಿತು. ಅವರು ಅಸಹಾಯಕರಾಗಿ ಅಳಿಯನ ಮುಖ ನೋಡಿದರು. ಮೌಲವಿ ತಲೆ ತಗ್ಗಿಸಿ ಹಾಗೆಯೇ ನಿಂತಿದ್ದರು.
‘‘ಏನಿದೆಲ್ಲ ಅಳಿಯಂದಿರೇ...?’’
‘‘................’’
‘‘ಏನಾದರೂ ಹೇಳಿ ಅಳಿಯಂದಿರೇ... ನೀವೀಗ ಏನಾದರೂ ಹೇಳದಿದ್ದರೆ ನನ್ನ ಮಗಳು ಎದೆ ಒಡೆದು ಸತ್ತು ಹೋಗುತ್ತಾಳೆ...’’
ಮೌಲವಿ ಈಗಲೂ ಮಾತನಾಡಲಿಲ್ಲ.
‘‘ನೋಡಿದಿರಾ ಅಪ್ಪಾ... ನೋಡಿದಿರಾ... ಅವರು ತುಟಿ ಬಿಚ್ಚುತ್ತಾ ಇಲ್ಲ... ಮಾತನಾಡ್ತಾ ಇಲ್ಲ... ಖಂಡಿತವಾಗಿಯೂ ಇವರು ಇನ್ನೊಂದು ಮದುವೆಯಾಗಿದ್ದಾರೆ... ಅಯ್ಯೋ ದೇವರೇ... ಅಯ್ಯೋ ದೇವರೇ... ನಾನೇನು ಮಾಡ್ಲಿ... ಎಂತಹ ಮೋಸ ಮಾಡಿಬಿಟ್ಟರು ನನಗೆ...’’
‘‘ಬಾಯಿ ಬಿಡಿ ಅಳಿಯಂದಿರೇ... ಮಾತಾಡಿ... ನೀವು ಹೀಗೆ ಬಾಯಿಮುಚ್ಚಿ ಬಂಡೆಯಂತೆ ನಿಂತುಬಿಟ್ಟರೆ ನನಗೆ ವಿಷಯ ಏನೂಂತ ಗೊತ್ತಾಗಬೇಕಲ್ಲ...’’ ಅಜ್ಜ ಸಿಟ್ಟಿನಿಂದ ಅಳಿಯನನ್ನು ಗದರಿಸಿದರು.
ಮೌಲವಿಯ ಬಾಯಿಯಿಂದ ಈಗಲೂ ಮಾತು ಹೊರಡಲಿಲ್ಲ.
 ‘‘ನಾನೇನು ಕಡಿಮೆ ಮಾಡಿದೆ ಅಪ್ಪಾ ಇವರಿಗೆ... ಏನು ಕಡಿಮೆ ಮಾಡಿದೆ ಕೇಳಿ... ಮಗುವಿನ ಆರೈಕೆ ಮಾಡಿದಂತೆ ಇವರ ಆರೈಕೆ ಮಾಡಿದೆ... ಅಪ್ಪಾ, ನಿಮಗಿಂತಲೂ ಹೆಚ್ಚಾಗಿ ಇವರನ್ನು ಗೌರವಿಸಿದೆ... ಇವರೇ ನನ್ನ ಸರ್ವಸ್ವ ಎಂದು ನಂಬಿ ಪ್ರೀತಿಸಿದೆ... ನನ್ನ ಮನಸ್ಸು, ದೇಹ ಎಲ್ಲವನ್ನೂ ಇವರಿಗೆ ಅರ್ಪಿಸಿದೆ ಅಪ್ಪಾ... ನಾನೇನು ಮಾಡ್ಲಿ... ನಾನಿನ್ನು ಏನು ಮಾಡಲಿ ಅಪ್ಪಾ...’’ ದೊಡ್ಡಮ್ಮ ಕುಸಿದು ಅಜ್ಜನ ಮಡಿಲಲ್ಲಿ ತಲೆಯಿಟ್ಟು ಪ್ರಜ್ಞೆ ತಪ್ಪಿದಂತೆ ಮಲಗಿ ಬಿಟ್ಟರಂತೆ. ಅಜ್ಜ ಅವರಿಬ್ಬರನ್ನೂ, ಮಕ್ಕಳನ್ನೂ ಈ ಮನೆಗೆ ಕರೆತಂದರು. ಮನೆಗೆ ಬಂದವರೇ ದೊಡ್ಡಮ್ಮ ಕೋಣೆಗೆ ಹೋಗಿ ಬಿದ್ದುಕೊಂಡವರು ಮತ್ತೆ ಏಳಲಿಲ್ಲವಂತೆ...
(ರವಿವಾರದ ಸಂಚಿಕೆಗೆ)


    

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News