ಭಾರತದ ಕ್ಷಯ ರೋಗಿಗಳ ಸಂಖ್ಯೆ ಅಂದಾಜಿನ ದುಪ್ಪಟ್ಟು!
ಮುಂಬೈ, ಆ.25: ಭಾರತವನ್ನು ದುಃಸ್ವಪ್ನವಾಗಿ ಕಾಡುತ್ತಿರುವ ಕ್ಷಯರೋಗದ ಸಮಸ್ಯೆ ಅಂದಾಜಿಸಿದ್ದಕ್ಕಿಂತಲೂ ಭಯಾನಕವಾಗಿದೆ. ದೇಶಾದ್ಯಂತ ಮಾರಾಟವಾಗುವ ಕ್ಷಯ ನಿರೋಧಕ ಔಷಧಿಯ ವಿಶ್ಲೇಷಣೆ ನಡೆಸಿ ಸಿದ್ಧಪಡಿಸಿದ ಒಂದು ವರದಿ, ದೇಶದಲ್ಲಿ ಕ್ಷಯರೋಗಿಗಳ ಸಂಖ್ಯೆ ಅಂದಾಜಿಸಿದ್ದಕ್ಕಿಂತ ಎರಡು ಪಟ್ಟು ಇದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ.
ಭಾರತದಲ್ಲಿ ಪ್ರತಿ ವರ್ಷ ಸುಮಾರು 22 ಲಕ್ಷ ಮಂದಿಗೆ ಕ್ಷಯ ರೋಗ ಬಾಧಿಸುತ್ತದೆ ಎಂದು ಅಂದಾಜು ಮಾಡಲಾಗಿದೆ. ಲ್ಯಾನ್ಸೆಟ್ ಸೋಂಕು ರೋಗ ನಿಯತಕಾಲಿಕ ಗುರುವಾರ ಪ್ರಕಟಿಸಿದ ಅಧ್ಯಯನ ವರದಿಯೊಂದು, 2014ರ ವೇಳೆಗೆ ಈ ಪ್ರಮಾಣ 38 ಲಕ್ಷ ಎಂದು ಅಂದಾಜು ಮಾಡಿದೆ. ಇದು ಔಷಧಿ ಸಂವೇದನೆಯ ಕ್ಷಯ ಪ್ರಕರಣಗಳಾಗಿದ್ದು, ಔಷಧ ನಿರೋಧಕ ಸಾಮರ್ಥ್ಯ ಹೊಂದಿರುವ ಕ್ಷಯರೋಗಿಗಳ ಸಂಖ್ಯೆ ಇದರಿಂದ ಹೊರತಾಗಿದೆ ಎಂದು ವರದಿ ಹೇಳಿದೆ.
ಈ ಅಧ್ಯಯನವನ್ನು ಭಾರತ ಸರ್ಕಾರ, ಲಂಡನ್‌ನ ಇಂಪೀರಿಯಲ್ ಕಾಲೇಜು, ಬಿಲ್ ಆಂಡ್ ಮಿಲಿಂಡಾ ಗೇಟ್ಸ್ ಫೌಂಡೇಷನ್ ಜಂಟಿಯಾಗಿ ನಡೆಸಿದ್ದವು. ಭಾರತದಲ್ಲಿ ಅಂದಾಜು ಪ್ರಮಾಣಕ್ಕಿಂತ ಅಧಿಕ ರೋಗಿಗಳು, ಸರ್ಕಾರಿ ವ್ಯವಸ್ಥೆ ಬದಲಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಊಹೆಯನ್ನು ಈ ಹಿಂದೆಯೇ ವ್ಯಕ್ತಪಡಿಸಲಾಗಿತ್ತು.
ಈ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರೀಯ ಕ್ಷಯ ನಿಯಂತ್ರಣ ವಿಭಾಗದ ಮುಖ್ಯಸ್ಥ ಡಾ.ಸುನೀಲ್ ಕಪಾರ್ಡೆ, "ಖಾಸಗಿ ಆಸ್ಪತ್ರೆಗಳಿಗೆ ಬರುವ ಕ್ಷಯ ರೋಗಿಗಳ ಸಂಖ್ಯೆಯನ್ನು ನಾವು ಕೀಳಂದಾಜು ಮಾಡಿದ್ದೇವೆ. ಆದರೆ ಔಷಧಿ ಮಾರಾಟದ ಹಿನ್ನೆಲೆಯಲ್ಲಿ ಕೈಗೊಂಡ ಹೊಸ ಅಧ್ಯಯನದಿಂದ ತಿಳಿದು ಬಂದಿರುವಂತೆ ಖಾಸಗಿ ಚಿಕಿತ್ಸೆ ಪಡೆಯುವ ರೋಗಿಗಳೇ ಸುಮಾರು 22 ಲಕ್ಷ ಇರಬಹುದು. ನಾವು 8 ಲಕ್ಷ ಎಂದು ಈ ಮೊದಲು ಅಂದಾಜಿಸಿದ್ದೆವು" ಎಂದು ಹೇಳಿದ್ದಾರೆ. ಈ ಪ್ರಮಾಣ ಖಾಸಗಿಯಾಗಿ ಕ್ಷಯಕ್ಕೆ ಚಿಕಿತ್ಸೆ ಪಡೆಯುವವರ ಸಂಖ್ಯೆಯ ಅಂದಾಜಿನ ಮೂರು ಪಟ್ಟು ಆಗಿದೆ.