ನಿರ್ಭಯಾ ಅತ್ಯಾಚಾರ ಪ್ರಕರಣ: ಶಿಕ್ಷೆ ಅನುಭವಿಸುತ್ತಿರುವ ವಿನಯ್ ಶರ್ಮ ಆತ್ಮಹತ್ಯೆಗೆ ಯತ್ನ
ಹೊಸದಿಲ್ಲಿ,ಆ.25: ರಾಜಧಾನಿ ದಿಲ್ಲಿಯನ್ನು ನಡುಗಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಜೆ ಅನುಭವಿಸುತ್ತಿದ್ದ ವಿನಯ್ ಶರ್ಮಾ ಬುಧವಾರ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ.
ವಿನಯ್ ತನ್ನ ಬಳಿ ಇದ್ದ ಬಟ್ಟೆಯನ್ನು ಹಗ್ಗವನ್ನಾಗಿ ಬಳಸಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ . ವಿಷಯ ಗೊತ್ತಾಗುತ್ತಿದ್ದಂತೆ ತಿಹಾರ್ ಜೈಲಿನ ಅಧಿಕಾರಿಗಳು ವಿನಯ್ ಶರ್ಮನನ್ನು ದಿಲ್ಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ನಿಗಾ ಘಟಕದಲ್ಲಿ ಆತನಿಗೆ ಚಿಕಿತ್ಸೆ ಪಡೆಯುತ್ತಿರುವ ಆತನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವಿನಯ್ ಶರ್ಮಾ ಮೇಲೆ ಮೂರು ವರ್ಷಗಳ ಹಿಂದೆ ಸಹ ಖೈದಿಗಳು ದಾಳಿ ನಡೆಸಿದ್ದರು. ಬಳಿಕ ತನ್ನ ಜೀವಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿ ಹೆಚ್ಚಿನ ಭದ್ರತೆಗಾಗಿ ಮನವಿ ಮಾಡಿದ್ದ. ಪ್ರಕರಣದ ಇನ್ನೊಬ್ಬ ಆರೋಪಿ ಬಸ್ ಚಾಲಕ ರಾಮ್ ಸಿಂಗ್ ಇದೇ ತಿಹಾರ್ ಜೈಲಿನಲ್ಲಿ ಈ ಮೊದಲು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
2012ರ ಡಿಸೆಂಬರ್ 16 ರಂದು ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ 23ರ ಹರೆಯದ ನಿರ್ಭಯಾಳನ್ನು ಚಲಿಸುತ್ತಿದ್ದ ಬಸ್ ನಲ್ಲಿ ವಿನಯ್ ಶರ್ಮ ಸೇರಿದಂತೆ ಆರು ಮಂದಿ ಅತ್ಯಾಚಾರ ಮಾಡಿ ಬಸ್ ನಿಂದ ಹೊರಕ್ಕೆ ಎಸೆದಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.