×
Ad

ಒಂದು ವರ್ಷದ ಅಪಹೃತ ಮಗು ಹತ್ತನೆ ಹುಟ್ಟುಹಬ್ಬದಂದು ಮನೆ ಸೇರಿದ !

Update: 2016-08-25 10:20 IST

ಹೊಸದಿಲ್ಲಿ, ಆ.25: ರಾಜಧಾನಿಯ ಭಲ್ಸ್ ವಾಪ್ರದೇಶದಿಂದ ಒಂಬತ್ತು ವರ್ಷಗಳ ಹಿಂದೆ ಅಪಹರಣಗೊಂಡಿದ್ದ ಒಂದು ವರ್ಷದ ಮಗುತನ್ನ ಹತ್ತನೆ ಹುಟ್ಟುಹಬ್ಬದಂದು ತನ್ನ ಹೆತ್ತವರ ಮನೆ ಸೇರಿದ ಆಶ್ಚರ್ಯಕರ ಘಟನೆ ವರದಿಯಾಗಿದೆ. ಶಾಹಬ್ ಎಂಬಾತನೇ ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ಹೆತ್ತವರ ಮಡಿಲು ಸೇರಿದ ಬಾಲಕ.

ಆತ ಒಂದು ವರ್ಷದವನಿದ್ದಾಗ ಆತನ ತಾಯಿ ಫರೀದಾ (45)ಆತನಿಗೆ ಲಸಿಕೆ ನೀಡಲೆಂದು ಬಾಬು ಜಗಜೀವನ್ ರಾಂ ಆಸ್ಪತ್ರೆಗೆ ನವೆಂಬರ್14, 2007ರಂದು ಬಂದಿದ್ದಳುಆ ಸಂದರ್ಭ ಆಕೆ ಮಗುವನ್ನು ಕುರ್ಚಿಯ ಮೇಲೆ ಕೂರಿಸಿ ಅಪಾಯಿಂಟ್‌ಮೆಂಟ್ ಸ್ಲಿಪ್‌ಗಾಗಿ ಅಲ್ಲಿದ್ದ ರಿಸೆಪ್ಶನಿಸ್ಟ್ ಬಳಿ ಹೋದ ಸಂದರ್ಭ ಗೆಳತಿಯೊಬ್ಬಳು ಮಾತನಾಡಲು ಸಿಕ್ಕಿದ್ದಳು, ಫರೀದಾ ಆಕೆಯೊಂದಿಗೆ ಹತ್ತು ಸೆಕೆಂಡ್ ಮಾತನಾಡಿದ ಬಳಿಕ ತಿರುಗಿ ನೋಡಿದಾಗ ಮಗು ಅಲ್ಲಿರಲಿಲ್ಲ. ಆಸ್ಪತ್ರೆಯ ತುಂಬೆಲ್ಲಾ ಹುಡುಕಾಡಿದರೂ ಮಗುವಿನ ಪತ್ತೆಯಿರಲಿಲ್ಲ. ಕೊನೆಗೆ ಕೃಷ್ಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಎರಡು ವರ್ಷಗಳ ನಂತರವೂ ಮಗು ಪತ್ತೆಯಾಗದಾಗ ಪೊಲೀಸರು 2009 ರಲ್ಲಿ ಪ್ರಕರಣವನ್ನು ಮುಚ್ಚಿಬಿಟ್ಟರು. ಆದರೆ ಫರೀದಾ ಮತ್ತಾಕೆಯ ಪತಿ ಅಫ್ಸರ್ ಮಾತ್ರ ಪ್ರತಿ ದಿನ ಕನಿಷ್ಠ ನಾಲ್ಕು ಗಂಟೆಗಳ ಕಾಲ ತಮ್ಮ ಮಗನಿಗಾಗಿ ಹುಡುಕಾಡುತ್ತಿದ್ದರು. ಅಫ್ಸರ್ ಅಂತೂ ಯಾವಾಗಲೂ ತನ್ನ ಮಗುವಿನ ಭಾವಚಿತ್ರವೊಂದನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದ.
ಈ ವರ್ಷದ ಮೇ 15ರಂದು ದಂಪತಿ ಹಳೆ ಸೀಲಂಪುರ ಪ್ರದೇಶದಲ್ಲಿ ನಡೆದ ವಿವಾಹ ಸಮಾರಂಭವೊಂದಕ್ಕೆ ಹೋದಾಗ ಅಲ್ಲಿ ಸಂಬಂಧಿಯೊಬ್ಬರೊಡನೆ ತಮ್ಮ ಮಗು ನಾಪತ್ತೆಯಾದ ವಿಚಾರ ತಿಳಿಸಿದ್ದರು. ಅಫ್ಸರ್ ತನ್ನ ಬಳಿಯಿದ್ದ ತನ್ನ ಮಗುವಿನ ಮಾಸಿದ ಫೋಟೊವೊಂದನ್ನು ಆತನಿಗೆ ತೋರಿಸಿದಾಗ ಆ ಸಂಬಂಧಿ ತಾನು ಫೋಟೋದಲ್ಲಿರುವ ಮಗುವನ್ನೇ ಹೋಲುವ ಬಾಲಕನನ್ನು ಅದೇ ಪ್ರದೇಶದಲ್ಲಿ ನೋಡಿದ್ದಾಗಿ ಹೇಳಿದ.
ಆ ಪ್ರದೇಶವನ್ನು ಹುಡುಕಾಡಿ ಪ್ರಯೋಜನವಾಗದೇ ಇದ್ದಾಗ ದಂಪತಿ ಪೊಲೀಸರಿಗೆ ದೂರು ನೀಡಿದರು. ಕಳೆದ ಶನಿವಾರ ಅದೇ ಪ್ರದೇಶದಲ್ಲಿ ಆ ಸಂಬಂಧಿ ಹೇಳಿದ ಬಾಲಕನನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ಹಿಂಬಾಲಿಸಿ ಆತನ ಮನೆಗೆ ಹೋದಾಗ ಅಲ್ಲಿದ್ದ ಆತನ ಸಾಕು ತಂದೆ ತಾಯಿಯರಾದ ನರ್ಗಿಸ್ ಹಾಗೂ ಮುಹಮ್ಮದ್ ಶಮೀಮ್‌ ಮೊದಲು ಆತ ತಮ್ಮದೇ ಪುತ್ರನೆಂದು ಹೇಳಿಕೊಂಡರೂ ಕೊನೆಗೆ ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳುವ ಶ್ರಮವೇಕೆಂದು ಈ ಕಾರ್ಯಕ್ಕೆ ಕೈ ಹಾಕಿದ್ದಾಗಿ ಒಪ್ಪಿಕೊಂಡರು. ಆರೋಪಿ ದಂಪತಿಯನ್ನು ಬಂಧಿಸಲಾಗಿದೆ. ಬಾಲಕನ ಹಾಗೂ ಆತನ ನಿಜವಾದ ಹೆತ್ತವರ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News