×
Ad

ಪತ್ನಿಯ ಮೃತದೇಹವನ್ನು ಹೆಗಲಲ್ಲಿ ಹೊತ್ತುಕೊಂಡು ಸಾಗಿಸಿದ ಪತಿ...!

Update: 2016-08-25 10:59 IST

ಭುವನೇಶ್ವರ, ಆ.25: ಕ್ಷಯರೋಗದಿಂದ ಮೃತಪಟ್ಟ ಮಹಿಳೆಯೊಬ್ಬಳ ಮೃತದೇಹವನ್ನು ಸಾಗಿಸಲು ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಲು ಆಸ್ಪತ್ರೆಯಲ್ಲಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯ ಪತಿಯೇ ಮೃತದೇಹವನ್ನು ಹೆಗಲಲ್ಲಿ ಹೊತ್ತುಕೊಂಡು ಮನೆಗೆ ಸಾಗಿಸಿದ ಘಟನೆ ಒಡಿಶಾದ ಕಲಾಹಂಡಿ ಜಿಲ್ಲೆಯಲ್ಲಿ ನಡೆದಿದೆ.
ಬುಡಕಟ್ಟು ಜನಾಂಗಕ್ಕೆ ಸೇರಿದ ನಲುವತ್ತರ ಹರೆಯದ ಮಹಿಳೆ ಅಮಾಂಗ್‌ ದೇಯಿ ಎಂಬಾಕೆಯನ್ನು ಕ್ಷಯ ರೋಗದ ಕಾರಣದಿಂದ ಭವಾನಿಪಟ್ಟಣದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. 
ಅಮಾಂಗ್‌ದೇಯಿ ಮೃತದೇಹವನ್ನು ಅಂತ್ಯಕ್ರಿಯೆ ನಡೆಸಲು ಊರಿಗೆ ಕೊಂಡೊಯ್ಯಲು ವಾಹನದ ವ್ಯವಸ್ಥೆ ಮಾಡಿಕೊಡುವಂತೆ ಆಕೆಯ ಪತಿ ದನಾ ಮಂಜಿ ಆಸ್ಪತ್ರೆಯ ವೈದ್ಯರಿಗೆ ಮನವಿ ಮಾಡಿದರು. ಆದರೆ ಆಸ್ಪತ್ರೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅವರ ಮನವಿಗೆ ಸ್ಪಂದಿಸಲಿಲ್ಲ. ಇದರಿಂದ ನೊಂದುಕೊಂಡ ದನಾ ಮಂಜಿ ಕೂಡಲೇ ತನ್ನ ಪತ್ನಿಯ ಶವವನ್ನು ಬಟ್ಟೆಯಲ್ಲಿ ಪ್ಯಾಕ್‌ ಮಾಡಿದರು. ಹೆಗಲಲ್ಲಿ ಹೊತ್ತುಕೊಂಡು ಹೊರ ನಡೆದರು. ಹನ್ನೆರಡರ ಹರೆಯದ ಮಗಳು ತಂದೆಗೆ ಸಾಥ್‌ ನೀಡಿದಳು.
ಭವಾನಿಪಟ್ಣದಿಂದ ಅರುವತ್ತು ಕಿಲೋ ಮೀಟರ್‌ ದೂರದ ತನ್ನ ಊರು ಮೆಲ್ಘಾರಕ್ಕೆ ದನಾ ಮಂಜಿ ಪತ್ನಿಯ ಮೃತದೇಹವನ್ನು ಹೊತ್ತುಕೊಂಡು ಹೋಗುತ್ತಿದ್ದ ಸುದ್ದಿ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳ ಮೂಲಕ ಸ್ಥಳೀಯ ಜಿಲ್ಲಾಧಿಕಾರಿ ಕಿವಿಗೆ ಮುಟ್ಟಿತು. ತಕ್ಷಣ ಅವರು ವಾಹನದ ವ್ಯವಸ್ಥೆ ಮಾಡಿದರು. ಜಿಲ್ಲಾಧಿಕಾರಿ ವಾಹನದ ವ್ಯವಸ್ಥೆ ಮಾಡುವ ಹೊತ್ತಿಗೆ ದನಾ ಮಂಜಿ ಪತ್ನಿಯ ಮೃತದೇಹ ಹೊತ್ತುಕೊಂಡು ಅರ್ಧ ದಾರಿ ತಲುಪಿದ್ದರು.ಬಳಿಕ ವಾಹನದಲ್ಲಿ ಶವವನ್ನು ಕೊಂಡೊಯ್ಯಲಾಯಿತು.
ಆಸ್ಪತ್ರೆಯಲ್ಲಿ ವಾಹನದ ವ್ಯವಸ್ಥೆ ಇರಲಿಲ್ಲ ಎಂದು  ಆಸ್ಪತ್ರೆಯ ಮೂಲಗಳು ತಿಳಿಸಿದೆ."ಪತ್ನಿಯ ಮೃತದೇಹವನ್ನು ಊರಿಗೆ ಕೊಂಡೊಯ್ಯಲು ವಾಹನದ ವ್ಯವಸ್ಥೆ ಮಾಡಿಕೊಡುವಂತೆ ಆಸ್ಪತ್ರೆಯಲ್ಲಿ ಸಂಬಂಧಪಟ್ಟವರಲ್ಲಿ ಹಲವು ಬಾರಿ ಮನವಿ ಮಾಡಿದೆ. ಆದರೆ ನನ್ನ  ಮನವಿಗೆ ಅವರು ಸ್ಪಂದಿಸಲಿಲ್ಲ.ನಾನು ಬಡವ  ಬೇರೆ ವಾಹನದ ವ್ಯವಸ್ಥೆ ಮಾಡಲು ನನ್ನ ಬಳಿ ಹಣ ಇರಲಿಲ್ಲ. ಈ ಕಾರಣದಿಂದಾಗಿ ಪತ್ನಿಯ ಮೃತದೇಹವನ್ನು ಹೊತ್ತುಕೊಂಡು ಹೋಗುವ ನಿರ್ಧಾರ ಕೈಗೊಂಡೆ” ಎಂದು ಮಂಜಿ ಒಡಿಶಾದ ಟಿವಿ ಚಾನಲೊಂದಕ್ಕೆ ತಿಳಿಸಿದ್ದಾರೆ.
ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ  ಅವರು ಅಮಾಂಗ್‌ದೇಯಿ ಕುಟುಂಬಕ್ಕೆ ಹರಿಶ್ಚಂದ್ರ ಯೋಜನೆ ಮತ್ತು  ರೆಡ್‌ಕ್ರಾಸ್‌ನಿಂದ ನೆರವು ಒದಗಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News