ಚುನಾವಣೆಯಲ್ಲಿ ಕಪ್ಪುಹಣ ನಿಗ್ರಹ ಚುನಾವಣಾ ಆಯೋಗದ ವಿಶೇಷ ಘಟಕಕ್ಕೆ ಅಧಿಕಾರಿ ನೇಮಕ
ಹೊಸದಿಲ್ಲಿ, ಆ.26: ಉತ್ತರಪ್ರದೇಶ, ಪಂಜಾಬ್ ಮತ್ತಿತರ ರಾಜ್ಯಗಳು ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳಿಗೆ ಸಿದ್ಧವಾಗುತ್ತಿವೆ. ಇಂತಹ ಸಮಯದಲ್ಲೇ ಚುನಾವಣೆಗಳಲ್ಲಿ ಕಪ್ಪುಹಣದ ಬಳಕೆ ತಡೆಯಲು ಚುನಾವಣಾ ಆಯೋಗದಲ್ಲಿ ಸೃಷ್ಟಿಸಲಾಗಿರುವ ಮಹತ್ತ್ವದ ಹುದ್ದೆಯೊಂದಕ್ಕೆ ಇತ್ತೀಚಿನ ಅಧಿಕಾರಿಗಳ ವರ್ಗಾವರ್ಗಿಯ ವೇಳೆ ನೇಮಕಾತಿ ನಡೆದಿದೆ.
ಆದಾಯ ತೆರಿಗೆ ಕೇಡರ್‌ನ ಹಿರಿಯ ಭಾರತೀಯ ಕಂದಾಯ ಸೇವೆಯ(ಐಆರ್‌ಎಸ್) ಅಧಿಕಾರಿ ದಿಲೀಪ್ ಶರ್ಮ, ಚುನಾವಣಾ ವೆಚ್ಚ ನಿಗಾ ಘಟಕದ ಮಹಾನಿರ್ದೇಶಕರಾಗಿ ನೇಮಕವಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಹಣದ ಬಲ ಹಾಗೂ ಕಪ್ಪುಹಣ ಬಳಕೆಯ ಪಿಡುಗನ್ನು ನಿಭಾಯಿಸಲೆಂದೇ 2010ರಲ್ಲಿ ಈ ಹುದ್ದೆಯನ್ನು ಸೃಷ್ಟಿಸಲಾಗಿತ್ತು.
ಘಟಕದ ನಿಕಟಪೂರ್ವ ಮಹಾನಿರ್ದೇಶಕ ಪಿ.ಕೆ. ದಾಶ್, ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಭಡ್ತಿ ಪಡೆದ ಕಾರಣ 2015ರ ಆಗಸ್ಟ್‌ನಿಂದ ತೆರವಾಗಿದ್ದ ಈ ಹುದ್ದೆಗೆ 1992ರ ತಂಡದ ಐಆರ್‌ಎಸ್ ಅಧಿಕಾರಿ ಶರ್ಮರನ್ನು ಈ ವಾರಾರಂಭದಲ್ಲಿ ನೇಮಿಸಲಾಗಿದೆ.