×
Ad

’ಜಾಗತಿಕ ಉಗ್ರ’ ದಾವೂದ್‌ನನ್ನು ಪಾಕಿಸ್ತಾನ ನಮಗೊಪ್ಪಿಸಲಿ: ಭಾರತ

Update: 2016-08-27 08:31 IST

ಹೊಸದಿಲ್ಲಿ, ಆ.27: ಭೂಗತ ಪಾತಕಿ ದಾವೂದ್ ಇಬ್ರಾಹೀಂನ ಪಾಕಿಸ್ತಾನ ವಿಳಾಸವನ್ನು ವಿಶ್ವಸಂಸ್ಥೆ ದೃಢಪಡಿಸಿದ ಹಿನ್ನೆಲೆಯಲ್ಲಿ "ಜಾಗತಿಕ ಉಗ್ರ"ನನ್ನು ತಕ್ಷಣ ಭಾರತಕ್ಕೆ ಒಪ್ಪಿಸುವಂತೆ ಭಾರತ, ಪಾಕಿಸ್ತಾನವನ್ನು ಆಗ್ರಹಿಸಿದೆ. ದಾವೂದ್ ಸುಧೀರ್ಘ ಅವಧಿಯಿಂದ ಪಾಕ್ ರಕ್ಷಣೆಯಲ್ಲಿದ್ದಾರೆ.

ಪಾಕಿಸ್ತಾನ ಭಯೋತ್ಪಾದನೆಯ ದೋಷಿ ಎಂದು ಭಾರತ ಬಣ್ಣಿಸಿದ್ದು, ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಜಮ್ಮು ಹಾಗೂ ಕಾಶ್ಮೀರದ ಭಾಗವನ್ನು ಬಿಟ್ಟುಕೊಡುವ ಫಲಿತಾಂಶ ನೀಡುವ ಮಾತುಕತೆಯಷ್ಟೇ ಭಾರತದ ಗುರಿ. ಇದೀಗ ದಾವೂದ್ ವಿಳಾಸ ದೃಢಪಟ್ಟಿದ್ದು, ಆತನ ಪತ್ನಿಯ ಹೆಸರು, ತಂದೆಯ ಹೆಸರು ಮತ್ತು ಸಹಚರರ ಹೆಸರನ್ನೂ ಪಟ್ಟಿಗೆ ಸೇರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ.

"ಜಾಗತಿಕ ಉಗ್ರರ ಪಟ್ಟಿಯಲ್ಲಿ ದಾವೂದ್ ಇಬ್ರಾಹೀಂ ಹೆಸರು ಮುಂದುವರಿದಿದೆ. ಮೇಲುಸ್ತುವಾರಿ ಸಮಿತಿ ಅವರ ಪಾಸ್‌ಪೋರ್ಟನ್ನು ಅಧಿಕೃತ ದಾಖಲೆ ಎಂದು ಪರಿಗಣಿಸಿದೆ. ಆತ ಪಾಕಿಸ್ತಾನದಲ್ಲೇ ವಾಸ ಇರುವುದನ್ನು ಮತ್ತು ಪಾಕಿಸ್ತಾನದಲ್ಲಿ ಆಸ್ತಿ ಹೊಂದಿರುವುದನ್ನು ವಿಶ್ವಸಂಸ್ಥೆ ದೃಢಪಡಿಸಿದ್ದು, ಆತನ ಮೇಲೆ ಹದ್ದಿನಕಣ್ಣು ಇರಿಸಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ. ಪಾಕಿಸ್ತಾನ ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಉಗ್ರರನ್ನು ಬೆಂಬಲಿಸುವ ಕಾರಣದಿಂದ ಈ ಭಾಗದ ಶಾಂತಿ ಮತ್ತು ಸಿದ್ಧತೆಗೆ ಧಕ್ಕೆ ಉಂಟಾಗಿದೆ ಎಂದು ಭಾರತ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News