ಜಿಎಸ್‌ಟಿಎನ್ ವಿರುದ್ಧ ಮತ್ತೆ ಸ್ವಾಮಿ ದಾಳಿ

Update: 2016-08-27 14:40 GMT

ಹೊಸದಿಲ್ಲಿ,ಆ.27: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಅನುಷ್ಠಾನಕ್ಕೆ ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿಗಳನ್ನು ರೂಪಿಸಲು ಸ್ಥಾಪಿಸಲಾಗಿರುವ ಜಿಎಸ್‌ಟಿ ನೆಟ್‌ವರ್ಕ್(ಜಿಎಸ್‌ಟಿಎನ್) ಕಂಪನಿಯ ವಿರುದ್ಧ ತನ್ನ ದಾಳಿಯನ್ನು ಶನಿವಾರ ಇನ್ನಷ್ಟು ತೀವ್ರಗೊಳಿಸಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು, ಕಂಪನಿಯ ಸ್ವರೂಪವನ್ನು ವಿರೋಧಿಸುವಂತೆ ಕೋರಿ ತಾನು ಪಕ್ಷದ ಅಧ್ಯಕ್ಷ ಅಮಿತ್ ಶಾ ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆಯುವುದಾಗಿ ಟ್ವೀಟಿಸಿದ್ದಾರೆ. ಈ ವರೆಗೆ ಎಂಟು ರಾಜ್ಯಗಳು ಜಿಎಸ್‌ಟಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸ್ಥಿರೀಕರಿಸಿದ್ದು,ಇವುಗಳಲ್ಲಿ ಬಿಜೆಪಿ ಆಡಳಿತದ ಅಸ್ಸಾಂ, ಛತ್ತೀಸ್‌ಗಡ, ಜಾರ್ಖಂಡ್, ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿವೆ.

ಜಿಎಸ್‌ಟಿಎನ್‌ನ್ನು ಹಿಂದಿನ ಯುಪಿಎ ಸರಕಾರವು ರಚಿಸಿತ್ತು. ಜಿಎಸ್‌ಟಿಎನ್‌ನ ಶೇರು ಬಂಡವಾಳ ಸ್ವರೂಪವು ರಾಷ್ಟ್ರವಿರೋಧಿಯಾಗಿದೆ ಎನ್ನುವುದು ಸ್ವಾಮಿಯವರ ವಾದವಾಗಿದೆ.

ಜಿಎಸ್‌ಟಿಯ ಲೆಕ್ಕ ಮತ್ತು ಸಂಗ್ರಹದ ಮೇಲೆ ನಿಯಂತ್ರಣ ಹೊಂದಿರುವ ಜಿಎಸ್‌ಟಿಎನ್‌ನಲ್ಲಿ ಖಾಸಗಿ ಸಂಸ್ಥೆಗಳು ಸಿಂಹಪಾಲನ್ನು ಹೊಂದಿರುವುದನ್ನು ಬಲವಾಗಿ ಆಕ್ಷೇಪಿಸಿ ಸ್ವಾಮಿಯವರು ಈ ತಿಂಗಳ ಆದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು, ಅದರ ಬದಲಿಗೆ ಸಂಪೂರ್ಣ ಸರಕಾರಿ ಸ್ವಾಮ್ಯದ ಸಂಸ್ಥೆಯನ್ನು ಹುಟ್ಟುಹಾಕುವಂತೆ ಆಗ್ರಹಿಸಿದ್ದರು. ಜಿಎಸ್‌ಟಿಎನ್‌ನಲ್ಲಿ ಕೇಂದ್ರ ಮತ್ತು ರಾಜ್ಯಸರಕಾರಗಳು ಶೇ.49ರಷ್ಟು ಒಡೆತನವನ್ನು ಹೊಂದಿದ್ದು,ಶೇ.51ರಷ್ಟು ಪಾಲುದಾರಿಕೆಯನ್ನು ಎಚ್‌ಡಿಎಫ್‌ಸಿ,ಐಸಿಐಸಿಐ ಬ್ಯಾಂಕ್ ಮತ್ತು ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನಂತಹ ಖಾಸಗಿ ಸಂಸ್ಥೆಗಳು ಹೊಂದಿವೆ. ಈ ಸಂಸ್ಥೆಗಳಲ್ಲಿ ವಿದೇಶಿ ಪಾಲುದಾರಿಕೆಯಿದೆ ಎಂದು ಅವರು ಬೆಟ್ಟು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News