ಇಂದು ಇಸ್ರೊದಿಂದ ಸ್ಕ್ರಾಮ್ ಜೆಟ್ ಇಂಜಿನ್ ಪರೀಕ್ಷೆ
ಜೆನ್ನೈ, ಆ.27: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಘಟನೆಯು ರವಿವಾರ ತನ್ನ ಸ್ಕ್ರಾಮ್ ಜೆಟ್ ಇಂಜಿನ್‌ನ ಪರೀಕ್ಷೆ ನಡೆಸುವ ಸಿದ್ಧತೆ ಕೈಗೊಂಡಿದೆ. ಇದೇ ವೇಳೆ, ಜಿಎಸ್‌ಎಲ್‌ವಿ-ಎಂಕೆ-2ರ ಮೂಲಕ ಹವಾಮಾನ ಉಪಗ್ರಹ ಇನ್ಸಾಟ್-ಎ ಡಿಆರ್‌ನ ಉಡಾವಣೆಯನ್ನು ಅದು ಸೆಪ್ಟಂಬರ್‌ಗೆ ಮುಂದೂಡಿದೆಯೆಂದು ಹಿರಿಯಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಸ್ಕ್ರಾಮ್ ಜೆಟ್(ಗಾಳಿಯನ್ನುಸಿರಾಡುವ) ಇಂಜಿನ್ ಪರೀಕ್ಷೆಗಾಗಿ ಆರ್‌ಎಚ್-560 ಸೌಂಡಿಂಗ್ ರಾಕೆಟ್‌ನ ಉಡಾವಣೆ ರವಿವಾರ ಬೆಳಗ್ಗೆ 6 ಗಂಟೆಗೆ ನಿಗದಿ ಮಾಡಲ್ಪಟ್ಟಿದೆಯೆಂದು ಎಸ್‌ಡಿಎಸ್‌ಸಿಯ ನಿರ್ದೇಶಕ ಪಿ. ಕುಂಞಿಕೃಷ್ಣನ್ ಹೇಳಿದ್ದಾರೆ.
ಗಾಳಿಯ ವೇಗ ಅನುಕೂಲಕರವಾಗಿದ್ದರೆ ರಾಕೆಟನ್ನು ನಾಳೆ ಬೆಳಗ್ಗೆ 6 ಗಂಟೆಗೆ ಉಡಾಯಿಸಲಾಗುವುದು. ಇಲ್ಲದಿದ್ದಲ್ಲಿ ಸ್ವಲ್ಪ ತಡವಾಗಬಹುದು.
ರಾಕೆಟನ್ನು ವಾತಾವರಣದೊಳಗೆ ಹಾರಿಸುವ ಹಂತದಲ್ಲಿ ಮಾತ್ರ ಸ್ಕ್ರಾಮ್ ಜೆಟ್ ಇಂಜಿನ್ ಉಪಯೋಗಿಸಲಾಗುವುದು. ಇದರಿಂದ ಇಂಧನದೊಂದಿಗೆ ಒಯ್ಯಬೇಕಾದ ಆಕ್ಸಿಡೈಸರ್‌ನ ಪ್ರಮಾಣ ಕಡಿಮೆಯಾಗುವುದರಿಂದ ಉಡಾವಣಾ ವೆಚ್ಚ ಕಡಿಮೆಯಾಗುತ್ತದೆ.
ಅ.28ರಂದು ಹಾರಾಟ ನಿಗದಿಯಾಗಿದ್ದ ಭಾರತೀಯ ಹವಾಮಾನ ಉಪಗ್ರಹದ ಉಡಾವಣೆಯನ್ನು ಸೆ.8ಕ್ಕೆ ಮುಂದೂಡಲಾಗಿದೆ.