ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಏಕತೆ-ಮಮತೆ ಮೂಲಮಂತ್ರ ಮನ್‌ಕಿಬಾತ್‌ನಲ್ಲಿ ಪ್ರಧಾನಿ
ಹೊಸದಿಲ್ಲಿ, ಆ.28: ಏಕತೆ ಮತ್ತು ಮಮತೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಮೂಲ ಮಂತ್ರವೆಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಇದೇ ವೇಳೆ, ಅಶಾಂತಿ ಸೃಷ್ಟಿಸಲು ‘ಮಕ್ಕಳನ್ನು’ ದೂಡುತ್ತಿರುವವರನ್ನು ಖಂಡಿಸಿದ ಅವರು, ಒಂದು ದಿನ ಅಂತಹವರು ಆ ‘ಅಮಾಯಕ’ ಮಕ್ಕಳಿಗೆ ಉತ್ತರ ನೀಡಬೇಕಾಗಬಹುದು ಎಂದಿದ್ದಾರೆ.
ಕಾಶ್ಮೀರದಲ್ಲಿ ಯಾವನೇ ಯುವಕನದಿರಬಹುದು ಅಥವಾ ಭದ್ರತಾ ಸಿಬ್ಬಂದಿಯರಿರಬಹುದು, ಒಂದು ಪ್ರಾಣ ನಷ್ಟವಾದರೆ ಅದು ನಮಗಾಗುವ ನಷ್ಟವೆಂದು ಪ್ರಧಾನಿ ಒತ್ತಿ ಹೇಳಿದ್ದಾರೆ.
‘ಮನ್‌ಕೀ ಬಾತ್’ ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ ಕಣಿವೆಯ ಅಶಾಂತಿಯ ಕುರಿತು ಮಾತನಾಡಿದ ಅವರು, ತಾನು ಕಾಶ್ಮೀರದ ಎಲ್ಲ ಪಕ್ಷಗಳೊಂದಿಗೆ ನಡೆಸಿದ ಮಾತುಕತೆಯಿಂದ ಒಂದು ವಿಚಾರ ಹೊರಗೆ ಬಂದಿದೆ. ಅದನ್ನು ಸರಳ ಶಬ್ದಗಳಲ್ಲಿ ‘ಏಕತೆ’ ಹಾಗೂ ‘ಮಮತೆ’ ಎನ್ನಬಹುದು. ಈ ಎರಡು ವಿಚಾರಗಳು ಮೂಲ ಮಂತ್ರಗಳಾಗಿವೆ ಎಂದಿದ್ದಾರೆ.
ಕಾಶ್ಮೀರದ ಕುರಿತು ಎಲ್ಲ ರಾಜಕೀಯ ಪಕ್ಷಗಳು ಒಂದೇ ದನಿಯಲ್ಲಿ ಮಾತನಾಡಿವೆ. ಅವು ವಿಶ್ವಕ್ಕೆ ಹಾಗೂ ಪ್ರತ್ಯೇಕತಾವಾದಿ ಶಕ್ತಿಗಳಿಗೆ ಒಂದು ಸಂದೇಶವನ್ನು ನೀಡಿವೆ ಹಾಗೂ ಕಾಶ್ಮೀರದ ಜನತೆಗೆ ತಮ್ಮ ಭಾವನೆಯನ್ನು ತಿಳಿಸಿವೆಯೆಂದು ಮೋದಿ ಹೇಳಿದ್ದಾರೆ. ಅದನ್ನವರು, ಸಂಸತ್ತಿನಲ್ಲಿ ಎಲ್ಲ ಪಕ್ಷಗಳು ಒಂದಾಗಿ ಮಹತ್ವದ ಜಿಎಸ್‌ಟಿ ಮಸೂದೆ ಮಂಜೂರು ಮಾಡಿರುವುದಕ್ಕೆ ಹೋಲಿಸಿದ್ದಾರೆ.
ಇದು ನಮ್ಮೆಲ್ಲರ ಅಭಿಪ್ರಾಯವಾಗಿದೆ. ಗ್ರಾಮವೊಂದರ ಪ್ರಧಾನನಿಂದ ಹಿಡಿದು ಪ್ರಧಾನಿಯ ತನಕ 125 ಕೋಟಿ ಜನರ ಅಭಿಪ್ರಾಯವಾಗಿದೆ. ಕಾಶ್ಮೀರದಲ್ಲಿ ಯಾರದೇ ಜೀವ ನಷ್ಟವಾದರೂ ಅದು ನಮಗೆ ಹಾಗೂ ನಮ್ಮ ದೇಶಕ್ಕಾಗುವ ನಷ್ಟವೆಂದು ಮೋದಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪ್ರಧಾನಿಯನ್ನು ಭೇಟಿಮಾಡಿ ಸಂಬಂಧಿಸಿದ ಎಲ್ಲರೊಂದಿಗೆ ಮಾತುಕತೆ ಸಹಿತ ಮೂರಂಶಗಳ ಕಾರ್ಯ ಯೋಜನೆಯೊಂದನ್ನು ವಿವರಿಸಿದ ಮರುದಿನ ಮೋದಿಯವರ ಈ ಮಾತು ಹೊರ ಬಿದ್ದಿದೆ.