"ನಿನಗೆ ನನ್ನ ಮೇಲೆ ಸಿಟ್ಟಿದೆಯೇ"?
ಹೊಸದಿಲ್ಲಿ, ಆ.29: ಕಾಶ್ಮೀರ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ಮೂರು ಅಂಶಗಳ ಸೂತ್ರ ಸಲಹೆ ಮಾಡಿದ ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಪೆಲೆಟ್ ಗನ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಇಲ್ಲಿನ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ರವಿವಾರ ಭೇಟಿ ಮಾಡಿದರು.
"ಹದಿನಾರು ವರ್ಷದ ಇನ್ಷಾ ಎಂಬ ಬಾಲಕಿಯನ್ನು ನಾನು ಆಸ್ಪತ್ರೆಯಲ್ಲಿ ಭೇಟಿಯಾದೆ. ಆಕೆಯನ್ನು ನೋಡಿದಾಗ ನಿಜಕ್ಕೂ ಆಘಾತವಾಯಿತು. ನನ್ನ ಮೇಲೆ ನಿನಗೆ ಸಿಟ್ಟಿದೆಯೇ ಎಂದು ಬಾಲಕಿಯನ್ನು ಕೇಳಿದೆ. ಆಕೆಯ ತಾಯಿ ಆಗ ಕಣ್ಣೀರಿಟ್ಟರು" ಎಂದು ಮೆಹಬೂಬಾ ಹೇಳಿದ್ದಾಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ. "ನಾವು ಎಲ್ಲಿ ಎಡವಿದ್ದೇವೆ ಎಂದು ನನಗೆ ಅಚ್ಚರಿಯಾಯಿತು. ಒಂದು ಚಕಮಕಿ ನಡೆದಿತ್ತು. ಬಳಿಕ ಇಂಥ ಪರಿಸ್ಥಿತಿ ಸೃಷ್ಟಿಯಾಗಿದೆ" ಎಂದು ಮೆಹಬೂಬಾ ಹೇಳಿದರು.
ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಭೇಟಿ ಮಾಡಿದ ಮುಖ್ಯಮಂತ್ರಿ, ಆಕೆಗೆ ದೃಷ್ಟಿ ಮರಳುವಂತೆ ಎಲ್ಲ ಪ್ರಯತ್ನ ಮಾಡುವಂತೆ ಕೋರಿದರು. ರಾಜ್ಯ ಸರಕಾರ ಬಾಲಕಿಗೆ ಸಾಧ್ಯವಿರುವಷ್ಟೂ ಒಳ್ಳೆಯ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತದೆ ಎಂದು ಆಕೆಯ ಪಾಲಕರಿಗೆ ಭರವಸೆ ನೀಡಿದ್ದಾಗಿ ಮುಖ್ಯಮಂತ್ರಿ ಕಚೇರಿ ಪ್ರಕಟನೆ ಹೇಳಿದೆ.
"ಆಕೆ ಜಗತ್ತನ್ನು ಮರಳಿ ನೋಡುವಂತಾಗಲು ಕಣ್ಣು ಕಸಿ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವಂತೆಯೂ ವೈದ್ಯರಿಗೆ ಸೂಚಿಸಲಾಗಿದ್ದು, ರಾಜ್ಯ ಸರಕಾರ ಎಲ್ಲ ಅಗತ್ಯ ನೆರವು ನೀಡುತ್ತದೆ" ಎಂದು ಪ್ರಕಟನೆ ವಿವರಿಸಿದೆ.