ಭಾರತದಲ್ಲಿ ವಿದೇಶಿ ಮಹಿಳೆಯರು ಸ್ಕರ್ಟ್, ಇತರ ಅರೆನಗ್ನ ಉಡುಪು ಧರಿಸಬಾರದು: ಸಂಸ್ಕೃತಿ ಸಚಿವ ಶರ್ಮ

Update: 2016-08-29 03:27 GMT

ಆಗ್ರಾ, ಆ.29: ವಿದೇಶಿ ಪ್ರವಾಸಿ ಮಹಿಳೆಯರು ತಮ್ಮ ಸುರಕ್ಷತೆಯ ದೃಷ್ಟಿಯಿಂದಲೇ ಸ್ಕರ್ಟ್ ಹಾಗೂ ಇತರ ಅರೆನಗ್ನ ಉಡುಪುಗಳನ್ನು ಧರಿಸಬಾರದು ಎಂದು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಸಲಹೆ ಮಾಡಿದ್ದಾರೆ.

ತಾಜ್‌ಮಹಲ್‌ನ ನಗರಕ್ಕೆ ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, "ತಮ್ಮ ಸುರಕ್ಷತೆ ದೃಷ್ಟಿಯಿಂದ ವಿದೇಶಿ ಮಹಿಳೆಯರು ಭಾರತದಲ್ಲಿ ಸ್ಕರ್ಟ್‌ನಂಥ ಉಡುಪು ಧರಿಸಬಾರದು. ಭಾರತೀಯ ಸಂಸ್ಕೃತಿ, ವಿದೇಶಿ ಸಂಸ್ಕೃತಿಗಿಂತ ಭಿನ್ನ" ಎಂದು ಹೇಳಿದರು. ವಿದೇಶಿ ಮಹಿಳೆಯರು ರಾತ್ರಿಯ ವೇಳೆ ಒಬ್ಬಂಟಿಯಾಗಿ ತಿರುಗಾಡಬಾರದು ಎಂದೂ ಸೂಚಿಸಿದರು.

ವಿದೇಶಿ ಪ್ರವಾಸಿಗರಿಗೆ ನೀಡುವ ಸಲಹಾ ಕರಪತ್ರದಲ್ಲಿ ಈ ಅಂಶವನ್ನೂ ಸೇರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಮಥುರಾ ಹಾಗೂ ವೃಂದಾವನಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ಭಾರತೀಯ ಸಂಸ್ಕೃತಿಯ ಸೂಕ್ಷ್ಮತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿದರು. ಅವರು ಏನನ್ನು ಧರಿಸಬೇಕು ಎಂದು ನಾವು ನಿರ್ದಿಷ್ಟವಾಗಿ ಸೂಚಿಸಿಲ್ಲ. ರಾತ್ರಿ ವೇಳೆ ಹೊರಗೆ ಹೋಗುವಾಗ ಎಚ್ಚರ ವಹಿಸುವಂತೆ ಮಾತ್ರ ಸೂಚನೆ ನೀಡಿದ್ದೇವೆ. ಪ್ರತಿಯೊಬ್ಬರ ಆದ್ಯತೆಯನ್ನು ಬದಲಾಯಿಸುವ ಪ್ರಯತ್ನ ಮಾಡುತ್ತೇವೆ ಎಂದು ಸಚಿವರು ವಿವರಿಸಿದರು.

ಮಹಿಳೆಯರು ರಾತ್ರಿ ವೇಳೆ ತಿರುಗಾಡುವುದು ಇತರೆಡೆಗಳಲ್ಲಿ ಸಮಂಜಸ ಇರಬಹುದು. ಆದರೆ ಅದು ಭಾರತೀಯ ಸಂಸ್ಕೃತಿಯ ಭಾಗವಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News