ಕಿಸ್ಮತ್ ಮಲಯಾಳಂನ ಸೈರಾತ್

Update: 2016-08-29 09:31 GMT

ಕಿಸ್ಮತ್, ಅನ್ನಾಯುಮ್ ರಸೂಲಮ್ ಹಾಗೂ ಸೈರಾತ್ ಚಿತ್ರಗಳ ಸಮಾನ ಅಂಶವೆಂದರೆ ಪ್ರೇಮಿಗಳು ಬೇರ್ಪಡುವ ಹತಾಶ ನಿರ್ಧಾರವನ್ನು ಕೈಗೊಳ್ಳುವಾಗ ಪರಸ್ಪರರಿಗೆ ತಿಳಿದಿರುವುದಿಲ್ಲ. ಅಷ್ಟು ಬೇಗ ಅದು ಅತೀ ಎನಿಸುವುದಿಲ್ಲವೇ? ಮೂರು ತಿಂಗಳು ಜತೆಯಾಗಿ ಬಾಳಿದ ಬಳಿಕ ಅಪರಿಚಿತರಾಗಿರಲು ಹೇಗೆ ಸಾಧ್ಯ? ವೈವಾಹಿಕ ಬಂಧನಕ್ಕೆ ಒಳಪಡುವ ಮೊದಲು ಕೆಲ ಪರಿಸ್ಥಿತಿಯಲ್ಲಾದರೂ ಉಳಿಯಬೇಡವೇ? ವಾಸ್ತವವೆಂದರೆ ಸಣ್ಣ ಪಟ್ಟಣದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ನಿಧಾನ, ಮಧುರ ಅನುಭೂತಿಗೆ ಅವಕಾಶ ಸಿಗದು. ಏಕೆಂದರೆ ಇಲ್ಲಿ ಗೋಡೆಗಳಿಗೂ ಕಿವಿ ಇರುತ್ತದೆ. ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತದೆ

        ಇತ್ತೀಚೆಗಷ್ಟೇ ಸೈರಾತ್ ಚಿತ್ರ ಭಾರತಾದ್ಯಂತ ಸುದ್ದಿ ಮಾಡಿತು. ನವಿರು ಪ್ರೇಮವೊಂದು ಜಾತಿಯ ಉರಿಯಲ್ಲಿ ಹೇಗೆ ಬೆಂದು ಹೋಗುತ್ತದೆ ಎನ್ನುವ ಕತೆಯನ್ನು ಹೊಂದಿದ ಈ ಚಿತ್ರ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿ ಮಾಡಿತು. ಮರಾಠಿಯಲ್ಲಂತೂ ಈ ಚಿತ್ರ ಸಣ್ಣದೊಂದು ಕ್ರಾಂತಿ ಮಾಡಿತು. ಜಾತೀವಾದಿಗಳ ಕಣ್ಣನ್ನು ಕೆಂಪು ಮಾಡಿತು. ಮಲಯಾಳಂನಲ್ಲಿ ಇತ್ತೀಚೆಗೆ ಬಂದ ‘ಕಿಸ್ಮತ್’ ನೋಡಿದವರಿಗೆ ತಕ್ಷಣ ಸೈರಾತ್ ನೆನಪಿಗೆ ಬಂದರೆ ಅದರಲ್ಲಿ ಅಚ್ಚರಿ ಇಲ್ಲ. ಅಲ್ಲಿ ದಲಿತ ಹುಡುಗ ಮತ್ತು ಮೇಲ್‌ಜಾತಿಯ ಹುಡುಗಿ ಮುಖ್ಯ ಪಾತ್ರಗಳಾದರೆ, ಇಲ್ಲಿ ಮುಸ್ಲಿಮ್ ಹುಡುಗ ಮತ್ತು ದಲಿತ ಹುಡುಗಿ ಚಿತ್ರವನ್ನು ಬೆಳೆಸುತ್ತಾರೆ. ಹಾಗೆ ನೋಡಿದರೆ ಸೈರಾತ್‌ನ ಲವಲವಿಕೆ ಚಿತ್ರದಲ್ಲಿ ತುಸು ಕಡಿಮೆಯಿದ್ದರೂ, ಅದಕ್ಕಿಂತಲೂ ಹೆಚ್ಚು ವಿಸ್ತಾರವಾದ ನೋಟವೊಂದನ್ನು ಕಿಸ್ಮತ್ ನಮಗೆ ನೀಡುತ್ತದೆ.

ಕಿಸ್ಮತ್ ಶುರುವಾಗುವುದು ಪೊಲೀಸ್ ಠಾಣೆಯಲ್ಲಿ. ಈ ಅನ್ಯಕೋಮಿನ ಜೋಡಿಯ ಪ್ರಣಯ ಮುಂದುವರಿಯಲು ಅವಕಾಶ ನೀಡುವುದಿಲ್ಲ ಎಂದು ಎರಡೂ ಕುಟುಂಬದವರು ಎಚ್ಚರಿಕೆ ನೀಡಿದ್ದರಿಂದ ಪೊಲೀಸ್ ರಕ್ಷಣೆ ಪಡೆಯಲು ಈ ಜೋಡಿ ಠಾಣೆಯ ಮೆಟ್ಟಿಲೇರುತ್ತದೆ. ಇದಕ್ಕೂ ಮೊದಲು ಶೀರ್ಷಿಕೆಯಲ್ಲಿ ‘‘ನಿರ್ಲಕ್ಷ್ಯವು ಕ್ರೌರ್ಯಕ್ಕಿಂತಲೂ ಭೀಕರ ದೌರ್ಜನ್ಯ’’ ಎಂಬ ಅಕ್ಷರ ಮೂಡುತ್ತದೆ. ಈ ಮೂಲಕ ದುರಂತ ಅಂತ್ಯಕ್ಕೆ ವೇದಿಕೆ ಸಜ್ಜಾಗುತ್ತದೆ. ಅವರ ರೊಮಾನ್ಸ್ ನ ಫ್ಲ್ಯಾಷ್‌ಬ್ಯಾಕ್ ವರ್ಣನೆ ಆರಂಭವಾದಾಗ ನನ್ನ ಕಣ್ಣು ತೇವಗೊಂಡವು. ಎಷ್ಟು ಸುಂದರ ಹಾಗೂ ಮುಗ್ಧವಾಗಿ ಅವರು ಕಾಣುತ್ತಿದ್ದಾರೆ; ಕ್ರಮೇಣ ಎಂಥ ದುರಂತವಾಗಿ ಮಾರ್ಪಡುತ್ತದೆ ಎನ್ನುವುದನ್ನು ನೆನೆದೇ ಕಸಿವಿಸಿ ಉಂಟಾಯಿತು.

ಕೇರಳದಲ್ಲಿ ಪ್ರತಿಯೊಬ್ಬರೂ ಕೋಮು ಸಾಮರಸ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಅದರ ಅರ್ಥವೇನು? ಒಂದು ಚೌಕದಲ್ಲಿ ದೇವಸ್ಥಾನ, ಚರ್ಚ್ ಹಾಗೂ ಮಸೀದಿ ಸಾಮರಸ್ಯದಿಂದ ಅಕ್ಕಪಕ್ಕದಲ್ಲೇ ದೀರ್ಘಕಾಲದ ವರೆಗೆ ಇದ್ದರೆ ಅದು ಸಾಮರಸ್ಯವೇ? ಹಿಂದೂ ಹಾಗೂ ಮುಸ್ಲಿಮರು ತಮ್ಮ ಹಬ್ಬದ ದಿನ ಪಾಯಸ ಹಾಗೂ ಬಿರಿಯಾನಿ ವಿನಿಮಯ ಮಾಡಿಕೊಂಡರೆ, ತಿಲಕವಿಟ್ಟುಕೊಂಡ ವ್ಯಕ್ತಿಯೊಬ್ಬ ಟೋಪಿ ಧರಿಸಿದ ಸ್ನೇಹಿತನನ್ನು ತಬ್ಬಿಕೊಳ್ಳುವ ಮೂಲಕ ಇದನ್ನು ಮೆರೆಯಬಹುದೇ? ಆದರೆ ಈ ತೆಳು ಸೌಹಾರ್ದದ ಅಸಲಿಯತ್ತನ್ನು ತುಸು ಉಜ್ಜಿನೋಡಿದರೆ ಅದರ ಬಣ್ಣ ಬಯಲಾಗಿ ಬಿಡುತ್ತದೆ. ವಿವಿಧ ಧರ್ಮಗಳು ಪ್ರೀತಿಯ ಬಿಂದುವನ್ನು ಸಂದಿಸಬಾರದೆ? ಎನ್ನುವ ಪ್ರಶ್ನೆಯನ್ನು ಕೇಳುತ್ತದೆ ಕಿಸ್ಮತ್.

ಇದು ಬರೇ ಪ್ರೇಮದ ಸುತ್ತ ತಿರುಗುವುದಿಲ್ಲ. ಪ್ರೇಮದ ನೆಪದಲ್ಲಿ ಹೇಗೆ ಬೇರೆ ಬೇರೆ ರಾಜಕೀಯಗಳು ತಮ್ಮ ಕ್ರೌರ್ಯವನ್ನು ಮೆರೆಯುತ್ತವೆ ಎನ್ನುವುದನ್ನು ತಿಳಿಸುತ್ತದೆ. ಚಿತ್ರವನ್ನು ಕೆಚ್ಚೆದೆಯ ಹಾಗೂ ರಾಜಕೀಯ ಚಿತ್ರವಾಗಿಸಿರುವುದು ನಾಯಕನಟಿ ದಲಿತ ಸಮುದಾಯಕ್ಕೆ ಸೇರಿರುವುದರಿಂದ. ಮಾನವ ಅಭಿವೃದ್ಧಿ ಹಾಗೂ ಅಭ್ಯುದಯದ ಪ್ರತಿಪಾದನೆಯ ನಡುವೆಯೂ, ಜಾತಿವಿಷ ಇನ್ನೂ ಕೇರಳದ ನಾಡಿಗಳಲ್ಲಿ ಹರಿಯುತ್ತಿದೆ. ವಿವಾಹಗಳನ್ನು ಜಾತಿ ಗೆರೆಯನ್ನು ಇನ್ನೂ ಉಲ್ಲಂಘಿಸಿಲ್ಲ. ಎಸ್ಸಿ/ಎಸ್ಟಿಗಳು ಕ್ಷಮಿಸಿ ಎಂಬ ವೈವಾಹಿಕ ಜಾಹೀರಾತುಗಳು ಇಂದಿಗೂ ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಜನಪ್ರಿಯ ಸಂಸ್ಕೃತಿ ಹಾಗೂ ಮನರಂಜನೆಗಳಲ್ಲಿ ದಲಿತ ಪ್ರಾತಿನಿಧ್ಯ ಬಹುತೇಕ ಶೂನ್ಯ. ಮಲೆಯಾಳಂ ಚಿತ್ರಗಳಲ್ಲಿ ಸವರ್ಣೀಯರೇ ನಾಯಕ- ನಾಯಕಿ. ಚಿತ್ರದ ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ, ಈ ಚಿತ್ರಕ್ಕೆ ಹಣಕಾಸು ನೆರವು ನೀಡಲು ನಿರ್ಮಾಪಕರು ನಾಯಕಿ ಪಾತ್ರದ ದಲಿತ ಐಡೆಂಟಿಟಿ ಬದಲಿಸುವಂತೆ ಹಾಗೂ ವಯಸ್ಸು ಕಡಿಮೆ ಮಾಡುವಂತೆ ಷರತ್ತು ವಿಧಿಸಿದ್ದರು.

ಅನಿತಾ ಹಾಗೂ ಇರ್ಫಾನ್ ಎಂಬ ಎರಡು ಮುಖ್ಯಪಾತ್ರಗಳು ಜನಮೈತ್ರಿ ಪೊಲೀಸ್ ಠಾಣೆಯಲ್ಲಿ ಸಹಾಯಕ್ಕಾಗಿ ಕಾಯುತ್ತಿರುವಾಗ ನಿರ್ಲಕ್ಷ್ಯದ ಕ್ರೌರ್ಯ ನಿಧಾನವಾಗಿ ಅನಾವರಣಗೊಳ್ಳುತ್ತದೆ. ಠಾಣೆಯ ಆಗು ಹೋಗು ಮಾಮೂಲಿನಂತಿರುತ್ತದೆ. ತರಾತುರಿಯ ರಾಜೀನಾಮೆ, ಮಧ್ಯವರ್ತಿಯೊಬ್ಬನ ಪರವಾಗಿ ವಲಸೆ ಕಾರ್ಮಿಕನಿಗೆ ಧಮಕಿ ಹಾಕುವುದು, ಸಹೋದ್ಯೋಗಿಯ ಕೆಲಸ ಉಳಿಸುವ ಸಲುವಾಗಿ ಠಾಣೆಯ ಸಹಾಯಕನಿಂದ ತಪ್ಪೊಪ್ಪಿಗೆ ಬರೆಸಿಕೊಳ್ಳುವುದು ಹೀಗೆ ಮಾಮೂಲಿಯಾಗಿ ಠಾಣೆ ಕಾರ್ಯ ನಿರ್ವಹಿಸುತ್ತಿರುತ್ತದೆ. ಈ ದಂಪತಿಯ ಸಮಸ್ಯೆ ಅವರ ಪಾಲಿಗೆ ಕೇವಲ ತಾತ್ಕಾಲಿಕ ಆತಂಕ. ಹೆಚ್ಚಿನ ಕಷ್ಟವಿಲ್ಲದೇ ಬಗೆಹರಿಸುವಂಥದ್ದು. ಆದ್ದರಿಂದ ಮಾಮೂಲಿನಂತೆ ಎರಡೂ ಕುಟುಂಬಗಳನ್ನೂ ಕರೆಸುತ್ತಾರೆ. ಈ ಸಂದರ್ಭದ ಕಟು ಚಿತ್ರಣವೊಂದು ಗಮನ ಸೆಳೆಯುತ್ತದೆ.ಪೊಲೀಸ್ ಠಾಣೆಯಲ್ಲಿ ಕಣ್ಣೀರಲ್ಲಿ ಕೈತೊಳೆಯುವವರನ್ನೂ ಸೇರಿಸಿ ಎಲ್ಲರಿಗೂ ಊಟದ ಪ್ಯಾಕೆಟ್ ನೀಡಲಾಗುತ್ತದೆ. ಇದು ಕುಟುಂಬದ ಚಿತ್ರಣದಂತೆ ಕಂಡುಬರುತ್ತದೆ. ಅಲ್ಲಿ ಎಲ್ಲ ಭೌತಿಕ ಅಗತ್ಯಗಳನ್ನು ಪೂರೈಸುವ ನಡುವೆಯೇ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ.

ಧಾರ್ಮಿಕ ಗೌರವವನ್ನು ಸಂರಕ್ಷಿಸುವ ಜನ ಅಲ್ಲಿರುತ್ತಾರೆ. ಇವರು ಪಿತೃಪ್ರಧಾನ ವ್ಯವಸ್ಥೆಯ ಕಾಲಾಳುಗಳು. ಸೈರಾತ್‌ನಲ್ಲಿ ಕುಟುಂಬದ ಗೌರವಕ್ಕೆ ಚ್ಯುತಿ ಬಾರದಂತೆ ತಡೆಯುವ ಒಂದು ವರ್ಗವಿದ್ದರೆ, ಕಿಸ್ಮತ್‌ನಲ್ಲಿ ಅಂಥ ಎರಡು ಗುಂಪುಗಳಿವೆ. ಇರ್ಫಾನ್‌ನ ತಂದೆ ಹಾಗೂ ಸಹೋದರರಿಗೆ ಹಿಂದೂ ಕೆಳವರ್ಗದ ಅನಿತಾ ತುಚ್ಛ. ಅನಿತಾಳ ಸಹೋದರನಿಗೆ, ತನ್ನ ಸಹೋದರಿ ಮುಸ್ಲಿಂ ಯುವಕನನ್ನು ಮದುವೆಯಾಗು ವುದಕ್ಕಿಂತ ಸಾವೇ ಲೇಸು. ಕುತೂಹಲಕರ ವಿಚಾರವೆಂದರೆ, ನಾಯಕ-ನಾಯಕಿಯ ತಾಯಂದಿರು ಮಾತ್ರ ತಮ್ಮ ಮಕ್ಕಳ ಆಶಯದ ಬಗ್ಗೆ ಅನುಕಂಪ ಹೊಂದಿದ್ದಾರೆ. ಕಿಸ್ಮತ್ ಚಿತ್ರದಲ್ಲಿ ಕೋಮು ತಪ್ಪುಭಾವನೆಯನ್ನು ವಿಸ್ತೃತಗೊಳಿಸುವ ಸಂಘದ ಪಾತ್ರದ ಬಗ್ಗೆಯೂ ಉಲ್ಲೇಖವಿದೆ. ಅನಿತಾಳ ಸಹೋದರ ಹಾಗೂ ಆತನ ಸ್ನೇಹಿತರು ಸಂಘದ ಕೇಡರ್ ಜತೆ ತೋರಿಕೆಗೆ ಗುರುತಿಸಿಕೊಂಡವರು. ಸ್ಥಳೀಯ ಅಡ್ಡೆಯಲ್ಲಿ ಕುಳಿತುಕೊಂಡು, ತೊಂದರೆಗಳನ್ನು ಎದುರು ನೋಡುತ್ತಾ, ಅನಿತಾ ಮೇಲೆ ಕಣ್ಣಿಡುವವರು.

ಇರ್ಫಾನ್‌ಗೆ ಥಳಿಸುತ್ತಾ, ಮಾಂಸ ತಿನ್ನುವ ಮುಸ್ಲಿಮರಿಗೆ ನಮ್ಮ ಹೆಣ್ಣುಮಕ್ಕಳ ಮೇಲೆ ಕೈ ಹಾಕುವಷ್ಟು ಧೈರ್ಯವೇ ಎಂದು ಬೊಬ್ಬಿಡುತ್ತಾರೆ!. ಮಲೆಯಾಳಂನಲ್ಲಿ ಇಂಥ ಗೋಮಾಂಸ ವಿರೋಧಿ ಘೋಷಣೆಯನ್ನು ಕೇಳುವುದೇಚೆನ್ನ. ಏಕೆಂದರೆ ಗೋಮಾಂಸ ಸರ್ವೇಸಾಮಾನ್ಯ. ಆದರೆ ಸಂಘದ ಬಹುತೇಕ ಮಂದಿ ಈ ಚಿತ್ರಣ ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಗೋಮಾಂಸದ ಉಲ್ಲೇಖವಾದಾಗಲೆಲ್ಲ ಅವರು ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಇದೇ ವೇಳೆ ಇರ್ಫಾನ್ ಮೇಲೆ ‘ಲವ್ ಜಿಹಾದ್’ ಆರೋಪ ಹೊರಿಸುತ್ತಾರೆ. ಕಿಸ್ಮತ್, ಅನ್ನಾಯುಮ್ ರಸೂಲಮ್ ಹಾಗೂ ಸೈರಾತ್ ಚಿತ್ರಗಳ ಸಮಾನ ಅಂಶವೆಂದರೆ ಪ್ರೇಮಿಗಳು ಬೇರ್ಪಡುವ ಹತಾಶ ನಿರ್ಧಾರವನ್ನು ಕೈಗೊಳ್ಳುವಾಗ ಪರಸ್ಪರರಿಗೆ ತಿಳಿದಿರುವುದಿಲ್ಲ. ಅಷ್ಟು ಬೇಗ ಅದು ಅತೀ ಎನಿಸುವುದಿಲ್ಲವೇ? ಮೂರು ತಿಂಗಳು ಜತೆಯಾಗಿ ಬಾಳಿದ ಬಳಿಕ ಅಪರಿಚಿತರಾಗಿರಲು ಹೇಗೆ ಸಾಧ್ಯ? ವೈವಾಹಿಕ ಬಂಧನಕ್ಕೆ ಒಳಪಡುವ ಮೊದಲು ಕೆಲ ಪರಿಸ್ಥಿತಿಯಲ್ಲಾದರೂ ಉಳಿಯಬೇಡವೇ? ವಾಸ್ತವವೆಂದರೆ ಸಣ್ಣ ಪಟ್ಟಣದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ನಿಧಾನ, ಮಧುರ ಅನುಭೂತಿಗೆ ಅವಕಾಶ ಸಿಗದು. ಏಕೆಂದರೆ ಇಲ್ಲಿ ಗೋಡೆಗಳಿಗೂ ಕಿವಿ ಇರುತ್ತದೆ. ಸುದ್ದಿ ಕಾಡ್ಗಿಚ್ಚಿ ನಂತೆ ಹರಡುತ್ತದೆ.

ಹೀರೊಯಿಸಂ ತ್ಯಜಿಸುವಲ್ಲಿ ಕೂಡಾ ಕಿಸ್ಮತ್ ಗಮನಾರ್ಹ ಚಿತ್ರ. ಅಪಾಯಕಾರಿ ಪ್ರೀತಿಯ ಕಥೆ. ವಿರೋಧಿಗಳನ್ನು ಎದುರಿಸಲು ಸಾಹಸದ ಮಾರ್ಗಕ್ಕೆ ಮುಂದಾಗುವ ಬದಲು, ಮುಖ್ಯಪಾತ್ರಗಳು ಅವರಿಗೆ ಕಾರಣಗಳನ್ನು ತಿಳಿಸುವ ಪ್ರಯತ್ನ ಮಾಡುತ್ತವೆ. ನಮ್ಮ ಪಾಡಿಗೆ ನಮ್ಮನ್ನು ಬಿಡುವಂತೆ ಕೇಳಿಕೊಳ್ಳುತ್ತದೆ. ಆದರೆ ಇದಕ್ಕೆ ಆ ಗುಂಪು ಅವಕಾಶ ನೀಡುವುದಿಲ್ಲ. ಸಾಂಸ್ಥಿಕ ಸ್ವರೂಪ ಸಂಕುಚಿತ ಮನೋಭಾವದಿಂದ ಹೊರಬರಲು ನಿರಾಕರಿಸುತ್ತದೆ. ನನಗೆ ಕಿಸ್ಮತ್ ಇಷ್ಟವಾಗಲು ಕಾರಣವೆಂದರೆ, ಕಮರ್ಶಿಯಲ್‌ನಾಚೆಗೆ ವಾಸ್ತವ ಬದುಕಿನ ಪ್ರೀತಿಯ ಚಿತ್ರಣ ನೀಡುವ ಧೈರ್ಯ ತೋರಿದೆ. ಶಾನ್ ನಿಗಮ್ ಹಾಗೂ ಶ್ರುತಿ ಮೆನನ್ ಗೌರವ ಹಾಗೂ ಭಾವತೀವ್ರತೆಯಿಂದ ಅಪ್ಯಾಯಮಾನವಾಗುತ್ತಾರೆ.

Writer - ಆಸಿಫ್ ಕಲಾಂ

contributor

Editor - ಆಸಿಫ್ ಕಲಾಂ

contributor

Similar News