ಕಾಶ್ಮೀರದಲ್ಲಿ ಕರ್ಫ್ಯೂ ಹಿಂದೆಗೆತ, ಸೆ.4ರಂದು ಸರ್ವಪಕ್ಷ ನಿಯೋಗದ ಭೇಟಿ
ಶ್ರೀನಗರ,ಆ.29: ಕಣಿವೆಯಲ್ಲಿ ಸೃಷ್ಟಿಯಾಗಿರುವ ಅಶಾಂತಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ನೇತೃತ್ವದ ಸರ್ವಪಕ್ಷ ನಿಯೋಗವೊಂದು ಸೆ.4ರಂದು ಇಲ್ಲಿಗೆ ಭೇಟಿ ನೀಡಲಿದೆ.
ಪ್ರತ್ಯೇಕತಾವಾದಿಗಳೊಂದಿಗೆ ನಿಯೋಗವು ಮಾತುಕತೆ ನಡೆಸುವುದನ್ನು ನಿರುತ್ತೇಜಿಸುವುದಿಲ್ಲ ಎಂದು ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರಕಾರಗಳು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಈ ಮಾತುಕತೆಗೆ ರಂಗವು ಸಜ್ಜಾಗಿರುವಂತಿದೆ.
ಜು.8ರಂದು ಹಿಜ್ಬುಲ್ ಮುಜಾಹಿದೀನ್ ಉಗ್ರ ಬರ್ಹಾನ್ ವಾನಿಯ ಹತ್ಯೆ ಬಳಿಕ ಹಿಂಸಾತ್ಮಕ ಘರ್ಷಣೆಗಳಿಂದಾಗಿ ಸತತ 51 ದಿನಗಳ ಕಾಲ ಜಾರಿಯಲ್ಲಿದ್ದ ಕರ್ಫ್ಯೂವನ್ನು ಸೋಮವಾರ ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಹಿಂದೆಗೆದುಕೊಳ್ಳಲಾಗಿದೆ.
ಆದರೆ ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡಿದ್ದರಿಂದ ಸೋಮವಾರ ಶಾಲಾ-ಕಾಲೇಜುಗಳು,ಕೆಲವು ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆಯ ವಾಹನಗಳು ರಸ್ತೆಗಿಳಿದಿರಲಿಲ್ಲ. ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ತೊಡಕುಂಟಾಗಿರಲಿಲ್ಲ.
ಹೆಚ್ಚಿನ ಸರಕಾರಿ ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಿದ್ದರು. ಬ್ಯಾಂಕುಗಳು ತೆರೆದಿದ್ದು, ಗ್ರಾಹಕರ ಸಂದಣಿಗೆ ಸಾಕ್ಷಿಯಾಗಿದ್ದವು. ಮೊಬೈಲ್ ಇಂಟರ್ನೆಟ್ ಸ್ಥಗಿತ ಮುಂದುವರಿದಿದೆ. ಭದ್ರತಾ ಪಡೆಗಳು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದವು.