ಭಾರತದಿಂದ ಮ್ಯಾನ್ಮಾರ್‌ಗೆ ಹೃತ್ಪೂರ್ವಕ ಬೆಂಬಲದ ಭರವಸೆ
ಹೊಸದಿಲ್ಲಿ, ಆ.29: ದಶಕಗಳ ಕಾಲದ ಸೇನಾಡಳಿತದ ಬಳಿಕ ಇದೀಗ ಹೊಸ ಹಾದಿಯಲ್ಲಿ ಸಾಗಲು ಸಿದ್ಧವಾಗಿರುವ ಮ್ಯಾನ್ಮಾರ್‌ನ ಪ್ರಯಾಣದ ಪ್ರತಿ ಹೆಜ್ಜೆಗೂ ಹೃತ್ಪೂರ್ವಕ ಬೆಂಬಲ ನೀಡುವೆನೆಂದು ಭಾರತವಿಂದು ಭರವಸೆ ನೀಡಿದೆ.
ಉಭಯ ದೇಶಗಳೂ ಸಂಬಂಧವನ್ನು ಬಲಪಡಿಸುವ ಹಾಗೂ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಬಂಡುಕೋರ ಚಟುವಟಿಕೆಗಳ ವಿರುದ್ಧ ಹೋರಾಟಕ್ಕೆ ಸಕ್ರಿಯ ಸಹಕಾರದ ನಿರ್ಧಾರವನ್ನು ಕೈಗೊಂಡಿವೆ.
ಅಂಗ್ ಸಾನ್ ಸೂಕಿಯವರ ನ್ಯಾಶನಲ್ ಲೀಗ್ ಆಫ್ ಡೆಮಾಕ್ರಸಿ ಪಕ್ಷದ ನೂತನ ಸರಕಾರ ದೊಂದಿಗಿನ ಮೊದಲ ಉನ್ನತ ಮಟ್ಟದ ಮಾತುಕತೆಯ ವೇಳೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮ್ಯಾನ್ಮಾರ್‌ನ ಅಧ್ಯಕ್ಷ ಯು ಹತಿನ್ ಕ್ಯಾವ್ ವಿಸ್ತೃತ ಚರ್ಚೆ ನಡೆಸಿದ್ದಾರೆ. ಮ್ಯಾನ್ಮಾರ್‌ನ ಆಂತರಿಕ ಶಾಂತಿ ಪ್ರಕ್ರಿಯೆಗೆ ಸಂಪೂರ್ಣ ಸಹಕಾರದ ಭರವಸೆಯನ್ನು ಮೋದಿ ನೀಡಿದ್ದಾರೆ.
ಸಂಪರ್ಕ, ಔಷಧ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಯ ನಾಲ್ಕು ಒಪ್ಪಂದಗಳಿಗೆ ಉಭಯ ದೇಶಗಳೂ ಸಹಿ ಹಾಕಿದ್ದು, ಕೃಷಿ, ಬ್ಯಾಂಕಿಂಗ್ ಹಾಗೂ ವಿದ್ಯುತ್ ಸಹಿತ ಹಲವು ವಲಯಗಳಲ್ಲಿ ಸಂಬಂಧವನ್ನು ಗಟ್ಟಿಗೊಳಿಸುವ ಬದ್ಧತೆ ವ್ಯಕ್ತಪಡಿಸಿವೆ.
ಬಳಿಕ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ಓದಿ ಹೇಳಿದ ಮೋದಿ, ಭಾರತ ಹಾಗೂ ಮ್ಯಾನ್ಮಾರ್‌ಗಳ ಭದ್ರತಾ ಹಿತಾಸಕ್ತಿಗಳು ನಿಕಟ ಸಂಬಂಧ ಉಳ್ಳವುಗಳಾಗಿವೆ. ಪರಸ್ಪರ ವ್ಯೆಹಾತ್ಮಕ ಹಿತಾಸಕ್ತಿ ಹಾಗೂ ಕಳವಳಗಳ ಬಗ್ಗೆ ಸೂಕ್ಷ್ಮತೆಯಿಂದಿರುವ ಅಗತ್ಯವನ್ನು ತಾವು ಗುರುತಿಸಿದ್ದೇವೆ. ಈ ದಿಸೆಯಲ್ಲಿ ತಾವಿಬ್ಬರೂ ತನ್ನ ಜನರ ಸುರಕ್ಷೆ ಹಾಗೂ ಭದ್ರತೆಯ ಕುರಿತು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದೇವೆಂದು ತಿಳಿಸಿದರು.