ನೇತಾಗಳು ಪ್ರತಿಯೊಂದು ಅಪರಾಧ ಪ್ರಕರಣವನ್ನೂ ಘೋಷಿಸಬೇಕೇ?
ಹೊಸದಿಲ್ಲಿ, ಆ.29: ಬಿಜೆಪಿ ಸಂಸದ ಛೇದಿ ಪಾಸ್ವಾನ್‌ರ ಚುನಾವಣೆಯನ್ನು ರದ್ದುಪಡಿಸಿದ್ದ ಪಾಟ್ನಾ ಹೈಕೋರ್ಟ್‌ನ ಆದೇಶವೊಂದಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ನಾಮಪತ್ರ ಸಲ್ಲಿಕೆಯ ವೇಳೆ ರಾಜಕಾರಣಿಗಳು ತಮ್ಮ ವಿರುದ್ಧದ ಪ್ರತಿಯೊಂದು ಅಪರಾಧ ಪ್ರಕರಣವನ್ನು ಕಡ್ಡಾಯವಾಗಿ ಘೋಷಿಸಬೇಕೇ ಅಥವಾ ಹೀನ ಅಪರಾಧ ಪ್ರಕರಣಗಳನ್ನು ಮಾತ್ರ ಸಾಕೇ ಎಂಬ ಕುರಿತು ತಾನು ಪರಿಶೀಲನೆ ನಡೆಸುವೆನೆಂದು ಅದು ಹೇಳಿದೆ.
ತನ್ನ ವಿರುದ್ಧ ವಿಚಾರಣೆಗೆ ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ‘ಅಡಗಿಸಿಟ್ಟುದಕ್ಕಾಗಿ’ ಸಸರಾಂ ಕ್ಷೇತ್ರದ ಸಂಸದ ಪಾಸ್ವಾನ್‌ರ ಆಯ್ಕೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡುವ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾಸ್ವಾನ್ ಆಗಿನ ಲೋಕಸಭಾಧ್ಯಕ್ಷೆ ಮೀರಾ ಕುಮಾರ್‌ರನ್ನು ಪರಾಭವಗೊಳಿಸಿದ್ದರು.
ತಾವು ಈ ಬಗ್ಗೆ ಆಳವಾಗಿ ಹೋಗಬೇಕಾಗಿದೆ. ಇದೊಂದು ಗಂಭೀರ ವಿಷಯವಾಗಿದೆ. ನ್ಯಾಯಾಲಯದ ಈ ಹಿಂದಿನ ತೀರ್ಪಿನಡಿ ಪ್ರತಿಯೊಂದು ಅಪರಾಧ ಬಂದಿತ್ತೇ ಅಥವಾ ಗಂಭೀರ ಅಪರಾಧಗಳು ಮಾತ್ರವೇ ಎನ್ನುವುದನ್ನು ತಾವು ಪರಿಶೀಲಿಸಬೇಕಿದೆಯೆಂದು ನ್ಯಾಯಮೂರ್ತಿಗಳಾದ ರಂಜನ್ ಗೊಗೋಯಿ ಹಾಗೂ ಪಿ.ಸಿ. ಪಂತ್‌ರನ್ನೊಳಗೊಂಡ ಪೀಠವು ಪ್ರಕರಣವನ್ನು ಅಂಗೀಕರಿಸುವ ವೇಳೆ ಹೇಳಿದೆ.
ಪಾಸ್ವಾನ್‌ರ ಪರ ಹಾಜರಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ, ತನ್ನಲ್ಲಿ ಅವರ ಕುರಿತಾದ ಮೂರು ಪ್ರಕರಣಗಳಿವೆ. ಅವುಗಳಲ್ಲೆರಡು 6 ತಿಂಗಳ ಶಿಕ್ಷೆ ವಿಧಿಸಬಹುದಾದವುಗಳು ಹಾಗೂ ಮೂರನೆಯದು ಪ್ರತಿಭಟನೆಯೊಂದರ ವೇಳೆ ಸಂಚಾರ ತಡೆಗೆ ಸಂಬಂಧಿಸಿದುದಾಗಿದೆ ಎಂದರು.
ಅಂತಹ ಪ್ರಕರಣಗಳನ್ನು ಬಹಿರಂಗಪಡಿಸದಿರುವುದು ಭ್ರಷ್ಟಾಚಾರ ಎಂದೆನಿಸದೆಂದು ಅವರು ವಾದಿಸಿದರು.