ಆರೆಸ್ಸೆಸ್‌ನಿಂದ ದೇವಾಲಯಗಳನ್ನು ‘ಶಸ್ತ್ರಾಗಾರ’ ಮಾಡುವ ಪ್ರಯತ್ನ: ಕೇರಳ ಸಚಿವ ಸುರೇಂದ್ರನ್

Update: 2016-08-30 07:00 GMT

ತಿರುವನಂತಪುರಂ, ಆ.30: ಆರೆಸ್ಸೆಸ್ ರಾಜ್ಯದ ದೇವಾಲಯಗಳನ್ನು ‘ಶಸ್ತ್ರಾಗಾರ’ಗಳನ್ನಾಗಿ ಮಾರ್ಪಾಟು ಮಾಡಲು ಯತ್ನಿಸುತ್ತಿದೆ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಆರೋಪಿಸಿದ್ದಾರೆ.
ಈ ಬಗ್ಗೆ ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಹೇಳಿಕೊಂಡಿರುವ ಸಚಿವರು ರಾಜ್ಯದ ಸಿಪಿಐ(ಎಂ) ನೇತೃತ್ವದ ಸರಕಾರ ಈಗಾಗಲೇ ಈ ಬಗ್ಗೆ ಹಲವಾರು ದೂರುಗಳನ್ನು ಪಡೆಯುತ್ತಿದೆ ಎಂದು ಬರೆದಿದ್ದಾರಲ್ಲದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಎಚ್ಚರಿಸಿದ್ದಾರೆ.
‘‘ ಆರೆಸ್ಸೆಸ್ ಸಹಿತ ಕೆಲ ಸಂಘಟನೆಗಳು ದೇವಸ್ವಂ ಮಂಡಳಿಯ ಅಧೀನದಲ್ಲಿ ಬರುವ ದೇವಳಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿವೆಯೆಂಬ ದೂರುಗಳು ನನಗೆ ಬಂದಿವೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿರುವ ಭಯವನ್ನು ಹೋಗಲಾಡಿಸುವ ಅಗತ್ಯವಿದೆ’’ಎಂದು ಅವರು ಹೇಳಿದ್ದಾರೆ.
‘‘ಆರೆಸ್ಸೆಸ್ ದೇವಳಗಳನ್ನು ‘ಶಸ್ತ್ರಾಗಾರ’ಗಳನ್ನಾಗಿಸಿ ಹಾಗೂ ‘ಶಸ್ತ್ರಾಸ್ತ್ರ ತರಬೇತಿ’ ನೀಡಿ ಭಕ್ತರನ್ನು ದೇವಳಗಳಿಂದ ದೂರ ಮಾಡಲು ಯತ್ನಿಸುತ್ತಿದೆ’’ ಎಂದೂ ಸಚಿವರು ದೂರಿದರು. ದೇವಸ್ಥಾನಗಳು ಧಾರ್ಮಿಕತೆಯ ಹಾಗೂ ನಂಬಿಕೆಯ ಕೇಂದ್ರಗಳಾಗಿದ್ದು, ಅಲ್ಲಿ ಸಮಾಜ ವಿರೋಧಿ ಚಟುವಟಿಕೆಗಳನ್ನು ಅನುಮತಿಸಬಾರದು ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದರಲ್ಲದೆ ಇದನ್ನು ಕೊನೆಗಾಣಿಸಲು ಸರಕಾರ ಹಸ್ತಕ್ಷೇಪ ನಡೆಸುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News