ಬಾರ್ ಬಾಲೆಯರ ಮೇಲೆ ಹಣ ಎಸೆಯುವಂತಿಲ್ಲ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಆ.30: ಮಹಾರಾಷ್ಟ್ರದ ಡ್ಯಾನ್ಸ್ ಬಾರ್‌ಗಳಲ್ಲಿ ನರ್ತಕಿಯರ ಮೇಲೆ ಹಣ ಎಸೆಯಬಾರದು. ಅದು ಮಹಿಳೆಯರ ಗೌರವ, ಸಂಸ್ಕೃತಿ ಹಾಗೂ ಸಭ್ಯತೆಗೆ ವಿರುದ್ಧವಾದುದೆಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.
ನರ್ತಕಿಯರ ಭಾವಚಿತ್ರ-ವೀಡಿಯೊ ತೆಗೆಯುವುದು ಸಹಿತ ಬಾರ್‌ಗಳ ಮೇಲೆ ನಿಕಟ ನಿಗಾ ಇಡಬೇಕೆನ್ನುತ್ತಿರುವ ರಾಜ್ಯ ಸರಕಾರದೊಂದಿಗೆ ಈ ಒಂದು ಅಂಶದ ಬಗ್ಗೆ ಅದು ಏಕಾಭಿಪ್ರಾಯ ವ್ಯಕ್ತಪಡಿಸಿವೆ.
ಮಹಾರಾಷ್ಟ್ರ ಸರಕಾರವು 2005ರಲ್ಲಿ ನಿಷೇಧಿಸಿದ್ದ ನೂರಾರು ಡ್ಯಾನ್ಸ್ ಬಾರ್‌ಗಳನ್ನು ಪುನರಾರಂಭಿಸಲು ಸುಪ್ರೀಂಕೋರ್ಟ್ 2013ರಲ್ಲಿ ಅನುಮತಿ ನೀಡಿತ್ತು. ಡ್ಯಾನ್ಸ್ ಬಾರ್‌ಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಹಾಗೂ ವೇಶ್ಯವಾಟಿಕೆಯನ್ನು ಉತ್ತೇಜಿಸುತ್ತವೆಂಬ ರಾಜ್ಯ ಸರಕಾರದ ವಾದವನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕುವುದರೊಂದಿಗೆ ಬಾರ್ ಮಾಲಕರು ಪರವಾನಿಗೆಗಾಗಿ ಪುನಃ ಅರ್ಜಿ ಅಲ್ಲಿಸಿದ್ದರು.
ಸರಕಾರವು ಎಪ್ರಿಲ್‌ನಲ್ಲಿ ಡ್ಯಾನ್ಸ್ ಬಾರ್‌ಗಳನ್ನು ನಿಯಂತ್ರಿಸುವ ಹೊಸ ಕಾನೂನೊಂದನ್ನು ಮಂಜೂರು ಮಾಡಿತ್ತು. ಆದರೆ, ಈಡೇರಿಸಲಾಗದ ಶರ್ತಗಳನ್ನು ಹೇರುವ ಮೂಲಕ ಸರಕಾರವು ಪರವಾನಿಗೆ ಪಡೆಯುವುದು ಅಸಾಧ್ಯಗೊಳಿಸಿದೆಯೆಂದು ಬಾರ್ ಬಾಲೆಯರ ಸಂಘಟನೆಗಳು ಆರೋಪಿಸುತ್ತಿವೆ.
ಇಂದಿನ ಪ್ರಕರಣವು ಮುಂಬೈಯ ರೆಸ್ಟೋರೆಂಟ್‌ಗಳ ಉದ್ಯಮ ಸಂಘಟನೆಯ ದೂರಿಗೆ ಸಂಬಂಧಿಸಿದುದಾಗಿತ್ತು. ಅದು, ಅಶ್ಲೀಲದ ಕುರಿತಾಗಿ ಸರಕಾರದ ವ್ಯಾಖ್ಯೆ ಹಾಗೂ ಬಾರ್‌ಗಳಲ್ಲಿ ಮದ್ಯ ನಿಷೇಧಿಸಬೇಕೆಂಬ ಅದರ ಈಡೇರಿಸಲಾಗದ ನಿಯಮದ ವಿರುದ್ಧದ ದೂರಾಗಿದೆ. ಸಿಸಿಟಿವಿ ಅಳವಡಿಸಬೇಕೆಂಬ ನಿಯಮ ನರ್ತಕಿಯರ ಖಾಸಗಿತನದ ಸಾಂವಿಧಾನಿಕ ಹಕ್ಕಿಗೆ ಉಲ್ಲಂಘನೆಯಾಗುತ್ತದೆಂದು ಅರ್ಜಿದಾರ ಸಂಘಟನೆ ಹೇಳಿದೆ.
ಬಾರ್‌ಗಳಲ್ಲಿ ಸಿಸಿಟಿವಿ ಅಳವಡಿಸುವುದು ತನ್ನ 2013ರ ತೀರ್ಪಿಗೆ ವಿರುದ್ಧವಾದುದೆಂದ ನ್ಯಾಯಾಲಯ ಪ್ರಕರಣವನ್ನು ಸೆ.21ಕ್ಕೆ ಮುಂದೂಡಿದೆ.