ಮದರ್ ತೆರೇಸಾಗೆ ಸಂತ ಪದವಿ ಕಾರ್ಯಕ್ರಮಕ್ಕೆ ಕೇಂದ್ರದ ನಿಯೋಗ:ಆರೆಸ್ಸೆಸ್ ಗರಂ
ಹೊಸದಿಲ್ಲಿ, ಆ.31: ನಿರ್ಗತಿಕರ ಸೇವೆಗೆ ಜೀವನ ಮುಡಿಪಾಗಿಟ್ಟಿದ್ದ, ನೊಬೆಲ್ ಶಾಂತಿ ಪುರಸ್ಕೃತ ಮದರ್ ತೆರೇಸಾ ಅವರಿಗೆ ಸೆಪ್ಟಂಬರ‍್ 4ರಂದು ವೆಟಿಕನ್ ನಲ್ಲಿ ನೀಡಲಾಗುವ "ಸಂತ ಪದವಿ" ಪ್ರದಾನ ಸಮಾರಂಭಕ್ಕೆ ಭಾರತದಿಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ ನಿಯೋಗವನ್ನು ಕಳುಹಿಸಿಕೊಡುವ ನಿರ್ಧಾರಕ್ಕೆ ಆರೆಸ್ಸೆಸ್ ಅಮಾಧಾನ ವ್ಯಕ್ತಪಡಿಸಿದೆ.
ಮದರ‍್ ತೆರೇಸಾ ಬಗ್ಗೆ ಹಿಂದಿನಿಂದಲೂ ಆರೆಸ್ಸೆಸ್‌ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಮದರ್ ತೆರೇಸಾ ಅವರ ಬಡವರ ಸೇವೆ ನಿಸ್ವಾರ್ಥವಾಗಿದ್ದಿರಬಹುದು. ಆದರೆ ಅವರ ಸೇವೆಯ ಹಿಂದೆ ಕ್ರೈಸ್ತ ಧರ್ಮದ ಮತಾಂತರದ ಉದ್ದೇಶವಿತ್ತು ಎನ್ನುವುದು ಆರೆಸ್ಸೆಸ್ ಆರೋಪವಾಗಿದೆ.
ಇತ್ತೀಚೆಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮದರ್ ತರೇಸಾ ಬಗ್ಗೆ ಮೋದಿ ಗುಣಗಾಣ ಮಾಡಿದ್ದರು. ಇದು ಆರೆಸ್ಸೆಸ್‌ನ ಕೋಪಕ್ಕೆ ಕಾರಣವಾಗಿತ್ತು.
ವೆಟಿಕನ್‌ನಲ್ಲಿ ನಡೆಯಲಿರುವ ಮದರ‍್ ತೆರೇಸಾರ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ ಭಾರತದ ನಿಯೋಗದಲ್ಲಿ ಆಹಾರ ಸಂಸ್ಕರಣಾ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ , ದಿಲ್ಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ , ಗೋವಾದ ಉಪಮುಖ್ಯ ಮಂತ್ರಿ ಫ್ರಾನ್ಸಿಸ್ ಡಿ’ ಸೋಜ ಇದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ವೆಟಿಕನ್‌ಗೆ ತೆರಳಲಿದ್ದಾರೆ. ಆದರೆ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಅವರಿಗೆ ವೆಟಿಕನ್‌ನಿಂದ ಕರೆ ಬಂದಿದೆಯಂತೆ.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಸಕ್ತಿ ವಹಿಸಿದ್ದರೂ, ಆರೋಗ್ಯ ಸಮಸ್ಯೆ ಅಡ್ಡಿಪಡಿಸಿದೆ.