×
Ad

ದ.ಚೀನಾ ಸಮುದ್ರ, ಎನ್‌ಎಸ್‌ಜಿ, ಭೀತಿವಾದ ಕುರಿತು ಭಾರತ-ಅಮೆರಿಕ ಏಕಾಭಿಪ್ರಾಯ

Update: 2016-08-31 22:56 IST

ಹೊಸದಿಲ್ಲಿ,ಆ.31: ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ಪ್ರಾದೇಶಿಕ ಹಕ್ಕು ಸಾಧನೆಯ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯವು ಎರಡು ತಿಂಗಳ ಹಿಂದೆ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಬುಧವಾರ ಭಾರತ ಮತ್ತು ಅಮೆರಿಕ ಅಂತಾರಾಷ್ಟ್ರೀಯ ಕಾನೂನಿಗೆ ಅತ್ಯಂತ ಹೆಚ್ಚಿನ ಗೌರವ ನೀಡುವಂತೆ ಕರೆ ನೀಡಿವೆ. ಇದೇ ವೇಳೆ ಅವು ವಿವಾದಿತ ಪ್ರದೇಶದಲ್ಲಿ ಕಾನೂನುಬದ್ಧ ವಾಣಿಜ್ಯಿಕ ಚಟುವಟಿಕೆಗಳು ನಿರಾತಂಕವಾಗಿರಬೇಕು ಎಂದು ಪ್ರತಿಪಾದಿಸಿವೆ.
ಮಂಗಳವಾರ ತಮ್ಮ ವಾರ್ಷಿಕ ವ್ಯೆಹಾತ್ಮಕ ಮತ್ತು ವಾಣಿಜ್ಯಿಕ ಮಾತುಕತೆಗಳನ್ನು ನಡೆಸಿರುವ ಉಭಯ ರಾಷ್ಟ್ರಗಳು, ಪರಮಾಣು ಪೂರೈಕೆದಾರರ ಗುಂಪಿಗೆ(ಎನ್‌ಎಸ್‌ಜಿ) ಭಾರತದ ಶೀಘ್ರ ಪ್ರವೇಶಕ್ಕೆ ಪ್ರಯತ್ನವನ್ನು ಇಮ್ಮಡಿಗೊಳಿಸುವುದಾಗಿ ಹೇಳಿವೆ. ಎನ್‌ಎಸ್‌ಜಿಗೆ ಭಾರತದ ಪ್ರವೇಶವನ್ನು ಚೀನಾ ವಿರೋಧಿಸುತ್ತಿದೆ. ತಮ್ಮ ‘ಸಾಮಾನ್ಯ ಹಿತಾಸಕ್ತಿ’ಗಾಗಿ ಭಾರತದ ಪ್ರಯತ್ನವನ್ನು ಬೆಂಬಲಿಸುವಂತೆ ಅಮೆರಿಕವು ಎನ್‌ಎಸ್‌ಜಿ ಸದಸ್ಯ ರಾಷ್ಟ್ರಗಳನ್ನು ಆಗ್ರಹಿಸಿದೆ.
   ಮಂಗಳವಾರದ ಮಾತುಕತೆಗಳ ಸಾರಾಂಶ ಗಳುಳ್ಳ ಜಂಟಿ ಹೇಳಿಕೆಯೊಂದನ್ನು ಬುಧವಾರ ಬಿಡುಗಡೆಗೊಳಿಸಲಾಗಿದ್ದು, ಉಭಯ ರಾಷ್ಟ್ರಗಳು ಭೀತಿವಾದವನ್ನು ಅದರ ಎಲ್ಲ ರೂಪಗಳಲ್ಲಿ ಖಂಡಿಸಿವೆಯಲ್ಲದೆ, ಐಸಿಸ್, ಅಲ್-ಖಾಯಿದಾ, ಲಷ್ಕರೆ ತಯ್ಯಿಬಾ, ಜೈಷೆ ಮುಹಮ್ಮದ್, ಡಿ ಕಂಪೆನಿ ಮತ್ತು ಅದರ ಸಹವರ್ತಿ ಗುಂಪುಗಳು ಹಾಗೂ ಹಕ್ಕಾನಿ ನೆಟ್‌ವರ್ಕ್‌ಗಳಂತಹ ಭಯೋ ತ್ಪಾದಕ ಮತ್ತು ಕ್ರಿಮಿನಲ್ ಜಾಲಗಳ ಸುರಕ್ಷಿತ ತಾಣಗಳನ್ನು ನಿರ್ಮೂಲಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ.
2008ರ ಮುಂಬೈ ಮತ್ತು 2016ರ ಪಠಾಣ್‌ಕೋಟ್ ಭಯೋತ್ಪಾದಕ ದಾಳಿಗಳ ರೂವಾರಿಗಳನ್ನು ಶಿಕ್ಷೆಗೊಳಪಡಿಸುವಂತೆ ಪಾಕಿಸ್ತಾನಕ್ಕೆ ಉಭಯ ರಾಷ್ಟ್ರಗಳು ಕರೆ ನೀಡಿವೆ.
ಅಫ್ಘಾನಿಸ್ತಾನದಲ್ಲಿ ಮುಂದುವರಿದಿರುವ ಹಿಂಸೆ ಮತ್ತು ಭೀತಿವಾದದ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತ ಮತ್ತು ಅಮೆರಿಕ ಸ್ಥಿರ, ಪ್ರಜಾಸತ್ತಾತ್ಮಕ ಮತ್ತು ಸಂಯುಕ್ತ ಅಫ್ಘಾನಿಸ್ತಾನ ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಸುಸ್ಥಿರ ಬದ್ಧತೆ ಮತ್ತು ಬೆಂಬಲಕ್ಕೆ ಕರೆ ನೀಡಿವೆ.
ಭಾರತವನ್ನು ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರ ಎಂದು ಪ್ರಕಟಿಸುವುದರ ಮಹತ್ವವನ್ನು ಜಂಟಿ ಹೇಳಿಕೆಯಲ್ಲಿ ಗುರುತಿಸಿರುವ ಉಭಯ ರಾಷ್ಟ್ರಗಳು ಜಂಟಿ ಉತ್ಪಾದನೆ ಮತ್ತು ಜಂಟಿ ಅಭಿವೃದ್ಧಿ ಕ್ಷೇತ್ರದಲ್ಲಿ ತ್ವರಿತವಾಗಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿವೆ.
 ಸೈಬರ್ ಲೋಕದಲ್ಲಿ ಹೆಚ್ಚುತ್ತಿರುವ ಬೆದರಿಕೆಗಳು ಮತ್ತು ಸವಾಲುಗಳ ಹಿನ್ನೆಲೆಯಲ್ಲಿ ಸೈಬರ್ ಸುರಕ್ಷತೆಯನ್ನು ಉತ್ತೇಜಿಸಲು ಮತ್ತು ಸೈಬರ್ ಅಪರಾಧಗಳ ವಿರುದ್ಧ ಸಮರವನ್ನು ಸಾರಲು ಜೊತೆಯಾಗಿ ಶ್ರಮಿಸುವ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿವೆ. ಇದಕ್ಕಾಗಿ ಭಾರತ-ಅಮೆರಿಕ ಸೈಬರ್ ಬಾಂಧವ್ಯಕ್ಕಾಗಿ ಮಾರ್ಗದರ್ಶಿ ಸೂತ್ರಕ್ಕೆ ಅಂಕಿತ ಹಾಕಲು ಅವು ಒಪ್ಪಿಕೊಂಡಿವೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News