ಕೇಂದ್ರದ ನಿರ್ಧಾರಕ್ಕೆ ಸಂಘಪರಿವಾರ ಗರಂ

Update: 2016-08-31 17:32 GMT

ಹೊಸದಿಲ್ಲಿ, ಆ.31: ಸೆಪ್ಟಂಬರ್ 4ರಂದು ನಡೆಯಲಿರುವ ಮದರ್ ತೆರೆಸಾರನ್ನು ಸಂತ ಪದವಿಗೇರಿಸುವ ಸಮಾರಂಭಕ್ಕೆ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ನೇತೃತ್ವದ ನಿಯೋಗವೊಂದನ್ನು ವ್ಯಾಟಿಕನ್‌ಗೆ ಕಳುಹಿಸುವ ಕೇಂದ್ರ ಸರಕಾರದ ನಿರ್ಧಾರ ಸಂಘಪರಿವಾರವನ್ನು ಕೆಂಪಾಗಿಸಿದೆ. ಅದು ಬಿಜೆಪಿ ಹಾಗೂ ಸಂಘಪರಿವಾರದ ನಡುವಿನ ಸಂಘರ್ಷಕ್ಕೆ ಹೊಸ ಕಾರಣವಾಗುವ ಸಾಧ್ಯತೆ ಗೋಚರಿಸಿದೆ.

ಗೋರಕ್ಷಕರ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಟೀಕೆಗೆ ಇನ್ನೂ ಕಿಡಿಯುಗುಳುತ್ತಲೇ ಇರುವ ಸಂಘಪರಿವಾರದ ಸಂಘಟನೆಗಳು ಈ ನಿರ್ಧಾರ ತಮ್ಮ ಸಿದ್ಧಾಂತಕ್ಕೆ ವಿರುದ್ಧವೆಂದು ಅಭಿಪ್ರಾಯಿಸಿವೆ.
ಬಿಜೆಪಿಯ ನಿಲುಮೆ ಬದಲಾವಣೆಯ ಔಚಿತ್ಯವನ್ನು ಕಾರ್ಯಕರ್ತರಿಗೆ ವಿವರಿಸುವುದು ಸಂಘದ ಮುಖಂಡರಿಗೆ ಕಷ್ಟವಾಗಿದೆ. ಸದ್ಯಕ್ಕೆ ಆರೆಸ್ಸೆಸ್ ವರಿಷ್ಠರು ಸರಕಾರದ ಈ ನಿರ್ಧಾರವನ್ನು ರಾಜಕೀಯ ಅನಿವಾರ್ಯವೆಂದು ತಣ್ಣಗಾಗಿಸಿದ್ದಾರೆಂದು ಅಜ್ಞಾತವಾಗುಳಿಯ ಬಯಸಿದ ಆರೆಸ್ಸೆಸ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೆಸ್ಸೆಸ್ ಹಾಗೂ ಅದರ ಸಹ ಸಂಘಟನೆಗಳು ಅಲ್ಬೇನಿಯಾ ಸಂಜಾತೆ ಮದರ್ ತೆರೆಸಾರನ್ನು ಸದಾ ಸಂಶಯದಿಂದಲೇ ನೋಡುತ್ತ ಬಂದಿವೆ. ಅವರು 1950ರಲ್ಲಿ ಸ್ಥಾಪಿಸಿದ್ದ ಮಿಶನರೀಸ್ ಆಫ್ ಚಾರಿಟಿ ಸಂಸ್ಥೆಯನ್ನು ತೆರೆಸಾ ಮತಾಂತರಕ್ಕೆ ಉಪಯೋಗಿಸಿದ್ದರೆಂದು ಅವು ಆರೋಪಿಸುತ್ತಿವೆ.
ವ್ಯಾಟಿಕನ್‌ಗೆ ನಿಯೋಗ ಕಳುಹಿಸುವುದು ಚುನಾಯಿತ ಸರಕಾರವೊಂದರ ರಾಜಕೀಯ ನಿರ್ಧಾರವೆಂದು ಆರೆಸ್ಸೆಸ್ ವರ್ಣಿಸಿದ್ದರೂ, ವಿಶ್ವ ಹಿಂದೂ ಪರಿಷತ್‌ನಂತಹ ಅದರ ತೀವ್ರಗಾಮಿ ಸಂಘಟನೆಗಳು ತಮ್ಮ ಪಂಜಗಳನ್ನು ಅರಳಿಸಿವೆ.
ತೆರೆಸಾರನ್ನು ಸಂತ ಪದವಿಗೇರಿಸುವ ಇಡೀ ಪ್ರಕ್ರಿಯೆಯಲ್ಲೇ ಸುಳ್ಳಿದೆ. ಈ ದಿನಗಳಲ್ಲಿ ಹಾಗೂ ಯುಗದಲ್ಲಿ ಪವಾಡಗಳ ಬಗ್ಗೆ ಮಾತನಾಡುವುದೇ ಅಸಂಬದ್ಧವಾಗಿದೆ. ತೆರೆಸಾರ ಪವಾಡಗಳನ್ನು ಒಪ್ಪಿಕೊಳ್ಳುವ ಮೂಲಕ ಸರಕಾರವು ಹೆಚ್ಚು ಮತಾಂತರಕ್ಕೆ ಬಾಗಿಲು ತೆರೆಯುತ್ತಿದೆಯೆಂದು ವಿಎಚ್‌ಪಿಯ ಅಂತಾರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಆರೋಪಿಸಿದ್ದು, ಮಿಶನರೀಸ್ ಆಫ್ ಚಾರಿಟಿ ನಡೆಸಿದೆಯೆನ್ನಲಾಗಿರುವ ಮತಾಂತರದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News