ಮಾಹಿತಿ ಹಕ್ಕಿನಲ್ಲಿ ಕನ್ಹಯ್ಯ ಲಾಲ್ ಕೇಳಿದ ಈ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರಿಸಲು ಸಾಧ್ಯವೇ ?

Update: 2016-09-01 04:50 GMT

ಹೊಸದಿಲ್ಲಿ, ಸೆ.1: ರಾಜಸ್ಥಾನದ ಝಲವರ್ ಜಿಲ್ಲೆಯ ಕನ್ಹಯ್ಯ ಲಾಲ್ ಎಂಬ ವ್ಯಕ್ತಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ ಆರ್‌ಟಿಐ ಅರ್ಜಿಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತರಿಸಲು ಸಾಧ್ಯವೇ ಎಂಬ ಕುತೂಹಲಕಾರಿ ಪ್ರಶ್ನೆ ಎದ್ದಿದೆ. ಅಷ್ಟಕ್ಕೂ ಈ ವ್ಯಕ್ತಿ ಕೇಳಿದ ಪ್ರಶ್ನೆಯೇನು ಗೊತ್ತೇ ? ಮೋದಿ 2014 ರ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತಂದು ಪ್ರತಿಯೊಬ್ಬ ಬಡ ಭಾರತೀಯನ ಬ್ಯಾಂಕ್ ಖಾತೆಯಲ್ಲೂ 15 ಲಕ್ಷ ರೂ. ಜಮಾ ಮಾಡುವ ಆಶ್ವಾಸನೆ ನೀಡಿದ್ದರು. ಹೀಗಿರುವಾಗ ಈ 15 ಲಕ್ಷ ರೂ. ಯಾವಾಗ ತನ್ನ ಖಾತೆಗೆ ಜಮಾ ಆಗುವುದು ? ಎಂದು ಕನ್ಹಯ್ಯ ಪ್ರಶ್ನಿಸಿದ್ದಾನೆ.

ಇದೀಗ ಪ್ರಧಾನಿ ಕಾರ್ಯಾಲಯಕ್ಕೆ ಈ ಪ್ರಶ್ನೆಗೆ ಮುಂದಿನ 15 ದಿನಗಳೊಳಗೆ ಉತ್ತರ ನೀಡುವಂತೆ ಮುಖ್ಯ ಮಾಹಿತಿ ಆಯುಕ್ತರು ನಿರ್ದೇಶನ ನೀಡಿದ್ದಾರೆ.

ಪ್ರಧಾನಿ ಕಾರ್ಯಾಲಯಕ್ಕೆ ಮುಖ್ಯ ಚುನಾವಣಾ ಆಯುಕ್ತ ರಾಧಾ ಕೃಷ್ಣ ಮಾಥುರ್ ನೀಡಿರುವ ಲಿಖಿತ ನಿರ್ದೇಶನದಲ್ಲಿ ಹೀಗೆಂದು ಹೇಳಿದ್ದಾರೆ ‘‘ಪ್ರಧಾನಿ ಚುನಾವಣೆ ಸಂದರ್ಭ ತಮ್ಮ ಭಾಷಣದಲ್ಲಿ ದೇಶದಿಂದ ಭ್ರಷ್ಟಾಚಾರವನ್ನು ತೊಲಗಿಸುವುದಾಗಿ ಘೋಷಿಸಿದ್ದರೂ ಈಗ ಅದು ಶೇ.90 ರಷ್ಟು ಹೆಚ್ಚಾಗಿರುವುದರಿಂದ ದೂರುದಾರರು ಮಾನ್ಯ ಪ್ರಧಾನಿಯಿಂದ ಉತ್ತರ ನಿರೀಕ್ಷಿಸುತ್ತಿದ್ದಾರೆ. ಅಂತೆಯೇ ದೇಶದಿಂದ ಭ್ರಷ್ಟಾಚಾರವನ್ನು ತೊಲಗಿಸಲು ಕಾನೂನನ್ನು ಯಾವಾಗ ರಚಿಸಲಾಗುವುದು ಎಂದೂ ಅವರು ತಿಳಿಯ ಬಯಸಿದ್ದಾರೆ.’’

ಸರಕಾರದ ಯೋಜನೆಗಳ ಪ್ರಯೋಜನವು ಕೇವಲ ಶ್ರೀಮಂತರಿಗೆ ದೊರಕುತ್ತಿದ್ದು ಬಡವರಿಗಲ್ಲ ಹಾಗೂ ಹಿಂದಿನ ಸರಕಾರ ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟುಗಳಲ್ಲಿ ಒದಗಿಸಿದ್ದ ಶೇ. 40 ರಿಯಾಯಿತಿಯನ್ನು ಈಗಿನ ಸರಕಾರ ಹಿಂದಕ್ಕೆ ಪಡೆಯುವುದೇ ಎಂದೂ ಅರ್ಜಿದಾರ ಪ್ರಶ್ನಿಸಿದ್ದಾನೆ.

ಪ್ರಧಾನಿ ಕಾರ್ಯಾಲಯದ ಮುಖ್ಯ ಮಾಹಿತಿ ಅಧಿಕಾರಿಯ ಪ್ರತಿಕ್ರಿಯೆ ಇಲ್ಲಿ ತನಕ ದಾಖಲಾಗಿಲ್ಲವೆಂದೂ ಇತ್ತೀಚೆಗೆ ನಡೆದ ವಿಚಾರಣೆ ವೇಳೆ ಮಾಥುರ್ ಹೇಳಿದ್ದರು. ತಮಗೆ ಕನ್ಹಯ್ಯ ಲಾಲ್ ನ ಅರ್ಜಿ ತಲುಪಿಲ್ಲವೆಂದು ಈ ಸಂದರ್ಭ ಉಪಸ್ಥಿತರಿದ್ದ ಪ್ರಧಾನಿ ಕಾರ್ಯಾಲಯದ ಅಧಿಕಾರಿಯೊಬ್ಬರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News