ಬೈಕ್ ನಲ್ಲೇ ತಾಯಿಯ ಮೃತದೇಹವನ್ನು ಕೊಂಡೊಯ್ದ ಮಕ್ಕಳು
ಭೋಪಾಲ್,ಸೆ.1; ಆ್ಯಂಬುಲೆನ್ಸ್ ಸಿಗದ ಕಾರಣದಿಂದ ತಾಯಿಯ ಪಾರ್ಥಿವಶರೀರವನ್ನು ಮಕ್ಕಳಿಬ್ಬರು ಹನ್ನೆರೆಡು ಕಿ.ಮೀ.ದೂರದವರೆಗೆ ಬೈಕ್‌ನಲ್ಲಿರಿಸಿ ಕೊಂಡೊಯ್ದ ಆಘಾತಕಾರಿ ಘಟನೆಮಧ್ಯಪ್ರದೇಶದ ಸಿಯೋಣಿ ಜಿಲ್ಲೆಯ ಉಲಟ್ಟ್ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಅನಾರೋಗ್ಯ ಉಲ್ಬಣಗೊಂಡಾಗ ಪಾರ್ವತಾ ಬಾಯಿ ಎಂಬ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಕೆಯ ಸಂಬಂಧಿಕರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರು. ಮಕ್ಕಳು ಕೂಡಾ ವಾಹನಕ್ಕಾಗಿ ಹಲವರಿಗೆ ಫೋನ್ ಮಾಡಿದರು. ಈ ನಡುವೆ ಪಾರ್ವತಾಬಾಯಿಯ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟದ್ದರಿಂದ ಮಕ್ಕಳು ಅಮ್ಮನನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕೊಂಡೊಯ್ದರು. ಹನ್ನೆರಡು ಕಿ.ಮೀ. ಪ್ರಯಾಣಿಸಿ ಆಸ್ಪತ್ರೆಗೆ ತಲುಪುವ ಮೊದಲೇ ಪಾರ್ವತಾ ಬಾಯಿ ತೀರಿಹೋಗಿದ್ದರು ಎಂದು ವರದಿ ತಿಳಿಸಿದೆ. ಮೃತದೇಹವನ್ನು ಮರಳಿ ಮನೆಗೆ ಕರೆತರಲು ಆಸ್ಪತ್ರೆ ಅಧಿಕಾರಿಗಳೊಂದಿಗೆ ಆ್ಯಂಬುಲೆನ್ಸ್ ನೀಡುವಂತೆ ಕೇಳಿದರು. ಈ ಬಾರಿ ಅವರಿಗೆ ಆ್ಯಂಬುಲೆನ್ಸ್ ದೊರಕಿತ್ತು. ಆದರೆ ಅದರ ಚಾಲಕ ಉಲಟ್ಟ್ ಗೆ ಹೋಗಲು ಒಪ್ಪಲಿಲ್ಲ. ಮಕ್ಕಳು ಚಾಲಕನೊಡನೆ ಪರಿಪರಿಯಾಗಿ ವಿನಂತಿಸಿದರೂ ಆತನ ಮನಸ್ಸು ಕರಗಲಿಲ್ಲ. ಬೇರೆ ಉಪಾಯವಿಲ್ಲದೆ ತಾಯಿಯ ಮೃತದೇಹವನ್ನು ಬೈಕ್‌ನಲ್ಲಿರಿಸಿ ಹನ್ನೆರಡು ಕಿಲೋಮೀಟರ್ ಪ್ರಯಾಣಿಸಿ ಮನೆಗೆ ಮರಳಿ ತಂದಿದ್ದಾರೆ. ಒಡಿಶಾದಲ್ಲಿ ಆ್ಯಂಬುಲೆನ್ಸ್ ಸಿಗದ್ದರಿಂದ ಪತ್ನಿಯ ಮೃತದೇಹವನ್ನು ಹೆಗಲಲ್ಲಿ ಹೊತ್ತು ನಡೆದಿದ್ದ ಪತಿಯ ದುರವಸ್ಥೆ, ಮತ್ತು ಉತ್ತರಪ್ರದೇಶದಲ್ಲಿ ಚಿಕಿತ್ಸೆ ದೊರಕದೆ ಆರನೆ ಕ್ಲಾಸ್ ವಿದ್ಯಾರ್ಥಿ ತಂದೆಯ ಹೆಗಲಲ್ಲೇ ಮರಣವಪ್ಪಿದ ಘಟನೆ ದೇಶದಾದ್ಯಂತ ಚರ್ಚೆಯಾಗಿರುವ ಸಂದರ್ಭದಲ್ಲಿಯೇ ಅದೇ ರೀತಿಯ ಇನ್ನೊಂದು ಘಟನೆ ಇದೆಂದು ವರದಿ ತಿಳಿಸಿದೆ.