ವೆಸ್ಟರ್ನ್ ಯೂನಿಯನ್ ನಲ್ಲಿ ಹಣ ಪಡೆಯಲು ಹಿಂದೂ ಹೆಸರೇ ಬೇಕೆ ?
ಹೊಸದಿಲ್ಲಿ, ಸೆ.1: ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟಿ ಹೇಝೆಲ್ ಕೀಚ್ ಅವರ ಜೋಡಿ ಅನುರೂಪ. ಕಳೆದ ನವೆಂಬರ್ ತಿಂಗಳಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ಅವರು ಈ ಡಿಸೆಂಬರ್ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ವೈರ್ ಟ್ರಾನ್ಸ್‌ಫರ್ ಹಣ ವರ್ಗಾವಣೆಗೆ ಹೇಝೆಲ್ ಮುಂದಾದಾಗ ಅದರ ಪ್ರಯೋಜನವನ್ನು ಅಧಿಕಾರಿಯೊಬ್ಬರು ಅವರಿಗೆ ನಿರಾಕರಿಸಿ ಜನಾಂಗ ಬೇಧ ಮಾಡಿದ್ದಾರೆಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಈ ಬಗ್ಗೆ ಹೇಝೆಲ್ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಾಗಲೇ ಇದು ಹೊರ ಜಗತ್ತಿಗೆ ತಿಳಿದು ಬಂದಿದ್ದು.‘‘ನನ್ನ ಹೆಸರು ‘ಹಿಂದೂ’ ಹೆಸರಿನಂತಿರಲಿಲ್ಲವೆಂಬ ಕಾರಣ ನೀಡಿ ನನಗೆ ಹಣ ನೀಡಲು ನಿರಾಕರಿಸಿದ ವೆಸ್ಟರ್ನ್ ಯೂನಿಯನ್ ಜೈಪುರದ ಪೀಯೂಶ್ ಶರ್ಮ ನಾನು ಇಲ್ಲಿಯ ತನಕ ಭೇಟಿ ಮಾಡಿದ ಅತ್ಯಂತ ಹೆಚ್ಚು ಜನಾಂಗ ಬೇಧ ಮಾಡುವ ವ್ಯಕ್ತಿ’’ ಎಂದು ಹೇಝೆಲ್ ಟ್ವೀಟ್ ಮಾಡಿದ್ದರು.
‘‘ಈ ಜನರ ಧೋರಣೆಯಿಂದ ನನಗೆ ಅಸಹ್ಯವಾಗುತ್ತದೆ. ಅದು ಕೂಡ ನನ್ನ ಹಿಂದೂ ತಾಯಿ ಹಾಗೂ ಮುಸ್ಲಿಂ ಗೆಳತಿಯೆದುರು. ನನ್ನ ಹೆಸರು ಹೇಝೆಲ್ ಕೀಚ್, ನಾನು ಹುಟ್ಟಿನಿಂದ ಹಿಂದೂ ಹಾಗೂ ಬೆಳೆದಿದ್ದು ಹಿಂದೂವಾಗಿ. ಆದರೆ ಈ ಬಗ್ಗೆ ವೆಸ್ಟರ್ನ್ ಯೂನಿಯನ್ ಏಕೆ ತಲೆ ಬಿಸಿ ಮಾಡಿಕೊಳ್ಳಬೇಕು. ನನ್ನ ಹಣ ಕೊಡಿ, ಆದರೆ ನನ್ನ ಹಣ ನನಗೆ ಸಿಗಲಿಲ್ಲ’’ ಎಂಬರ್ಥ ನೀಡುವ ಹಲವಾರು ಟ್ವೀಟ್ ಗಳನ್ನು ಆಕೆ ಮಾಡಿದ್ದಾರೆ.
ಆಕೆಯ ವುಡ್ ಬಿ ಯುವರಾಜ್ ಸಿಂಗ್ ಕೂಡ ಆಕೆಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು. ‘‘ವೆಸ್ಟರ್ನ್ ಯೂನಿಯನ್‌ನಿಂದ ಆಘಾತಕಾರಿ ವರ್ತನೆ. ನಾವೆಲ್ಲರೂ ಮನುಷ್ಯರು ಎಂಬುದಷ್ಟೇ ಅವರಿಗೆ ಸಾಕಾಗದೇ ? ಜನಾಂಗೀಯ ಬೇಧಭಾವವನ್ನು ಸಹಿಸಲಾಗುವುದಿಲ್ಲ, ಆತನ ವಿರುದ್ಧ ಕಠಿಣ ಕ್ರಮ ನಿರೀಕ್ಷಿಸುತ್ತೇವೆ’’ ಎಂದು ಟ್ವೀಟ್ ಮಾಡಿದ್ದಾರೆ ಯುವರಾಜ್.