ಟ್ಯಾಂಕರ್ ಹಗರಣ ರಾಜಕೀಯ ಪ್ರೇರಿತ ಸಂಚು: ಶೀಲಾ ದೀಕ್ಷಿತ್

Update: 2016-09-01 11:36 GMT

ಅಲಹಾಬಾದ್,ಸೆ.1: ದಿಲ್ಲಿಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಟ್ಯಾಂಕರ್ ಹಗರಣ ರಾಜಕೀಯ ಪ್ರೇರಿತ ಷಡ್ಯಂತ್ರವಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಅವರ ಚುನಾವಣಾ ಪ್ರಚಾರಕ್ಕೆ ಹಾನಿಯೊಡ್ಡುವುದು ಈ ಸಂಚಿನ ಹಿಂದೆ ಇರುವ ದುರುದ್ದೇಶವಾಗಿದೆ ಎಂದು ಅವರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ತಾನು ಉತ್ತರಪ್ರದೇಶದ ಚುನಾವಣಾ ಪ್ರಚಾರದಲ್ಲಿ ವ್ಯಸ್ತವಾಗಿರುವ ಸಮಯವನ್ನು ನೋಡಿ ’ಟ್ಯಾಂಕರ್ ಹಗರಣವನ್ನು’ ಎತ್ತಲಾಗಿದೆ ಎಂದು ಅವರು ಹೇಳಿದ್ದಾರೆ. ಶೀಲಾದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗ ಅವಧಿಯಲ್ಲಿ ದಿಲ್ಲಿ ಜಲ ಮಂಡಳಿ ಸ್ಟೈನ್‌ಲೆಸ್‌ಸ್ಟೀಲ್ ವಾಟರ್ ಟ್ಯಾಂಕರನ್ನು ನಿಯಮಬಾಹಿರವಾಗಿ ಖರೀದಿಸಿತ್ತು ಎಂದು ಅವರ ವಿರುದ್ಧ ಆರೋಪ ಹೊರಿಸಲಾಗುತ್ತಿದೆ. "ನಿಯಮಬಾಹಿರ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಆದರೆ ಆಮ್‌ಆದ್ಮಿಪಾರ್ಟಿಕೂಡಾ ಟ್ಯಾಂಕರ್‌ನ ಗುಣಮಟ್ಟದ ಕುರಿತು ಆರೋಪ ಎತ್ತಲು ಸಾಧ್ಯವಿಲ್ಲ. ಯಾಕೆಂದರೆ ತನ್ನ ಅಧಿಕಾರಾವಧಿಯಲ್ಲಿ ಖರೀದಿಸಿದ ಟ್ಯಾಂಕರ್‌ನ್ನೆ ಈಗ ನೀರು ಸರಬರಾಜಿಗೆ ಉಪಯೋಗಿಸಲಾಗುತ್ತಿದೆ" ಎಂದು ಶೀಲಾ ದೀಕ್ಷಿತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆಂದು ವರದಿಯಾಗಿದೆ. ಪಕ್ಷದ ಪ್ರಚಾರ ಅಭಿಯಾನದ ಪ್ರಮುಖರಾದ ಸಂಜಯ್‌ಸಿಂಗ್ ಮತ್ತು ಮಾಜಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಶಾಸಕಿ ರೀಟಾ ಬಹುಗುಣ ಜೋಶಿ ಮತ್ತು ಹಿರಿಯ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ನಂತರ ಶೀಲಾದೀಕ್ಷಿತ್ ಉತ್ತರಪ್ರದೇಶದ ನೆರೆಗ್ರಸ್ತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುವ ವಾಹನಗಳಿಗೆ ಹಸಿರುನಿಶಾನೆ ತೋರಿಸಿ ಬೀಳ್ಕೊಟ್ಟಿದ್ದಾರೆ. ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶೀಲಾ ದೀಕ್ಷಿತ್ "ಪ್ರಿಯಾಂಕಾಗಾಂಧಿ ಇದ್ದರೆ ಪಕ್ಷದ ಕಾರ್ಯಕರ್ತರು ಮಾತ್ರವಲ್ಲ ಸಾಮಾನ್ಯ ಜನರು ಕೂಡಾ ಉತ್ಸಾಹಿತರಾಗುತ್ತಾರೆ" ಎಂದು ನಿಸ್ಸಂಕೋಚವಾಗಿ ಹೇಳಿದ್ದಾರೆ. "ಆದರೆ ಪ್ರಿಯಾಂಕಾ ಯಾವಾಗ ಪಕ್ಷದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಅವರ ತೀರ್ಮಾನವಾಗಿದ್ದು ನಾವು ಅದನ್ನು ಗೌರವಿಸಬೇಕಾಗಿದೆ" ಎಂದು ಶೀಲಾ ನುಡಿದಿದ್ದಾರೆ. ಬಿಜೆಪಿಯ ಅಯೋಧ್ಯೆಯ ರಾಮಮಂದಿರ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ಅವರು ಟೀಕಿಸಿದ್ದಾರೆ. ಕಾಂಗ್ರೆಸ್ 27ವರ್ಷಗಳ ಹಿಂದೆ ಅಧಿಕಾರದಿಂದ ಹೊರಗಾದ ಬಳಿಕ ಆಳ್ವಿಕೆ ನಡೆಸಿದ ಎಲ್ಲ ಪಕ್ಷಗಳಿಂದ ಉತ್ತರಪ್ರದೇಶದ ಜನರು ಬೇಸತ್ತಿದ್ದಾರೆಂದು ಶೀಲಾ ಹೇಳಿದ್ದಾರೆ.

ದಶಕಗಳ ಹಿಂದೆ ಬಾಬರಿ ಮಸೀದಿಯನ್ನು ಕೆಡವಿ ಹಾಕಿದ ದುಃಖಕರ ಘಟನೆ ಸಂಭವಿಸಿತು. ಅಲ್ಲಿಂದ ಬಿಜೆಪಿ ರಾಮಮಂದಿರ ಕಟ್ಟುವ ಭರವಸೆ ನೀಡುತ್ತಾ ಬಂದಿದೆ. ಅದೀಗ ಸಂಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಬಂದು ಎರಡು ವರ್ಷಕ್ಕಿಂತ ಹೆಚ್ಚು ಸಮಯ ಕಳೆಯಿತು. ಆದರೆ ಈ ವಿಷಯದಲ್ಲಿ ಒಂದು ಇಂಚು ಕೂಡಾ ಅದು ಮುಂದೆ ಹೋಗಿಲ್ಲ ಎಂದು ಶೀಲಾ ದೀಕ್ಷಿತ್ ಟೀಕಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News