ಕೇಂದ್ರ ಕಾರ್ಮಿಕ ನೀತಿ ವಿರೋಧಿಸಿ ಸೆ.2ರಂದು ಭಾರತ್ ಬಂದ್

Update: 2016-09-01 13:56 GMT

ಬೆಂಗಳೂರು, ಸೆ. 1: ಕೇಂದ್ರ ಕಾರ್ಮಿಕ ನೀತಿ ಹಾಗೂ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ವಿರೋಧಿಸಿ, 18 ಸಾವಿರ ರೂ.ಕನಿಷ್ಠ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ನಾಳೆ(ಸೆ.2) ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ.

ಆಸ್ಪತ್ರೆ, ಆ್ಯಂಬುಲೆನ್ಸ್, ಮೆಡಿಕಲ್ ಶಾಪ್, ಹಾಲು, ಪೇಪರ್ ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸೇವೆ ದೊರೆಯುವುದಿಲ್ಲ. ಮುಷ್ಕರಕ್ಕೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳು ಸೇರಿದಂತೆ ನೂರಕ್ಕೆ ಹೆಚ್ಚು ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಘೋಷಿಸಿವೆ.

ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಅಲ್ಲದೆ, ಖಾಸಗಿ ಸಾರಿಗೆ ವ್ಯವಸ್ಥೆಯಲ್ಲಿಯೂ ಸಂಪೂರ್ಣ ವ್ಯತ್ಯಯ ಆಗುವ ಸಾಧ್ಯತೆಗಳಿವೆ. ಸೆ.2ರ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮುಷ್ಕರ ನಡೆಯಲಿದ್ದು, ಸಾರ್ವಜನಿಕರಿಗೆ ಬಿಸಿ ಬಲವಾಗಿಯೇ ತಟ್ಟಲಿದೆ.

ಮುಷ್ಕರಕ್ಕೆ ಆಟೋರಿಕ್ಷಾ, ಟ್ಯಾಕ್ಸಿ, ಕ್ಯಾಬ್ ಮಾಲಕರು ಹಾಗೂ ಚಾಲಕರು ಬೆಂಬಲ ಘೋಷಿಸಿದ್ದಾರೆ. ಈ ಮಧ್ಯೆ ಮುಷ್ಕರದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಸಂಬಂಧ ಆಯಾ ಜಿಲ್ಲಾಧಿಕಾರಿಗಳ ತೀರ್ಮಾನಕ್ಕೆ ಬಿಟ್ಟಿದ್ದು, ಖಾಸಗಿ ಶಾಲೆಗಳ ಆಡಳಿತ ಮಂಡಳಿ ರಜೆ ನೀಡಿಲ್ಲ.

ಸೆ.2ರ ಶುಕ್ರವಾರ ಮುಷ್ಕರ ನಡೆಯಲಿದ್ದು, ಶನಿವಾರ ಮತ್ತು ರವಿವಾರ ವಾರಂತ್ಯದ ರಜೆ, ಸೋಮವಾರ ಗಣೇಶ ಚತುರ್ಥಿ ರಜೆ ಸೇರಿದಂತೆ ನಾಲ್ಕು ದಿನಗಳ ರಜೆ ದೊರೆಯಲಿದೆ. ಈ ನಡುವೆ ಐಟಿ-ಬಿಟಿ ಕಂಪೆನಿಗಳಿಗೂ ವಾರಂತ್ಯವಾಗಿದ್ದು, ಸರಕಾರಿ ನೌಕರರಿಗೆ ಸರಣಿ ರಜೆ ಸಿಗಲಿದೆ.

ಕಾರ್ಮಿಕ ಸಂಘಟನೆಗಳ ಮುಷ್ಕರ ಹಿನ್ನೆಲೆಯಲ್ಲಿ ಹೊರ ಊರುಗಳಿಗೆ ತೆರಳುವ ಸಾರ್ವಜನಿಕ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡುವುದು ಸೂಕ್ತ. ತಮ್ಮ ಸ್ವಂತ ವಾಹನಗಳಲ್ಲಿ ಅನಿವಾರ್ಯವಿದ್ದರೆ ಮಾತ್ರ ಪ್ರಯಾಣಿಸಬಹುದು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಲಿದೆ.

‘ಕೇಂದ್ರದ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ(ಸೆ.2) ಬೆಳಗ್ಗೆ 6ರಿಂದ ಸಂಜೆ 6ಗಂಟೆ ವರೆಗೆ ಕರೆ ನೀಡಿರುವ ಅಖಿಲ ಭಾರತ ಮುಷ್ಕರದಲ್ಲಿ 15 ಕೋಟಿಗೂ ಅಧಿಕ ಸಾರಿಗೆ ನೌಕರರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಕರಣಗೊಳಿಸುವ ಜನ ವಿರೋಧಿ ಕ್ರಮವನ್ನು ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ’

-ಎಚ್.ಡಿ.ರೇವಪ್ಪ ಅಧ್ಯಕ್ಷ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಫೆಡರೇಷನ್

‘ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, 18 ಸಾವಿರ ರೂ. ಕನಿಷ್ಠ ವೇತನ ನಿಗದಿ, ಬೆಲೆ ಏರಿಕೆ ತಡೆಗಟ್ಟುವುದು ಸೇರಿದಂತೆ 14 ಬೇಡಿಕೆಗಳನ್ನು ಮುಂದಿಟ್ಟು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬಂದ್ ಕರೆ ನೀಡಿದ್ದು, ಸಾರಿಗೆ ನಿಗಮಗಳ ನೌಕರರು, ಕೈಗಾರಿಕಾ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ’

-ಎಚ್.ವಿ.ಅನಂತ ಸುಬ್ಬರಾವ್ ಅಧ್ಯಕ್ಷ ಎಐಟಿಯುಸಿ

ಕಾರಣ

-ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ರದ್ದು

-ಬೆಲೆ ಏರಿಕೆ ತಡೆಗಟ್ಟಿ

-ನಿರುದ್ಯೋಗ ನಿವಾರಿಸಿ

-18 ಸಾವಿರ ರೂ.ಕನಿಷ್ಠ ವೇತನ

-ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಆಗ್ರಹ

-ಕಾರ್ಮಿಕ ಕಾಯ್ದೆ ತಿದ್ದುಪಡಿ, ಗುತ್ತಿಗೆ ಪದ್ದತಿ,

ರೈಲ್ವೆ, ರಕ್ಷಣೆ, ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ವಿರೋಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News