ಅಡುಗೆ ಅನಿಲ ಸಿಲಿಂಡರ್‌ಗೆ ರೂ. 2 ಏರಿಕೆ

Update: 2016-09-01 14:29 GMT

ಹೊಸದಿಲ್ಲಿ, ಸೆ.1: ಸಬ್ಸಿಡಿ ಅಡುಗೆ ಅನಿಲದ(ಎಲ್ಪಿಜಿ) ದರವನ್ನು ಗುರುವಾರ ಸಿಲಿಂಡರ್‌ಗೆ ರೂ. 2ರಷ್ಟು ಏರಿಸಲಾಗಿದೆ. ಇದು ಜುಲೈಯಿಂದೀಚೆಗೆ ಮೂರನೆ ಬಾರಿಯ ಏರಿಕೆಯಾಗಿದೆ. ಇದೇ ವೇಳೆ, ವಿಮಾನ ಇಂಧನದ ಬೆಲೆಯನ್ನು ಶೇ.3.8ರಷ್ಟು ಕಡಿತಗೊಳಿಸಲಾಗಿದೆ.
ಇದರಿಂದಾಗಿ, ಈ ಮೊದಲು ದಿಲ್ಲಿಯಲ್ಲಿ 14.2 ಕಿ.ಗ್ರಾಂ ಸಿಲಿಂಡರ್‌ಗೆ ರೂ. 423.09 ಇದ್ದುದು ರೂ. 425.06ಕ್ಕೆ ಹೆಚ್ಚಳವಾಗಿದೆ.
ಸಬ್ಸಿಡಿಯ ಹೊರೆಯನ್ನು ತಗ್ಗಿಸುವುದಕ್ಕಾಗಿ ಸರಕಾರವು ಅಡುಗೆ ಅನಿಲದ ಬೆಲೆಯನ್ನು ಪ್ರತಿ ತಿಂಗಳು ಸ್ವಲ್ಪ ಸ್ವಲ್ಪವೇ ಹೆಚ್ಚಿಸಲು ನಿರ್ಧರಿಸಿವೆ.
 ಸೀಮೆಣ್ಣೆಯ ಬೆಲೆಯನ್ನು 10 ತಿಂಗಳ ಕಾಲ ಪ್ರತಿ ತಿಂಗಳು 25 ಪೈಸೆಗಳಷ್ಟು ಏರಿಸಲು ಸರಕಾರವು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಅನುಮತಿ ನೀಡಿದೆ. ಇಂದಿನದು ಮೂರನೆ ಬಾರಿಯ ಬೆಲೆ ಹೆಚ್ಚಳವಾಗಿದ್ದು, ಮುಂಬೈಯಲ್ಲಿ 1ಲೀ. ಸೀಮೆಣ್ಣೆಗೆ ರೂ. 15.93 ಬೆಲೆಯಾಗಿದೆ. ದಿಲ್ಲಿಯನ್ನು ಸೀಮೆಣ್ಣೆ ಮುಕ್ತ ನಗರವೆಂದು ಘೋಷಿಸಿರುವುದರಿಂದ ಅಲ್ಲಿ ಪಡಿತರ ಸೀಮೆಣ್ಣೆ ದೊರೆಯುವುದಿಲ್ಲ.
ಇದೇ ವೇಳೆ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆಯನ್ನು 14.2 ಕಿ.ಗ್ರಾಂ ಸಿಲಿಂಡರ್‌ಗೆ ರೂ. 20.50ರಷ್ಟು ಇಳಿಸಲಾಗಿದೆ. ದಿಲ್ಲಿಯಲ್ಲಿ ರೂ.487 ಇದ್ದ ಸಿಲಿಂಡರ್ ಈಗ ರೂ. 466.50ಕ್ಕೆ ದೊರೆಯುತ್ತದೆ.
ಎರಡನೆ ಬಾರಿ ವಿಮಾನ ಇಂಧನದ ಬೆಲೆಯನ್ನು ಶೇ.3.8ರಷ್ಟು ಕಡಿತಗೊಳಿಸಲಾಗಿದ್ದು, ದಿಲ್ಲಿಯಲ್ಲಿ ಕಿಲೋ ಲೀಟರ್‌ಗೆ ರೂ. 1,795.50 ರಷ್ಟು ಬೆಲೆ ಇಳಿಕೆಯಾಗಿದೆ. ಇದುವರೆಗೆ ವಿಮಾನ ಇಂಧನದ ಬೆಲೆ ಅಲ್ಲಿ ಕಿಲೋಲೀಟರ್‌ಗೆ ರೂ. 46.206.68 ಇತ್ತು.
ಸಬ್ಸಿಡಿ ರಹಿತ ಸೀಮೆಣ್ಣೆ ಬೆಲೆಯನ್ನು ಲೀ.ಗೆ ರೂ. 48.41ರಿಂದ ರೂ. 51.07ಕ್ಕೆ ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News