ಗೋವಾದ 400ಕ್ಕೂ ಹೆಚ್ಚು ಆರೆಸ್ಸೆಸ್ ಸದಸ್ಯರ ರಾಜೀನಾಮೆ

Update: 2016-09-01 14:21 GMT

ಪಣಜಿ, ಸೆ.1: ಗೋವಾ ಆರೆಸ್ಸೆಸ್ ಮುಖ್ಯಸ್ಥನ ಉಚ್ಚಾಟನೆಯನ್ನು ಪ್ರತಿಭಟಿಸಿ ಜಿಲ್ಲೆ, ಉಪಜಿಲ್ಲೆ ಹಾಗೂ ಶಾಖಾ ಮುಖ್ಯಸ್ಥರ ಸಹಿತ 400ಕ್ಕೂ ಹೆಚ್ಚು ಆರೆಸ್ಸೆಸ್ ಕಾರ್ಯಕರ್ತರು ಬುಧವಾರ ಸಂಘಟನೆಗೆ ರಾಜೀನಾಮೆ ನೀಡಿದ್ದಾರೆ.
ಪಣಜಿಯ ಸಮೀಪದ ಶಾಲಾ ಸಂಕೀರ್ಣವೊಂದರಲ್ಲಿ 6 ತಾಸುಗಳ ಸುದೀರ್ಘ ಸಭೆಯ ಬಳಿಕ ಈ ಸಾಮೂಹಿಕ ರಾಜೀನಾಮೆಗಳು ಸಲ್ಲಿಕೆಯಾಗಿವೆ. ರಾಜ್ಯದ ಪ್ರಭಾವಿ ಆರೆಸ್ಸೆಸ್ ನಾಯಕ ಸುಭಾಶ್ ವೆಲಿಂಗ್ಕರ್‌ರನ್ನು ಉಚ್ಚಾಟಿಸಲು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಸಹಿತ ಆರೆಸ್ಸೆಸ್ ಹಾಗೂ ಬಿಜೆಪಿಯ ಉನ್ನತ ನಾಯಕರು ಪಿತೂರಿ ನಡೆಸಿದ್ದರೆಂದು ಈ ಸಭೆಯಲ್ಲಿ ಆರೋಪಿಸಲಾಗಿದೆ.
ಸಭೆಯಲ್ಲಿ ಸಂಘದ ಕೊಂಕಣ ವಲಯದ ಪದಾಧಿಕಾರಿಗಳು ಸಹಿತ ಹಲವು ಸ್ವಯಂ ಸೇವಕರು ಭಾಗವಹಿಸಿದ್ದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೆಸ್ಸೆಸ್‌ನ ದಕ್ಷಿಣ ಜಿಲ್ಲಾ ಪ್ರಮುಖ್ ರಾಮದಾಸ್ ಸರಾಫ್, ವೆಲಿಂಗ್ಕರ್‌ರನ್ನು ಮರಳಿ ಸೇರಿಸಿಕೊಳ್ಳೂವ ವರೆಗೆ ಆರೆಸ್ಸೆಸ್ ತ್ಯಜಿಸಲು ಜಿಲ್ಲಾ ಘಟಕಗಳು, ಉಪಜಿಲ್ಲಾ ಘಟಕಗಳು ಹಾಗೂ ಶಾಖೆಗಳ ಎಲ್ಲ ಪದಾಧಿಕಾರಿಗಳು ಹಾಗೂ ಇತರರು ನಿರ್ಧರಿಸಿದ್ದೇವೆ ಎಂದರು.
  ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಅಳವಡಿಸುವ ನೀತಿಯನ್ನು ಗೋವಾದ ಬಿಜೆಪಿ ಸರಕಾರ ಅನುಸರಿಸುತ್ತಿದೆ. ಕೊಂಕಣಿ ಹಾಗೂ ಮರಾಠಿ ಸೇರಿದಂತೆ ಪ್ರಾದೇಶಿಕ ಭಾಷಾ ಶಿಕ್ಷಣ ಮಾಧ್ಯಮಕ್ಕೆ ಉತ್ತೇಜನ ನೀಡಲು ಹೊಸ ಪಕ್ಷವೊಂದನ್ನು ಸ್ಥಾಪಿಸಲಾಗುವುದೆಂದು ಘೋಷಿಸಿದ್ದ ವೆಲಿಂಗ್ಕರ್‌ರನ್ನು ಗೋವಾ ವಿಭಾಗ ಸಂಘ ಚಾಲಕನ ಹುದ್ದೆಯಿಂದ ಬುಧವಾರ ಅಮಾನತು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News