ಕೆರ್ರಿ ವಾಸ್ತವ್ಯವಿದ್ದ ಹೊಟೇಲ್‌ನಲ್ಲಿ ದಾಂಧಲೆ: ಓರ್ವನ ಸೆರೆ
ಹೊಸದಿಲ್ಲಿ, ಸೆ.1: ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಉಳಿದುಕೊಂಡಿದ್ದ ಹೊಟೇಲ್‌ನಲ್ಲಿ ದಾಂಧಲೆ ನಡೆಸಲು ಯತ್ನಿಸಿದ 53ರ ಹರೆಯದ ‘ಮಾನಸಿಕ ಅಸ್ಥಿರ’ ವ್ಯಕ್ತಿಯೊಬ್ಬನನ್ನು ವಶಪಡಿಸಿಕೊಳ್ಳಲಾಗಿದೆ. ಆತನ ಕೈಯಲ್ಲಿ ಬ್ಲೇಡ್ ಒಂದಿತ್ತೆಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಹರ್ಯಾಣದ ನಿವಾಸಿ ಉದಯ್ ರಾತ್ರಾ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಪಂಚತಾರಾ ಹೊಟೇಲ್‌ನ ಪಡಸಾಲೆಯಲ್ಲಿ ತಿರುಗಾಡುತ್ತಿದ್ದ ಆತನನ್ನು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಆಕ್ಷೇಪಿಸಿದಾಗ ಅವನು ಅವರೊಂದಿಗೆ ಜಗಳಾಡಿದನೆಂದು ಪೊಲೀಸರು ಹೇಳಿದ್ದಾರೆ.
ಆತ ಮಾನಸಿಕ ಅಸ್ಥಿರ ವ್ಯಕ್ತಿಯಾಗಿದ್ದನು. ಆತ ಹೊಟೇಲ್‌ನ ಜಗಲಿಯಲ್ಲಿ ಅತ್ತಿತ್ತ ಅಲೆಯುತ್ತಿದ್ದ. ಈ ಹಿಂದೆಯೂ ಆತ ವಿದೇಶಿ ಗಣ್ಯರು ಅಲ್ಲಿಗೆ ಬಂದಿದ್ದಾಗ ಆವರಣದೊಳಗೆ ನುಗ್ಗಲು ಯತ್ನಿಸಿದ್ದನು. ಅದರಿಂದಾಗಿ ಹೊಟೇಲ್ ಸಿಬ್ಬಂದಿಗೆ ಆತ ಪರಿಚಿತನಾಗಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ರಾತ್ರಾನಿಗೆ ಅಲ್ಲಿಂದ ಹೊರ ನಡೆಯುವಂತೆ ಸೂಚಿಸಿದಾಗ ಆತ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಜಗಳಕ್ಕೆ ನಿಂತನು. ಹೊಟೇಲ್ ಸಿಬ್ಬಂದಿ ಸರೋಜಿನಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ಅಲ್ಲಿಗೆ ಧಾವಿಸಿದ ಪೊಲೀಸರು, ಹೆಚ್ಚಿನ ರಾದ್ಧಾಂತ ನಡೆಸುವ ಮೊದಲೇ ರಾತ್ರಾನನ್ನು ವಶಕ್ಕೆ ತೆಗೆದುಕೊಂಡರೆಂದು ಅವರು ಹೇಳಿದ್ದಾರೆ.
ರಾತ್ರಾನಿಗೆ ಜಾನ್ ಕೆರ್ರಿ ಅಲ್ಲಿರುವ ವಿಚಾರ ತಿಳಿದಿರಲಿಲ್ಲ. ಅದೊಂದು ಕಾಕತಾಳೀಯ ಘಟನೆಯಾಗಿತ್ತು. ಆತನನ್ನು ಶೋಧಿಸಿದಾಗ ಬ್ಲೇಡೊಂದು ಪತ್ತೆಯಾಯಿತೆಂದು ಅಧಿಕಾರಿ ತಿಳಿಸಿದ್ದಾರೆ.