ದಿಲ್ಲಿ: ನಿಲ್ಲದ ವರುಣನ ಆರ್ಭಟ
Update: 2016-09-01 23:53 IST
ಹೊಸದಿಲ್ಲಿ,ಸೆ.1: ರಾಷ್ಟ್ರದ ರಾಜಧಾನಿ ಹೊಸದಿಲ್ಲಿಯಲ್ಲಿ ಮಳೆಯ ಆರ್ಭಟ ಸತತ ಎರಡನೆಯ ದಿನವೂ ಮುಂದುವರಿದಿದ್ದು, ಗುರುವಾರ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ದಿಲ್ಲಿಯಲ್ಲಿ ನಿನ್ನೆ ಸಂಜೆ 5:30ರವರೆಗೆ 6.31 ಮಿ.ಮೀ. ಮಳೆಯಾಗಿದ್ದು, ಇದು ಈ ಮುಂಗಾರಿನಲ್ಲೇ ಅತ್ಯಂತ ಗರಿಷ್ಠವಾಗಿದೆ.
ಎಡೆಬಿಡದೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾದರು. ಗುರ್ಗಾಂವ್ ಹಾಗೂ ವಿಮಾನನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲೂ ನೆರೆ ನೀರು ಹರಿದ ಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿ ಟ್ರಾಫಿಕ್ ಜಾಮ್ ಸಂಭವಿಸಿದೆ.
ಮುಂದಿನ 24 ತಾಸುಗಳಲ್ಲಿ ರಾಷ್ಟ್ರ ರಾಜಧಾನಿಯ ವಿವಿಧೆಡೆ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.